83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಅಕ್ರಮ ವಸೂಲಿ?
ಮೈಸೂರು, ನವೆಂಬರ್ 5 : ಅರಮನೆ ನಗರಿ ಮೈಸೂರಿನಲ್ಲಿ ನವೆಂವರ್ 24 ರಿಂದ 26ರವರೆಗೆ ನಗರದಲ್ಲಿ ನಡೆಯುವ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಸಗಟು ವ್ಯಾಪಾರಿಗಳಿಂದ ದವಸ ಧಾನ್ಯ, ಹಣ ವಸೂಲಿ ಮಾಡಲಾಗುತ್ತಿದೆಯೇ?! ಹೌದು ಹೀಗೊಂದು ಮಾತುಗಳು ಸದ್ಯ ಮೈಸೂರಿಗರಲ್ಲಿ ಮನೆ ಮಾಡಿದೆ.
ಈ ಪ್ರಶ್ನೆ ಜನರಲ್ಲಿ ಕಾಡಲು ಪ್ರಮುಖ ಕಾರಣವೇ ಸಾಮಾಜಿಕ ಜಾಲತಾಣ. ಮೈಸೂರಿನ ಯುವಕನೋರ್ವ ಫೇಸ್'ಬುಕ್ ನಲ್ಲಿ ಈ ರೀತಿಯ ಪೋಸ್ಟ್ ವೊಂದನ್ನು ಹಾಕಿದ್ದಾನೆ.

ಸಮ್ಮೇಳನಕ್ಕಾಗಿ ಸರ್ಕಾರದಿಂದ ಆರು ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದರೂ, ಹತ್ತು ಕೋಟಿ ಅನುದಾನ ನೀಡಲಾಗುವುದು ಎಂದು ಉಸ್ತುವಾರಿ ಸಚಿವರೇ ಭರವಸೆ ನೀಡಿದ್ದಾರೆ.
ಆದರೆ ಕೆಲವರು ಸಂಘಟನೆ ಹೆಸರಿನಲ್ಲಿ ಸಾಹಿತ್ಯ ಸಮ್ಮೇಳನದ ಹೆಸರು ಹೇಳಿಕೊಂಡು 'ಕಲೆಕ್ಷನ್' ಮಾಡುತ್ತಿದ್ದಾರೆ. ಇವರಿಗೆ ಜಿಲ್ಲಾಡಳಿತವಾಗಲಿ, ಪೊಲೀಸ್ ಇಲಾಖೆಯಾಗಲಿ ಎಚ್ಚರಿಕೆ ನೀಡಿಲ್ಲ. ಈ ಬಗ್ಗೆ ಯಾವುದೇ ಭಯವೂ ಇಲ್ಲದೇ ವಸೂಲಿಯಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಕಲಿ ರಸೀದಿ ನೀಡಿ ಸಂತೆಪೇಟೆ, ಬಂಡಿಪಾಳ್ಯ ಎಪಿಎಂಸಿ ಸೇರಿದಂತೆ ಹಲವೆಡೆಗೆ ಹೋಗಿ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಸಗಟು ವ್ಯಾಪಾರಿಗಳಿಂದ ಅಕ್ಕಿ, ಸಕ್ಕರೆ, ಬೆಲ್ಲ ಸೇರಿದಂತೆ ದವಸ ಧಾನ್ಯಗಳನ್ನು ಮೂಟೆ ಲೆಕ್ಕದಲ್ಲಿ ವಸೂಲಿ ಮಾಡಲಾಗುತ್ತಿದೆ.
ಜತೆಗೆ ಕೆಲ ವರ್ತಕರಿಂದ ಹಣ ವಸೂಲಿ ಮಾಡಿ ಅವರಿಗೆ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಮುದ್ರಿಸಿಕೊಂಡಿರುವ ನಕಲಿ ರಶೀದಿ ನೀಡಲಾಗುತ್ತಿದೆ. ನೀಡದಿದ್ದರೆ ಎಲ್ಲಿ ನಮ್ಮನ್ನು ಕನ್ನಡ ವಿರೋಧಿಗಳೆಂದು ಬಿಂಬಿಸಿಬಿಡುವರೋ ಎನ್ನುವ ಭಯವಿರುವುದರಿಂದ ಯಾರೂ ಪ್ರಶ್ನೆ ಮಾಡುವುದಿಲ್ಲ ಎನ್ನಲಾಗಿದೆ. ಇದು ನಿಜವೇ ಆಗಿದ್ದರೆ ಪೊಲೀಸರು, ಜಿಲ್ಲಾಡಳಿತ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.












Click it and Unblock the Notifications