ಬಿಜೆಪಿ ಕಾರ್ಯಕಾರಿಣಿಗೆ ತೆರೆ; ಕೊನೆಗೂ ಭಾಷಣ ಬಿಗಿದ ಈಶ್ವರಪ್ಪ
ಎಲ್ಲರ ಅಭಿಪ್ರಾಯಗಳನ್ನೂ ಸ೦ಗ್ರಹಿಸಿ, ಪಕ್ಷದ ಮು೦ದಿನ ಕಾರ್ಯಯೋಜನೆಯ ರೂಪರೇಷೆ ತಯಾರಿಸಲು ಕಾರ್ಯಕಾರಿಣಿ ಸಮಕ್ಷಮದಲ್ಲಿ ನಿರ್ಧರಿಸಲಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು.
ಮೈಸೂರು, ಮೇ 8: ಕಳೆದೆರಡು ದಿನಗಳಿಂದ ಮೈಸೂರಿನಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಭಾನುವಾರ ತೆರೆ ಬಿದ್ದಿದೆ. ಸಾಂಸ್ಕೃತಿಕ ನಗರಿಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಪಕ್ಷವನ್ನು ಇನ್ನೂ ಹೆಚ್ಚು ಬಲಿಷ್ಠವಾಗಿ ಸ೦ಘಟಿಸುವ ಕಾರ್ಯತ೦ತ್ರಗಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಮಾರೋಪ ಭಾಷಣ ಮಾಡಿದರು.
ಇನ್ನೂ ಎಲ್ಲರ ಅಭಿಪ್ರಾಯಗಳನ್ನೂ ಸ೦ಗ್ರಹಿಸಿ, ಪಕ್ಷದ ಮು೦ದಿನ ಕಾರ್ಯಯೋಜನೆಯ ರೂಪರೇಷೆ ತಯಾರಿಸಲು ಕಾರ್ಯಕಾರಿಣಿ ಸಮಕ್ಷಮದಲ್ಲಿ ನಿರ್ಧರಿಸಲಾಯಿತು. ಇದೇ ವೇಳೆ ಕೇ೦ದ್ರ ಸಚಿವರಾದ ನಿರ್ಮಾಲಾ ಸೀತಾರಾಮನ್ ಅವರನ್ನು ಗೌರವಿಸಲಾಯಿತು. [ಮಾಧ್ಯಮದವರೆದುರು ಮುಜುಗರಕ್ಕೀಡಾದ ಅರವಿಂದ ಲಿಂಬಾವಳಿ]

ಕಾರ್ಯಕಾರಿಣಿಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಕಾರ್ಯಕಾರಿಣಿಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟರು.
ಕಾರ್ಯಕಾರಣಿಯ ಕೊನೆಯ ದಿನ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪನವರಿಗೆ ಭಾಷಣ ಮಾಡಲು ಅವಕಾಶ ಮಾಡಿಕೊಟ್ಟಿದ್ದು ವಿಶೇಷವಾಗಿತ್ತು. ಭಾಷಣದುದ್ದಕ್ಕೂ ಈಶ್ವರಪ್ಪ ಬಿಎಸ್ವೈ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. [In Pics: ಮೈಸೂರಿನಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ]

ಕೊನೆಗೂ ಈಶ್ವರಪ್ಪರಿಂದ ಭಾಷಣ
ರಾಜ್ಯ ಬಿಜೆಪಿಯ ಕಾರ್ಯಕಾರಣಿ ಸಭೆಯ ಎರಡನೆಯ ದಿನವಾದ ಭಾನುವಾರ ಬಿಜೆಪಿ ಬಣ-ಜಗಳ ಪರೋಕ್ಷವಾಗಿ ಸುಳಿದಾಡಿತು. ಕಾರ್ಯಕಾರಣಿಯಲ್ಲಿ ಮಾತನಾಡುವಾಗ ಕೆ.ಎಸ್.ಈಶ್ವರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರನ್ನು "ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರೇ" ಎಂದು ಮೂರು ಬಾರಿ ಕರೆಯುವ ಮೂಲಕ "ನೀವಿನ್ನೂ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಷ್ಟೇ. ನಮ್ಮ ಮುಂದೆ ಚುನಾವಣೆ ಇದೆ. ನಾವು ಚುನಾವಣೆಯಲ್ಲಿ ಗೆಲ್ಲಬೇಕಿದೆ. ಸಮಾಜದ ಎಲ್ಲ ಜನ ವರ್ಗದ ವಿಶ್ವಾಸ ಗಳಿಸಿ ಚುನಾವಣೆ ಎದುರಿಸಬೇಕಿದೆ" ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.

ಸಾಲ ಮನ್ನಾ ನಿರ್ಣಯ
ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳ ತ್ವರಿತ ಮುಕ್ತಾಯ, ತಾಲೂಕು ಮಟ್ಟದಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡುವುದರ ಜೊತೆಗೆ ರೈತರ ಸಾಲ ಮನ್ನಾ ಮಾಡುವ ಕುರಿತು ಯೋಜನೆ ರೂಪಿಸಬೇಕಾಗಿದೆ ಎಂದು ಈಶ್ವರಪ್ಪ ತಮ್ಮ ನಿರ್ಣಯ ಮಂಡಿಸಿದರು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಶನ್ಮ ಶತಾಬ್ದಿ ವರ್ಷವನ್ನು ಆಚರಿಸುತ್ತಿದ್ದೇವೆ. ಉಪಾಧ್ಯಾಯರ ಆದರ್ಶಗಳನ್ನು ಪಕ್ಷದ ಕಾರ್ಯಕರ್ತರಿಗೆ ಮತ್ತು ಜನತೆಗೆ ತಲುಪಿಸುವ ಹೊಣೆ ನಮ್ಮ ಮೇಲಿದೆ ಎಂದರು.

ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ
ಕಾರ್ಯಕಾರಿಣಿಗೆ ನಿರ್ಬಂಧ ಹೇರಿದ ಪರಿಣಾಮ ಸಭೆಯ ನಿರ್ಣಯಗಳನ್ನು ತಿಳಿಸಲು ಸಂಸದೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ ನಡೆಸಿದರು. ಕೇಂದ್ರದಿಂದ ಸಾವಿರಾರು ಕೋಟಿ ಅನುದಾನ ಬಿಡುಗಡೆಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಅನುದಾನವನ್ನೇ ನೀಡುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದು, ಯುಪಿಎ ಅಧಿಕಾರದಲ್ಲಿದ್ದಾಗ ಬಿಡುಗಡೆಯಾದ ಅನುದಾನ ಹಾಗೂ ಎನ್‌ಡಿಎ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಬಿಡುಗಡೆ ಮಾಡಿರುವ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.

ಬ್ಯಾಂಕ್ ಖಾತೆಯಲ್ಲೇ ಕೊಳೆಯುತ್ತಿದೆ ಹಣ
ಕೇಂದ್ರದ ಅನುದಾನವನ್ನು ಪ್ರಾಮಾಣಿಕವಾಗಿ ರೈತರ ಖಾತೆಗೆ ತಲುಪಿಸದೆ ವಂಚಿಸಿದ್ದಾರೆ. ಕೇಂದ್ರದ 1,000 ಕೋಟಿ ಅನುದಾನ ಬಳಕೆಯಾಗದೆ ಬ್ಯಾಂಕಿನಲ್ಲೇ ಇದೆ. ರಾಜ್ಯದಲ್ಲಿ ಕಳೆದ 40ವರ್ಷಗಳಲ್ಲೇ ಇರದ ಭೀಕರ ಬರ ಈ ಬಾರಿ ತಲೆದೋರಿದೆ. ಆದರೂ ಮುಖ್ಯಮಂತ್ರಿಗಳು ಆಕಾಶದಿಂದ ಕೆಳಗಿಳಿಯುತ್ತಲೇ ಇಲ್ಲ. ಮೊದಲು ಆಕಾಶದಲ್ಲಿ ಹಾರಾಡುವುದನ್ನು ಬಿಟ್ಟು ರಸ್ತೆಯಲ್ಲಿ ಓಡಾಡಿ. ಜನರ ಕಷ್ಟಗಳನ್ನು ಅರಿತು ಬಗೆಹರಿಸಿ ಎಂದು ಒತ್ತಾಯಿಸಿದರು.

ಭರವಸೆ ಇಡೇರಿಸಿದ ಕೇಂದ್ರ
ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆ ವೇಳೆ ನೀಡಿದ್ದ ದೇಶದ ರಕ್ಷಣೆ, ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ರಹಿತ ಆಡಳಿತದ ಭರವಸೆಯನ್ನು ಈಡೇರಿಸಿದೆ. ಉಜ್ವಲ ಸ್ಕೀಂ ಜಾರಿ ಮಾಡಲು ಪೂರ್ವ ತಯಾರಿ ನಡೆಸುತ್ತಿದೆ. ಗ್ಯಾಸ್ ಸಂಪರ್ಕ ಇಲ್ಲದ ಬಿಪಿಎಲ್ ಕುಟುಂಬಗಳಿಗೆ ಸಂಪರ್ಕ ನೀಡಲು ಪಟ್ಟಿ ಸಿದ್ದಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಿಎಸ್ವೈ ರಾಜ್ಯ ಪ್ರವಾಸ
ಇನ್ನು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರು ಮೇ 18ರಂದು ತುಮಕೂರಿನಲ್ಲಿ ರಾಜ್ಯ ಪ್ರವಾಸ ಆರಂಭಿಸಲಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಲಿದ್ದಾರೆ. ಕಾರ್ಯಕಾರಿಣಿ ಸಭೆಯಲ್ಲಿ ಬರಗಾಲ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಿದ್ದು ಪಕ್ಷದ ಆಂತರಿಕ ಭಿನ್ನಮತ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು.

ಸಭೆಯಲ್ಲಿ ಎರಡು ನಿರ್ಣಯಗಳ ಅಂಗೀಕಾರ
ಇತ್ತ ಸಭೆಯಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಅಂಗೀಕಾರ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲ ಪರಿಸ್ಥಿತಿ ಹಾಗೂ ಇದನ್ನು ಎದುರಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಆರಂಭಿಸುವ ಬಗ್ಗೆ ನಿರ್ಣಯ ಅಂಗೀಕಾರವಾಗಿದೆ.

150ಕ್ಕೂ ಹೆಚ್ಚಿನ ಕ್ಷೇತ್ರ ಗೆಲ್ಲಲು ರಣತಂತ್ರ
ಪ್ರಸಕ್ತ ರಾಜ್ಯದ ರಾಜಕೀಯ ಬೆಳವಣಿಗೆ ಹಾಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಅನುಸರಿಸಬೇಕಾದ ರಣತಂತ್ರದ ಕುರಿತು ನಿರ್ಣಯ ಅಂಗೀಕಾರವಾಗಿದೆ ಎಂದು ತಿಳಿದುಬಂದಿದೆ. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಮುಗಿಯುತ್ತಿದ್ದಂತೆ ಮೈಸೂರಿನಿಂದ ಬಿಜೆಪಿ ಹಿರಿಯ ನಾಯಕರು ನಿರ್ಗಮಿಸಿದರು. ಇನ್ನು ಕೆಲ ಬಿಜೆಪಿ ನಾಯಕರು ಕಾರ್ಯಕಾರಿಣಿಯಲ್ಲಿ ಭಾಗವಹಿಸದೇ ಮೈಸೂರಿನ ಸುತ್ತಾಟದಲ್ಲಿ ತೊಡಗಿದ್ದು ಸಾಮಾನ್ಯವಾಗಿತ್ತು.












Click it and Unblock the Notifications