ಗಂಡು ಮಕ್ಕಳಿಲ್ಲವೆಂದು ಹೆಂಡತಿಯನ್ನು ಕತ್ತು ಹಿಸುಕಿ ಕೊಂದ ಪಾಪಿ ಪತಿ
ಮೈಸೂರು, ಜನವರಿ 7: ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಸಮೀಪದ ಕಾಟ್ನಾಳು ಗ್ರಾಮದಲ್ಲಿ ನಡೆದಿದೆ.
ಅತ್ತಿಗುಪ್ಪೆ ಗ್ರಾಮದ ನೀಲಾಶ್ರೀ ಉರುಫ್ ನಿರ್ಮಲ (28) ಕೊಲೆಯಾದವರು. ಕಾಟ್ನಾಳು ಗ್ರಾಮದ ದೇವರಾಜು ಪತ್ನಿಯನ್ನೇ ಕೊಲೆಗೈದ ಪತಿ. ಇವರಿಗೆ 5 ವರ್ಷ ಮತ್ತು 3 ವರ್ಷದ ಇಬ್ಬರು ಹೆಣ್ಣು ಮಕ್ಕಳಿವೆ. 8 ವರ್ಷಗಳ ಹಿಂದೆ ನೀಲಾಶ್ರೀ ಅವರನ್ನು ದೇವರಾಜು ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ಕೆಲ ವರ್ಷಗಳಿಂದ ಗಂಡುಮಕ್ಕಳಿಲ್ಲ ಎಂದು ಕುಪಿತಗೊಂಡಿದ್ದ ದೇವರಾಜು ಪತ್ನಿ ನೀಲಾಶ್ರೀಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಜಗಳ ನಡೆದು, ದೇವರಾಜು ಪತ್ನಿಯನ್ನು ನಿನ್ನೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸಂಜೆ ವೇಳೆಗೆ ಅಕ್ಕಪಕ್ಕದ ಮನೆಯವರಿಗೆ ಈ ವಿಷಯ ತಿಳಿದು, ನೀಲಾಶ್ರೀ ಅವರ ತವರು ಮನೆಯವರಿಗೆ ಮಾಹಿತಿ ನೀಡಿದ್ದಾರೆ. ನಂತರ ನೀಲಾಶ್ರೀ ಅವರ ಸಹೋದರ ಸ್ವಾಮಿಗೌಡ ಅವರು ಸ್ಥಳಕ್ಕೆ ಆಗಮಿಸಿ, ನಂತರ ಸಾಲಿಗ್ರಾಮ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇತ್ತ ಪೊಲೀಸರು ಆರೋಪಿ ದೇವರಾಜುನನ್ನು ವಶಕ್ಕೆ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತೋಟದ ಮನೆಯಲ್ಲಿ ಕೊಲೆ
ಇನ್ನೊಂದು ಪ್ರಕರಣದಲ್ಲಿ ಮೈಸೂರಿನ ಎಂ.ಸಿ.ಹುಂಡಿ ಗ್ರಾಮದ ತೋಟದ ಮನೆಯೊಂದರಲ್ಲಿ ಭಾನುವಾರ (ಜ.07)ಸಂಜೆ ಪ್ರಶಾಂತ್ (47) ಎಂಬುವವರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನೆಲೆಸಿದೆ.
ಕೈಯ್ಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಸಂಜೆ 6.30ರ ಸಮಯದಲ್ಲಿ ಮನೆಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಪ್ರಶಾಂತ್ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ತಲೆಗೆ ಬಿದ್ದ ಹೊಡೆತದಿಂದ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಪ್ರಾಣ ಹೋಗಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಕೊಲೆಗಾರರು ಮನೆಯಿಂದ ಹೊರಟಿದ್ದಾರೆ.
ಪತ್ನಿಯಿಂದ ವಿಚ್ಛೇದನ ಪಡೆದು ಹಲವು ವರ್ಷಗಳಿಂದ ಪ್ರಶಾಂತ್ ಇಲ್ಲಿನ ತೋಟದಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಈ ವೇಳೆ ಇವರ ಸ್ನೇಹಿತರೊಬ್ಬರು ಜೊತೆಯಲ್ಲಿರುತ್ತಿದ್ದರು. ಕೊಲೆ ಮಾಡಿದ ಇಬ್ಬರ ಪೈಕಿ ಒಬ್ಬಾತ ಈ ಹಿಂದೆ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಹಣಕಾಸಿನ ವಿಚಾರಕ್ಕೆ ಕೊಲೆಯಾಗಿರಬಹುದು ಎಂಬ ಅನುಮಾನ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗಾರರ ಪತ್ತೆಗೆ ಪೊಲೀಸರು ನಾಕಾಬಂದಿ ರಚಿಸಿದ್ದಾರೆ.












Click it and Unblock the Notifications