ಧರ್ಮದ ಹೆಸರಲ್ಲಿ ಸಾವುಗಳಾದರೆ ರಾಜಕೀಯ ಲಾಭ ಎಂದು ಬಿಜೆಪಿ ನಂಬಿದೆ: ಎಚ್‌ಡಿಕೆ
ಮೈಸೂರು, ಜುಲೈ, 29: ಪ್ರವೀಣ್ ಹತ್ಯೆ ವಿಚಾರವಾಗಿ ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಇಂತಹ ಘಟನೆ ಬಿಜೆಪಿ ಅವರಿಗೆ ಒಳ್ಳೆಯ ರಾಜಕೀಯದ ಬೆಳೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದಲ್ಲಿ ಒಂದೇ ಭಾಗದಲ್ಲಿ 2 ಹತ್ಯೆಯಾಗಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ. ಇದರ ನಡುವೆಯೇ ಇದೀಗ ಆಡಳಿತ ಸರ್ಕಾರ ಬಿಜೆಪಿ ವಿರುದ್ಧ ವಿಪಕ್ಷಗಳು ಆಕ್ರೋಶ ಹೊರಹಾಕುತ್ತಲೇ ಇವೆ. ಬಿಜೆಪಿಯ ನಡೆಯನ್ನು ಖಂಡಿಸಿ ಕಿಡಿ ಕಾರುತ್ತಲೇ ಇವೆ. ಮತ್ತೊಂದೆಡೆ ಪಕ್ಷದ ಯುವ ಮೋರ್ಚಾ ಕಾರ್ಯಕರ್ತರ ರಾಜೀನಾಮೆಯ ಪರ್ವವೇ ಮುಂದುವರೆದಿದೆ. ರಾಜ್ಯದ ಹಲವೆಡೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಜೀನಾಮೆಯನ್ನು ಸಲ್ಲಿಸುತ್ತಲೇ ಇದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಹತ್ಯೆಗಳ ಬಗ್ಗೆ ಪ್ರತಿಕ್ರಿಯಿಸಿ ಬಿಜೆಪಿ ನಾಯಕರ ನಿಲುವುಗಳನ್ನು ಪ್ರಶ್ನಿಸಿ ತರಾಟೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಅಧಿಕಾರದ ಬಗ್ಗೆ ಜನರಲ್ಲಿ ವಿಶ್ವಾಸದ ಕೊರತೆ ಹೆಚ್ಚಾಗುತ್ತಿದೆ. ಎಲ್ಲಾ ಸಮಾಜದ ಧಾರ್ಮಿಕ ಸಭೆಗೆ ಸಲಹೆ ನೀಡಿ, ಸರ್ಕಾರ ಮೌನಕ್ಕೆ ಶರಣಾಗಿತ್ತು. ಶಾಂತಿ ನೆಲೆಸಲು ಗಮನ ಕೊಡಿ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ನನ್ನ ಮಾತನ್ನು ಅವರು ಕೇಳಲಿಲ್ಲ. ವಾರದಲ್ಲಿ ಒಂದೇ ಭಾಗದಲ್ಲಿ ಕೋಮು ಸಂಘರ್ಷದದಿಂದ 2 ಹತ್ಯೆಗಳಾಗಿವೆ ಎಂದು ಅಸಮಾಧಾನ ಹೊರಹಾಕಿದರು

'ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಗಲಭೆಗಳು ಹೆಚ್ಚು'
ಪ್ರವೀಣ್ ಅವರ ಕುಟುಂಬದ ಪರಿಸ್ಥಿತಿಯನ್ನು ಅವಲೋಕಿಸಬೇಕು. ವಯಸ್ಸಾದ ತಂದೆ, ತಾಯಿ ಆರೋಗ್ಯ ಸರಿಯಿಲ್ಲ, ಪ್ರವೀಣ್ ಅವರ ಪತ್ನಿ ಇನ್ನು ಚಿಕ್ಕ ವಯಸ್ಸಿನವರಾಗಿದ್ದಾರೆ. ಘಟನೆಯಿಂದ ಮನಸಿಗೆ ತುಂಬಾ ನೋವಾಗಿದೆ. ಇಂತಹ ವಾತಾವರಣ ಎಲ್ಲಿಯವರೆಗೂ? ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಗಲಭೆಗಳು ಆಗುತ್ತಲೇ ಇವೆ. ಸಮಾಜದಲ್ಲಿ ಶಾಂತಿ ಕದಡುತ್ತಿದೆ ಎಂದರು. ಶಿವಮೊಗ್ಗದ ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಎಲ್ಲಾ ಸವಲತ್ತುಗಳನ್ನು ನೀಡಲಾಗಿದೆ. ಇದೇನಾ ನಿಮ್ಮ ಆಡಳಿತ? ನಿಮ್ಮ ಆಡಳಿತದ ಸಾಧನೆ ಏನು? ಯಾವ ಪುರುಷಾರ್ಥಕ್ಕೆ ಸಮಾವೇಶಕ್ಕೆ ಸಿದ್ಧತೆ ಮಾಡಿದ್ದೀರಿ? ಇದು ಸಾವಿನ ಸಾಧನಾ ಸಮಾವೇಶನಾ? ಇನ್ನು ಎಷ್ಟು ಜನ ಅಮಾಯಕರು ಸಾಯಬೇಕು? ಎಂದು ಪ್ರಶ್ನಿಸುವುದರ ಮೂಲಕ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆರೋಪ
ಹಿಂದುತ್ವದ ಕಾರ್ಡ್ ಹೆಸರಿನಲ್ಲಿ ಮತ ಪಡೆಯಬಹುದೆಂಬುದು ಇವರ ಲೆಕ್ಕಾಚಾರವಾಗಿದೆ. ಸಾವುಗಳಾದರೆ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರ ಅವರದ್ದಾಗಿದೆ. ಕೃತಕ ಸಾಂತ್ವನ, ಆಕ್ರೋಶದ ಮಾತುಗಳಾಡಿದರೆ ಏನು ಬದಲಾವಣೆ ಆಗಲ್ಲ. ನಾನು ಸಿಎಂ ಆಗಿದ್ದಾಗ ಏಕೆ ಈ ರೀತಿ ಯಾವ ಗಲಭೆಗಳನ್ನು ಆಗುವುದಕ್ಕೆ ಬಿಟ್ಟಿರಲಿಲ್ಲ ಎಂದರು.

ಬಿಜೆಪಿ ಅಧಿಕಾರದ ವಿರುದ್ಧ ಕೆಂಡಾಮಂಡಲ
ಇನ್ನು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರದ ಬಗ್ಗೆ ಮಾತಾಡಿದ ಎಚ್.ಡಿ.ಕುಮಾರಸ್ವಾಮಿ, ಇಂತವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ ಮೇಲೆ ಈ ರೀತಿಯ ಮಾತುಗಳನ್ನು ಕೇಳಲೇಬೇಕು. ನಿಮ್ಮನ್ನು ಯಾರು ಗನ್ ಮ್ಯಾನ್ ಕೊಡಿ ಎಂದು ಕೇಳುವುದಿಲ್ಲ.
ಬದಲಾಗಿ ಶಾಂತಿಯುತವಾದ ನೆಮ್ಮದಿಯ ಆಡಳಿತ ಕೊಡಿ ಎಂದ ಕೇಳುತ್ತಾರೆ ಅಷ್ಟೇ. ಅದರಲ್ಲೂ ಇಂತಹ ಘಟನೆಗಳು ಚುನಾವಣೆ ವೇಳೆ ಹೆಚ್ಚಾಗಿ ನಡೆಯುತ್ತವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೇ ಇದಕ್ಕೆ ಮುಖ್ಯ ಉದಾಹರಣೆಯಾಗಿದೆ ಎಂದರು. ಹಿಂದೆ ಚುನಾವಣೆ ಸಮಯದಲ್ಲೂ ದೇಶದ ಎಲ್ಲಾ ಭಾಗದಲ್ಲೂ ಈ ರೀತಿ ಆಗಿದೆ. 2016ರ ಯುಪಿ ಚುನಾವಣೆ ಉದಾಹರಣೆ ನೀಡಿದ ಎಚ್.ಡಿ.ಕುಮಾರಸ್ವಾಮಿ, ಮುಜಾಫರ್ ನಗರದಲ್ಲಿ ಕೋಮು ಗಲಭೆ ಆಯ್ತು, ಇಂದಿಗೂ ಅದರ ಹಿಂದೆ ಇದ್ದವರು ಯಾರು? ಏಕೆ ಗಲಭೆ ಆಯಿತು? ಎನ್ನುವುದು ಗೊತ್ತಾಗಲಿಲ್ಲ ಎಂದರು.

'ಬಿಜೆಪಿ ಸರ್ಕಾರಕ್ಕೆ ಮುಕ್ತಿ ಕೊಡಬೇಕು'
ಬಿಜೆಪಿಯ ಬಣ್ಣ ಬಣ್ಣದ ಜಾಹಿರಾತು ನೋಡಿ ಮುಂದುವರಿದರೆ ಮತ್ತಷ್ಟು ಕೆಟ್ಟ ಕಾಲ ಬರಲಿದೆ. ಇವರಿಗೆ ಧರ್ಮದ ಹೆಸರಿನಲ್ಲಿ ಸಾವುಗಳಾದರೆ ಇವರಿಗೆ ರಾಜಕೀಯ ಲಾಭವಾದಂತೆ ಎಂದು ಬಿಜೆಪಿ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು. ಹಿಂದೂ ಧರ್ಮದ ಬದ್ಧತೆಯಿರುವ ಕುಟುಂಬದಲ್ಲಿ ಹತ್ಯೆಯಾದರೆ ಇವರಿಗೆ ರಾಜಕೀಯ ಫಸಲು ಎಂದರು. ಬಿಜೆಪಿ ಅವರಿಗೆ ಬದುಕು ಕಟ್ಟುವುದು ಬೇಡ ಇಂತಹ ಘಟನೆಯ ಮೇಲೆ ಸೌಧ ಕಟ್ಟಬೇಕು.
ರಾಜ್ಯದಿಂದ ಬಿಜೆಪಿ ಸರ್ಕಾರವನ್ನು ಬೇರು ಸಮೇತ ಕಿತ್ತು ಹಾಕಬೇಕು. ಅಲ್ಲಿಯವರೆಗೂ ಈ ಪರಿಸ್ಥಿತಿ ಬದಲಾಗುವುದಿಲ್ಲ ಎಂದು ಮೈಸೂರಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ನಿಲುವುಗಳನ್ನು ಖಂಡಿಸಿದರು.











Click it and Unblock the Notifications