ಕೆಂಪೇಗೌಡ ಪ್ರತಿಮೆ: ಮುಡುಕುತೊರೆಯಲ್ಲಿ ಮೃತ್ತಿಗೆ ಸಂಗ್ರಹ
ಮೈಸೂರು, ನವೆಂಬರ್ 01: ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ತಲಕಾಡು ಗಂಗ ವಂಶದ ಅರಸ ಶ್ರೀಪುರುಷನ ಸಮಾಧಿ ಸ್ಥಳವಿರುವ ತಾಲ್ಲೂಕಿನ ಮುಡುಕುತೊರೆಯಲ್ಲಿ ಮಂಗಳವಾರ ಪವಿತ್ರ ಮಣ್ಣು ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಜಗತ್ತಿನಲ್ಲಿ ಅಗ್ರಸ್ಥಾನದಲ್ಲಿದೆ ಎಂದರು.
ಕೆಂಪೇಗೌಡರ ನಿಮಿತ್ತವಾಗಿ ಇಡೀ ಕರ್ನಾಟಕವನ್ನು ಬೆಸೆಯುವ ಅರ್ಥಪೂರ್ಣ ಅಭಿಯಾನವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಪ್ರಪಂಚದ ಯಾವ ನಗರದಲ್ಲೂ ಅದರ ಸ್ಥಾಪಕನ 108 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿಲ್ಲ. ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಅನಾವರಣ ಗೊಳ್ಳಲಿರುವ ಕಂಚಿನ ಪ್ರತಿಮೆಯು ರಾಜ್ಯದ ಮಕುಟಮಣಿ ಆಗಲಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು.

ಗಂಗರ ಅರಸ ಶ್ರೀಪುರುಷನ ಸಮಾಧಿಯನ್ನು ಕೂಡ ಸರ್ಕಾರದ ವತಿಯಿಂದ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಕೆಂಪೇಗೌಡರ ಪ್ರಗತಿ ಪ್ರತಿಮೆ ಲೋಕಾರ್ಪಣೆ ಭಾಗವಾಗಿ ಮಣ್ಣು ಸಂಗ್ರಹ ಅಭಿಯಾನ ನಡೆದಿದೆ. ನವೆಂಬರ್ 11ರಂದು ಲೋಕಾರ್ಪಣೆ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅವರು ಆಮಂತ್ರಿಸಿದರು.
ಕೆಂಪೇಗೌಡರ ಹೆಸರು ಚಿರಸ್ಥಾಯಿ; ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಮಾತನಾಡಿ, "ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮುಚ್ಛಯದಲ್ಲಿ ಕೆಂಪೇಗೌಡರ 108 ಅಡಿ ಪ್ರತಿಮೆ ಸ್ಥಾಪಿಸುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲಾಗುತ್ತಿದೆ. ಇದಕ್ಕಾಗಿ ಅಶ್ವಥ್ ನಾರಾಯಣ ಅವರು ಪಟ್ಟಿರುವ ಶ್ರಮ ಅಪಾರವಾಗಿದೆ. ಜತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಯೋಜನೆಯ ಕಲ್ಪನೆಗೆ ಉದಾರವಾಗಿ ಸ್ಪಂದಿಸಿದ್ದಾರೆ" ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸುವ ಎಲ್ಲರಿಗೆ ವಿಮಾನ ನಿಲ್ದಾಣದಲ್ಲಿನ ಕೆಂಪೇಗೌಡರ ಪ್ರಗತಿ ಪ್ರತಿಮೆ ಮೂಲಕ ಅವರ ಮಹೋನ್ನತ ವ್ಯಕ್ತಿತ್ವವು ಗೊತ್ತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳಾ, ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ. ಉಮೇಶ್, ಮದ್ದೂರು ಸ್ವಾಮಿ, ಡಾ. ಭಾರತಿ ಶಂಕರ್, ಡಾ.ರವೀಂದ್ರ, ಚಂದಗಾಲು ಶಿವಣ್ಣ, ವಸಂತ್, ತಲಕಾಡು ಚಿಕ್ಕರಂಗೇಗೌಡ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications