Independence Day 2023: ಮೈಸೂರಿನಲ್ಲಿ ಭಾಷಣದ ವೇಳೆ ಕುಸಿದು ಬಿದ್ದ ಸಚಿವ ಎಚ್.ಸಿ.ಮಹದೇವಪ್ಪ
ಮೈಸೂರು, ಆಗಸ್ಟ್, 15: ಇಂದು ದೇಶಾದ್ಯಂತ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ಅದೇ ರೀತಿ ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗಿದ್ದು, ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಚ್.ಸಿ.ಮಹದೇವಪ್ಪ ಅವರು ಆಯಾಸಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ.
ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಕುರಿತು ಭಾಷಣ ಮಾಡುತ್ತಿದ್ದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಸುಸ್ತಾಗಿ ಕುಸಿದ ಘಟನೆ ನಡೆದಿದೆ.

ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಭಾಷಣ ಮಾಡುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಬಿಸಿಲಿಗೆ ಸಚಿವರು ಸುಸ್ತಾಗಿ ಕೆಳಗೆ ಕುಳಿತರು.
ತಕ್ಷಣ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ನೀರು ಕೊಟ್ಟರು. ನೀರು ಕುಡಿದು ಸ್ವಲ್ಪ ಹೊತ್ತು ಸುಧಾರಿಸಿಕೊಂಡ ನಂತರ ಸಚಿವ ಹೆಚ್.ಸಿ. ಮಹದೇವಪ್ಪ ಅವರು ಮತ್ತೆ ಕಾರ್ಯಕ್ರಮದಲ್ಲಿ ಭಾಗಿಯಾದರು ಎಂದು ತಿಳಿದುಬಂದಿದೆ.
ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ
ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು, ಪ್ರಾಣ ತ್ಯಾಗ ಮಾಡಿದ ಸಂಗೋಳ್ಳಿ ರಾಯಣ್ಣ ಅವರ ಹೋರಾಟ ಅವಿಸ್ಮರಣೀಯ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ನಗರದ ಕುರುಬಾರಹಳ್ಳಿಯ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಚಿವರು, ರಾಯಣ್ಣನ ಹೋರಾಟದ ಮಾದರಿಯಲ್ಲಿ ನಾವೆಲ್ಲರೂ ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕು ಎಂದು ಹೇಳಿದರು.
ನಾಯಕತ್ವದ ನಿಷ್ಟೆಗೆ, ಪ್ರಾಮಾಣಿಕತೆಗೆ, ನೆಲ, ಜಲ, ಭಾಷೆ ಮತ್ತು ಜನರ ರಕ್ಷಣೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದರು. ಗುಲಾಮಗಿರಿಯಿಂದ ನಮ್ಮ ಬಿಡುಗಡೆಗೊಳಿಸುವುದು ಬಿಟ್ಟು ಬೇರೆ ಯಾವುದೇ ಆಲೋಚನೆ ರಾಯಣ್ಣರಲ್ಲಿ ಇರಲಿಲ್ಲ ಎಂದು ಹೇಳಿದರು.
ಸಂಗೋಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯದ ಮಹಾನ್ ಹೋರಾಟಗಾರ. ಸಮಸ್ತ ನಾಡಿನ ಜನತೆಯ ಸ್ವಾತಂತ್ರ್ಯಕ್ಕಾಗಿ ತನ್ನನ್ನು ಮುಡಿಪಾಗಿಟ್ಟ ದೊಡ್ಡ ಸೇನಾನಿ. ಅಂತಹ ವೀರನ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಿರುವುದು ಪ್ರಶಂಸನೀಯ ಎಂದರು.
ದೇಶಾದ್ಯಂತ ಮೈಸೂರಿಗೆ ಆಗಮಿಸಿ ಚಾಮುಂಡಿಬೆಟ್ಟಕ್ಕೆ ಬರುವ ಪ್ರವಾಸಿಗರು ಈ ವೃತ್ತದ ಮೂಲಕ ತೆರಳುವ ಸಂದರ್ಭದಲ್ಲಿ ಸಂಗೋಳ್ಳಿ ರಾಯಣ್ಣನ ಸ್ವಾತಂತ್ರ್ಯ ಸಂಗ್ರಾಮದ ಹೋರಾಟವನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಎಂದರು.
ನಮ್ಮದು ಬಹುತ್ವದ ದೇಶ. ಇಲ್ಲಿ ಬೇರೆ ಭಾಷೆ, ಆಚಾರ ವಿಚಾರಗಳು, ಧಾರ್ಮಿಕ ನಿಲುವುಗಳು ಮತ್ತು ಹಲವಾರು ಜಾತಿಗಳಿದ್ದರೂ ಅಂತಿಮವಾಗಿ ನಾವೆಲ್ಲರೂ ಕೂಡ ಭಾರತೀಯರು. ಭಾರತದ ಸುಪುತ್ರರು. ದೇಶ ನಿರ್ಮಾಣ ಮಾಡುವ ಕಾರ್ಯದಲ್ಲಿ ರಾಯಣ್ಣನ ಬದುಕು, ಜೀವನ, ಹೋರಾಟವನ್ನು ಅನುಸರಿಸಬೇಕು ಎಂದು ಕರೆ ನೀಡಿದರು.
ನಂದಗಡ ಪ್ರದೇಶದ ರಾಯಣ್ಣ ಅಭಿಮಾನಿಗಳು ಕಳೆದ ನಮ್ಮ ಸರ್ಕಾರದ ಅವಧಿಯಲ್ಲಿ ನಂದಗಡವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಮನವಿ ಮಾಡಿದ್ದರು. ನಾನು ಎಲ್ಲಾ ವರದಿಗಳನ್ನು ಪರಿಶೀಲಿಸಿ ಅಲ್ಲಿ ಸೇತುವೆ ಮಾಡಿಕೊಡಲು 60 ಕೋಟಿ ಮಂಜೂರು ಮಾಡಿಕೊಟ್ಟಿದ್ದೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಸೋದ್ಯಮಕ್ಕೆ ಉತ್ತೇಜಿಸಲು ಪ್ರಾಧಿಕಾರಕ್ಕೆ ನೂರಾರು ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ ಎಂದು ಹೇಳಿದರು.
ಈ ವೇಳೆ ಸಂಸದ ಪ್ರತಾಪ ಸಿಂಹ, ಶಾಸಕ ಶ್ರೀವತ್ಸ, ಉಪಮಹಾಪೌರರಾದ ರೂಪ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರ ಪಾಲಿಕೆ ಸದಸ್ಯರು ಸೇರಿದಂತೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ಘರ್ಜನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications