ದಾರಿ ತಪ್ಪಿ ಮೈಸೂರಿನ ಹೈಟೆಕ್ ಆಸ್ಪತ್ರೆಗೆ ಬಂದಿತ್ತು ಉಡ
ಮೈಸೂರು, ಸೆಪ್ಟೆಂಬರ್ 3: ಇಂದು ಬೆಳಿಗ್ಗೆ ಮೈಸೂರಿನ ಪಂಚಕರ್ಮ ಹೈಟೆಕ್ ಆಸ್ಪತ್ರೆಗೆ ನುಗ್ಗಿದ ಉಡವೊಂದು ಅಲ್ಲಿದ್ದವರನ್ನು ಗಾಬರಿಗೊಳಿಸಿದ ಘಟನೆ ನಡೆದಿದೆ.
ಏಕಾಏಕಿ ಬಂದ ಉಡ ಮೈಸೂರು ಕೆ.ಆರ್.ಎಸ್ ರಸ್ತೆಯಲ್ಲಿರುವ ಪಂಚಕರ್ಮ ಹೈಟೆಕ್ ಆಸ್ಪತ್ರೆ ನುಗ್ಗಿತು. ಅದನ್ನು ಕಂಡ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳು ಹೌಹಾರಿದ್ದಾರೆ. ಅಲ್ಲದೇ ಆಸ್ಪತ್ರೆ ಶುಚಿಗೊಳಿಸುವ ಸಂದರ್ಭದಲ್ಲಿ ಉಡ ಕಾಣಿಸಿಕೊಂಡಿದ್ದು, ಅಲ್ಲಿದ್ದ ಸಿಬ್ಬಂದಿ ಮಾಲೀಕರಿಗೆ ತಕ್ಷಣ ಮಾಹಿತಿಯನ್ನು ರವಾನಿಸಿದ್ದಾರೆ.

ಇದಾದ ಬಳಿಕ ಉರಗ ತಜ್ಞ ಸೂರ್ಯ ಕೀರ್ತಿ ಅವರಿಗೆ ಆಸ್ಪತ್ರೆಯ ಸಿಬ್ಬಂದಿ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಸೂರ್ಯ ಕೀರ್ತಿ, ಸುಮಾರು ಮೂರುವರೆ ಅಡಿ ಉದ್ದದ ಉಡವನ್ನು ರಕ್ಷಣೆ ಮಾಡಿ ನಂತರ ಚಾಮುಂಡಿ ಬೆಟ್ಟಕ್ಕೆ ಬಿಟ್ಟು ಬಂದರು. ಕಾಡನ್ನು ನಾಶ ಮಾಡಿದ ಪರಿಣಾಮ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿರುವುದು ಈ ದಿನಗಳಲ್ಲಿ ಸಾಮಾನ್ಯವಾಗಿದೆ.












Click it and Unblock the Notifications