ಎಚ್ ಡಿ ಕೋಟೆಯಲ್ಲಿ ಹಾಡಹಗಲೇ ಯುವಕನ ಮೇಲೆ ಚಿರತೆ ದಾಳಿ
ಮೈಸೂರು, ಮಾರ್ಚ್ 6: ಹಾಡಹಗಲೇ ಚಿರತೆಯೊಂದು ಆಡುಗಳನ್ನು ಮೇಯಿಸುತ್ತಿದ್ದ ಯುವಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಎಚ್ ಡಿ ಕೋಟೆ ಗ್ರಾಮದಲ್ಲಿ ಜರುಗಿದೆ.
ಜೋನಿಗಿರಿ ಬೀದಿಯಲ್ಲಿರುವ ಮಖಾನ್ ಹತ್ತಿರ ಯರಹಳ್ಳಿ ಗ್ರಾಮದ ಸುರೇಶ್ (25) ತಮ್ಮ ಆಡುಗಳನ್ನು ಪಾಳು ಬಿದ್ದಿರುವ ಜಮೀನಿನಲ್ಲಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಪೊದೆಯಿಂದ ಬಂದ ಚಿರತೆ ದಿಢೀರನೆ ಆಡುಗಳ ಮೇಲೆ ದಾಳಿ ನಡೆಸಿದೆ.
ಇದರಿಂದ ಗಾಬರಿಗೊಂಡ ಸುರೇಶ್ ಚಿರತೆಯಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಆತನ ಮೇಲೂ ದಾಳಿ ನಡೆಸಿ ಭುಜ ಮತ್ತಿತರ ಭಾಗಗಳನ್ನು ಗಾಯಗೊಳಿಸಿದೆ. ಈ ವೇಳೆ ಸುರೇಶ ಭಯದಿಂದ ಕಿರುಚಿದ್ದಾನೆ. ಆತನ ಕಿರುಚಾಟ ಕೇಳಿ ತಾರಕ ನದಿ ಸಮೀಪದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಚಿರತೆ ಅಲ್ಲಿಂದ ಪರಾರಿಯಾಗಿದೆ.

ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪುರಸಭೆ ಸದಸ್ಯರು ಚಿರತೆಯಿಂದ ದಾಳಿಗೊಳಗಾಗಿದ್ದ ಸುರೇಶ್ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಚಿರತೆ ದಾಳಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಪಂಜರ ಇರಿಸಿದ್ದಾರೆ.












Click it and Unblock the Notifications