ಅರಮನೆ ಸೌಂದರ್ಯಕ್ಕೆ ಮನಸೋತ ಜಿ-20 ಪ್ರತಿನಿಧಿಗಳು, ಸ್ಥಳೀಯ ಖಾದ್ಯಕ್ಕೆ ವಿದೇಶಿಗರು ಫಿದಾ
ಮೈಸೂರು, ಆಗಸ್ಟ್ 02: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಜಿ-20 ಸಭೆಯಲ್ಲಿ ಪಾಲ್ಗೊಂಡಿರುವ ಪ್ರತಿನಿಧಿಗಳು ವಿಶ್ವವಿಖ್ಯಾತ ಅಂಬಾವಿಲಾಸದ ಸೌಂದರ್ಯ ಕಣ್ತುಂಬಿಕೊಂಡು ಖುಷಿಪಟ್ಟರು.
ಅರಮನೆ ವೈಭವ, ಸೌಂದರ್ಯ ಕಂಡು ಬ್ಯೂಟಿಫುಲ್ ಎಂದು ವಿದೇಶಿ ಗಣ್ಯರು ಉದ್ಗರಿಸಿದರು. ನಾಡಹಬ್ಬ ದಸರಾ ಬಗ್ಗೆ ಕುತೂಹಲದಿಂದ ಪ್ರಶ್ನೆ ಕೇಳಿದರು. ಅಲ್ಲೇ ಇದ್ದ ನಾಲ್ವಡಿ ಕೃಷ್ಣರಾಒ ಒಡೆಯರ್ ಫೋಟೋ ಕಂಡು ಸಂತಸಪಟ್ಟರು.

400ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಯದುವಂಶದ ವೈಭವ, ಸಾಂಸ್ಕೃತಿಕ ಶ್ರೀಮಂತಿಕೆ, ಅರಮನೆಯ ಸೌಂದರ್ಯ, ಕಲೆ, ವಾಸ್ತುಶಿಲ್ಪದ ಬೆಡಗು, ಬಿನ್ನಾಣಕ್ಕೆ ಜಿ-20 ರಾಷ್ಟ್ರಗಳ ಪ್ರತಿನಿಧಿಗಳು ಬೆರಗಾದರು.
ಒಟ್ಟು 12 ಟೂರಿಸ್ಟ್ ಗೈಡ್‌ಗಳು ಪ್ರತ್ಯೇಕ ತಂಡ ರಚಿಸಿಕೊಂಡು ವಿದೇಶಿ ಗಣ್ಯರಿಗೆ ಅಗತ್ಯ ಮಾಹಿತಿ ನೀಡಿದರು. ವಿದೇಶಿ ಪ್ರತಿನಿಧಿಗಳ ಭೇಟಿ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದಲೇ ಅರಮನೆಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿತ್ತು. ಆ.2ರಂದು ಪ್ರತಿನಿಧಿಗಳು ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಎಸ್‌ಗೆ ಭೇಟಿ ನೀಡಲಿದ್ದು, ಸಂಜೆ ಲೈಟಿಂಗ್‌ನಲ್ಲಿ ಅರಮನೆಯನ್ನು ವೀಕ್ಷಿಸಲಿದ್ದಾರೆ.
'ನನ್ನ ತಂಡದಲ್ಲಿ 30 ಜನ ವಿದೇಶಿ ಗಣ್ಯರು ಇದ್ದರು. ಪ್ರತಿಯೊಬ್ಬರು ಅರಮನೆ ಇತಿಹಾಸ, ರಾಜರ ಆಳ್ವಿಕೆ ಬಗ್ಗೆ ಕುತೂಹಲದಿಂದ ಪ್ರಶ್ನೆ ಕೇಳಿದರು. ದರ್ಬಾರ್ ಹಾಲ್ ನೋಡಿ ಅಚ್ಚರಿಗೊಂಡರು. ಅರಮನೆಯಲ್ಲಿ ಇಷ್ಟೆಲ್ಲಾ ಸಂಗತಿ ಇರುತ್ತದೆ ಎಂಬುದು ಗೊತ್ತೆ ಇರಲಿಲ್ಲ ಎಂದು ಸಂತಸಪಟ್ಟರು' ಎಂದು ಟೂರಿಸ್ಟ್ ಗೈಡ್ ಅಶೋಕ್ ಮಾಹಿತಿ ನೀಡಿದರು.

ಸ್ಥಳೀಯ ಖಾದ್ಯದ ಸವಿ
ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಿದೇಶಿ ಗಣ್ಯರಿಗೆ ಸ್ಥಳೀಯ ಹಾಗೂ ಸೌತ್ ಇಂಡಿಯನ್ ಮೀಲ್ಸ್ ಅತಿಥ್ಯ ನೀಡಲಾಗುತ್ತಿದೆ. ಇಡ್ಲಿವಡೆ, ಬಿಸಿಬೇಳೆ ಬಾತು, ಮಸಾಲೆ ದೋಸೆ ಬೆಳಗ್ಗಿನ ತಿಂಡಿಗೆ ಇದ್ದರೆ ಮಧ್ಯಾಹ್ನ ಮಂಗಳೂರು, ಕರಾವಳಿ ಶೈಲಿಯ ಊಟ, ಮೈಸೂರು ಚಿಕನ್ ಕಬಾಬ್, ಪೆಪ್ಪರ್ ಚಿಕನ್, ಫಿಶ್ ಕರಿಯನ್ನು ಸವಿಯುತ್ತಿದ್ದಾರೆ. ರಾತ್ರಿ ಚಪಾತಿ, ಸಲಾಡ್, ರಸಂ, ಗುಲಾಬ್ ಜಾಮೂನ್ ಸೇವಿಸುತ್ತಿದ್ದಾರೆ. ಮೈಸೂರು ಪಾಕ್, ಫಿಶ್ ಕರಿ ರುಚಿಗೆ ವಿದೇಶಿಗರು ಮನಸೋತಿದ್ದಾರೆ. ಪಾನಿಪುರಿ, ಗೋಬಿಯಂತಹ ಚಾಟ್ಸ್‌ಗಳನ್ನು ಕೇಳಿ ಪಡೆಯುತ್ತಿದ್ದಾರೆ.












Click it and Unblock the Notifications