ಭಾರೀ ಮಳೆಗೆ ಸೋರುತಿಹುದು ಮೈಸೂರು ಅರಮನೆ..!
ಮೈಸೂರು, ಸೆಪ್ಟೆಂಬರ್ 29 : ಕಳೆದ 3 ದಿನಗಳಿಂದ ಸುರಿದ ಭಾರೀ ಮಳೆಗೆ ತತ್ತರಿಸಿದ್ದ ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಸಹಜಸ್ಥಿತಿಯತ್ತ ಮರಳುತ್ತಿದೆ. ಆದರೆ, ಮಳೆಯ ಪರಿಣಾಮ ಮೈಸೂರು ಅರಮನೆಗೆ ತಟ್ಟಿದೆ.
ಹೌದು, ಮೈಸೂರು ದಸರಾ ಮಹೋತ್ಸವ ಕಳೆಗಟ್ಟಿದ ಬೆನ್ನಲ್ಲೆ ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ಅರಮನೆಯ ಛಾವಣಿ ಸೋರುತ್ತಿದೆ. ಅರಮನೆಯ ದರ್ಬಾರ್ ಹಾಲ್ ಮತ್ತು ಕಲ್ಯಾಣ ಮಂಟಪದಲ್ಲಿ ನೀರು ಸೋರುತ್ತಿದೆ. ನೆಲಕ್ಕೆ ಹಾಕಿರುವ ಮ್ಯಾಟ್ ಗಳು ಮಳೆ ನೀರು ನಿಂತು ಒದ್ದೆಯಾಗಿವೆ.

ನಾಡಹಬ್ಬ ದಸರಾ ನಡೆಯುತ್ತಿರುವಾಗಲೇ ಅರಮನೆಗೆ ಈ ದುಸ್ಥಿತಿ ಬಂದಿದೆ. ದರ್ಬಾರ್ ಹಾಲ್ ನಲ್ಲೇ ರತ್ನ ಖಚಿತ ಸಿಂಹಾಸನ ಪ್ರತಿಷ್ಠಾಪನೆ ಮಾಡಲಾಗಿದ್ದು, ಸಿಂಹಾಸನ ವೀಕ್ಷಿಸಲು ಹೋದ ಪ್ರವಾಸಿಗರಿಗೆ ಮಳೆ ನೀರು ಸೋರುತ್ತಿರುವುದು ತಿಳಿದುಬಂದಿದೆ.
ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು
ದಸರಾ ಮಹೋತ್ಸವಕ್ಕೆ ಕೋಟಿ-ಕೋಟಿ ಖರ್ಚು ಮಾಡುವ ಸರ್ಕಾರಕ್ಕೆ ಅರಮನೆ ಬಗ್ಗೆ ಕಾಳಜಿಯೇ ಇಲ್ಲದಂತಾಗಿದೆ. ಇನ್ನು ದರ್ಬಾರ್ ಹಾಲ್, ಕಲ್ಯಾಣ ಮಂಟಪ ದುರಸ್ತಿಗೆ ಅರಮನೆ ಮಂಡಳಿಯೂ ಸಹ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಮೈಸೂರು ಅರಮನೆಯಲ್ಲಿ ಮಳೆ ಬಂದಾಗ 3 ರಿಂದ 4 ಕಡೆ ನೀರು ಸೋರುತ್ತಿರೋದು ನಿಜ. ಅರಮನೆ ದುರಸ್ತಿ ಮಾಡಿಸಲು ಸಾಧ್ಯವಾಗುತ್ತಿಲ್ಲ' ಎಂದು ಹೇಳಿದ್ದಾರೆ.
'ಮೇಲ್ಛಾವಣಿಯಲ್ಲಿ ಕೆಲವು ಕಡೆ ಗಾಜುಗಳು ಒಡೆದಿವೆ. ಆ ಜಾಗದಿಂದ ಮಳೆ ನೀರು ಬರುತ್ತಿದೆ. ಅವುಗಳನ್ನು ಟಾರ್ಪಲ್ ಹೊದಿಸಿ ಮುಚ್ಚಲಾಗಿದೆ. ಗ್ಲಾಸ್ ರೆಡಿ ಮಾಡುವವರು ಸಿಗುತ್ತಿಲ್ಲ ಅರಮನೆ ಮೆಲ್ಛಾವಣಿ ದುರಸ್ತಿಗೆ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಲಂಡನ್, ಜೈಪುರ್ ತಂತ್ರಜ್ಞರನ್ನ ಸಂಪರ್ಕಿಸಲಾಗಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications