ಮೈಸೂರು: ಹಣಕ್ಕಾಗಿ ಪತ್ನಿಯನ್ನೇ ದಾಳವಾಗಿ ಬಳಸುತ್ತಿದ್ದ ಪತಿ ವಿರುದ್ಧ ದೂರು
ಮೈಸೂರು, ಫೆಬ್ರವರಿ 2 : ಅಪರಿಚಿತರನ್ನು ಮನೆಗೆ ಕರೆತಂದು ಸಲುಗೆಯಿಂದ ವರ್ತಿಸಿ, ಹೆದರಿಸಿ ಹಣ ಕೀಳುವಂತೆ ಒತ್ತಾಯಿಸುತ್ತಿದ್ದ ಪತಿಯ ವರ್ತನೆಗೆ ಬೇಸತ್ತ ಮಹಿಳೆ ಗಂಡನ ವಿರುದ್ಧ ಠಾಣೆ ಮೆಟ್ಟಲೇರಿದ್ದಾಳೆ. ಜಿಲ್ಲೆಯ ನಂಜನಗೂಡು ತಾಲೂಕಿನ ಎಚಗುಡ್ಲ ಗ್ರಾಮದ ಅಯ್ಯಪ್ಪ ಎಂಬಾತ ತನ್ನ ಪತ್ನಿ ರತ್ನಮ್ಮಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ.
ಮೈಸೂರು ತಾಲೂಕಿನ ಉದ್ಭೂರು ಗ್ರಾಮದ ರತ್ನಮ್ಮ, ಎಚಗುಂಡ್ಲ ಗ್ರಾಮದ ಅಯ್ಯಪ್ಪನನ್ನು 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ಒಂದು ಮಗುವಿನ ತಂದೆಯಾದ ಅಯ್ಯಪ್ಪ ಕುಡಿತದ ಚಟಕ್ಕೆ ದಾಸನಾಗಿದ್ದ. ಆಗಾಗ ಅಯ್ಯಪ್ಪ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದು, ಅಪರಿಚಿತರನ್ನು ಮನೆಗೆ ಕರೆತಂದು ಸತ್ಕಾರ ಮಾಡುವ ನೆಪದಲ್ಲಿ ಸಲುಗೆಯಿಂದ ಮಾತಾಡಿ ಹಣ ವಸೂಲಿ ಮಾಡು ಎಂದು ಪೀಡಿಸುತ್ತಿದ್ದ.

ಅಷ್ಟೇ ಅಲ್ಲದೆ ನಾನು ಹೊರಗೆ ಹೋದ ವೇಳೆಯಲ್ಲಿ ಅನ್ಯ ಪುರುಷರನ್ನು ಮನೆಗೆ ಕರೆದುಕೊಂಡು ಬಂದು ಸಲುಗೆಯಿಂದ ಮಾತನಾಡಿಸಿ, ಹೆದರಿಸಿ ಹಣ ವಸೂಲಿ ಮಾಡು ಎಂದು ಹೇಳುತ್ತಿದ್ದ. ಇದರಿಂದ ಹೆದರಿದ ಪತ್ನಿ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ್ದಾಳೆ.
ತನ್ನ ಸಮಸ್ಯೆಯನ್ನು ಗ್ರಾಮದ ಮುಖಂಡರಲ್ಲಿ ರತ್ನಮ್ಮ ಹೇಳಿಕೊಂಡಿದ್ದಾಳೆ ಆದರೆ ಅಲ್ಲಿ ನ್ಯಾಯ ಸಿಗದ ಕಾರಣ ರತ್ನಮ್ಮ ಈಗ ಪೊಲೀಸರ ಮೊರೆ ಹೋಗಿದ್ದಾರೆ. ಕುಡುಕ ಪತಿಯಿಂದ ರಕ್ಷಣೆ ನೀಡಿ ತನ್ನ ಮಗುವನ್ನು ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾಳೆ.












Click it and Unblock the Notifications