ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ವಿಶ್ವನಾಥ್?
ಮೈಸೂರು, ಮೇ 23 : ಕಾಂಗ್ರೆಸ್ - ಜೆಡಿಎಸ್ ಮೈತ್ರಿಯ ಅಭ್ಯರ್ಥಿಗಳು ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಮಕಾಡೆ ಮಲಗಿದ್ದಾರೆ. ಜೆಡಿಎಸ್ ನಾಯಕರು ಕೈಗೆ, ಕಾಂಗ್ರೆಸ್ ನವರು ಜೆಡಿಎಸ್ ಮೇಲೆ ತಮ್ಮ ಸೋಲನ್ನು ಎತ್ತಿ ಹಾಕುತ್ತಿದ್ದಾರೆ. ಇದರೊಟ್ಟಿಗೆ ಜೆಡಿಎಸ್ ರಾಜ್ಯಾಧ್ಯಕ್ಷರಾದ ವಿಶ್ವನಾಥ್ ತಮ್ಮ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಅವರ ಉತ್ತರವೇನು, ಇಲ್ಲಿದೆ ಅವರ ಸಂದರ್ಶನ:
ನೀವು ರಾಜೀನಾಮೆ ಕೊಡುತ್ತೀರೆಂಬ ಸುದ್ದಿ ಹಬ್ಬಿದೆ, ಏಕೆ?
ಇಲ್ಲ. ಈ ಸುದ್ದಿ ಹೇಗೆ ಹಬ್ಬಿದೆ ಎಂದು ನನಗೂ ಗೊತ್ತಿಲ್ಲ. ನಾನು ಕೂಡ ದೇವೇಗೌಡರಿಗೆ ಈ ಪಟ್ಟವನ್ನು ಬೇಡವೆಂದೇ ಹೇಳಿದ್ದೆ. ಅವರೇ ಒತ್ತಾಯ ಮಾಡಿ ಕೊಟ್ಟ ಪಟ್ಟವಿದು. ಈಗಲೂ ನನ್ನನ್ನು ರಿಲೀವ್ ಮಾಡಿ ಎಂದೇ ಕೇಳಿಕೊಳ್ಳುತ್ತಿದ್ದೇನೆ.

ಮೈತ್ರಿ ಪಕ್ಷದ ಸೋಲಿಗೆ ಕಾರಣ ಏನಿರಬಹುದು?
ಜನ ಗುಂಪು ಗುಂಪಾಗಿ ಬಂದು ಸ್ವಯಂ ಪ್ರೇರಿತವಾಗಿ ಮತ ಚಲಾವಣೆ ಮಾಡಿದ್ದಾರೆ. ಮತದಾನದ ಶೇಕಡಾವಾರು ಪ್ರಮಾಣ ಕೂಡ ಹೆಚ್ಚಾಗಿದೆ. ಅಂದರೆ ಅದರರ್ಥ ಆಡಳಿತ ಪಕ್ಷದ ವಿರೋಧವಾಗಿಯೇ ಹಕ್ಕು ಚಲಾವಣೆಯಾಗಿದೆ ಎಂದು. ಆದರೆ ಯಾವ ಆಡಳಿತ ಪಕ್ಷ ಎಂಬುದು ಫಲಿತಾಂಶ ಬಂದ ಮೇಲೆಯೇ ತಿಳಿಯುತ್ತದೆ. ಜೆಡಿಎಸ್ -ಕಾಂಗ್ರೆಸ್ ಪಕ್ಷ ಕ್ಯಾನವಾಸ್ ಮಾಡುವಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಬಿಜೆಪಿಯವರು ಮನೆ ಮನೆಗೆ ಅಭ್ಯರ್ಥಿಯ ಚೀಟಿಯನ್ನಾದರೂ ತಲುಪಿಸಿದರು. ನಾವು ಕೇವಲ ರೋಡ್ ಶೋ ಮಾಡಿದ್ದಷ್ಟೇ. ಇದೇ ಸೋಲಿಗೆ ಕಾರಣವಾಯಿತೇನೋ ಎಂಬುದು ನನ್ನ ಭಾವನೆ.
ಹಾಗಾದರೆ ನಿಮ್ಮ ಮುಂದಿನ ನಿಲುವೇನು ?
ನಮ್ಮ ಸ್ನೇಹಿತರೊಂದಿಗೆ ಕುಳಿತು ಮುಂದೇನು ಮಾಡಬಹುದೆಂದು ಚರ್ಚೆ ನಡೆಸುತ್ತೇವೆ.
ಈ ಮೈತ್ರಿ ಮಾಡಿಕೊಂಡದ್ದೇ ನಿಮ್ಮ ಪಕ್ಷದ ಸೋಲಿಗೆ ಪ್ರಮುಖ ಕಾರಣವೆಂದೆನಿಸುತ್ತದೆಯಾ ?
ಖಂಡಿತಾ ಹೌದು, ಅದರಲ್ಲಿ ಎರಡನೇ ಮಾತಿಲ್ಲ. ಮೈತ್ರಿ ಮಾಡಿಕೊಂಡಿರಲಿಲ್ಲವೆಂದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮೈತ್ರಿಯಿಂದ ನಮ್ಮ ಪಕ್ಷದ ಮೈನ್ ಪಿಲ್ಲರನ್ನೇ ನೆಲಸಮ ಮಾಡಿದೆ. ಕಾಂಗ್ರೆಸ್ ಹಿರಿಯ ನಾಯಕರಿಗೆ ಫಲಿತಾಂಶ ಶಾಕ್ ತಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವಮಾನವಾಗಿದೆ.
ನೀವು ಕೈಕೊಟ್ಟಿದ್ದಕ್ಕಾಗಿ ಮೈಸೂರಿನಲ್ಲೂ ಅಭ್ಯರ್ಥಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ ?
ಮೈಸೂರು ಮಾತ್ರವಲ್ಲ ಎಲ್ಲಾ ಕಡೆ ಮುಖಭಂಗವಾಗಿದೆ. ಸೀಟು ಹಂಚಿಕೆಯಿಂದಲೂ ಮೈತ್ರಿಯಲ್ಲಿ ಇಭ್ಭಾಗವಾಗಿತ್ತು. ನಮಗೂ ಅದಕ್ಕೂ ಸಂಬಂಧವಿಲ್ಲ. ಬಿಜೆಪಿಯವರ ಬಗ್ಗೆ, ಪಕ್ಷಾಂತರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.












Click it and Unblock the Notifications