ಮೈಸೂರಿನ ಹಲವೆಡೆ ಭಾರೀ ಮಳೆ; ಎಚ್.ಡಿ.ಕೋಟೆಯಲ್ಲಿ ನೆಲಕ್ಕುರುಳಿದ ಮರ
ಮೈಸೂರು, ಮಾರ್ಚ್ 21: ಕೊರೊನಾ ವೈರಸ್ ಆತಂಕ ವ್ಯಾಪಿಸುತ್ತಿರುವ ಬೆನ್ನಲ್ಲೇ ಮೈಸೂರು ನಗರ ಹಾಗೂ ಜಿಲ್ಲೆಯ ಹಲವು ಭಾಗಗಳಲ್ಲಿ ಶುಕ್ರವಾರ ಸಂಜೆ ಮಳೆಯಾಗಿದ್ದು, ಸಾರ್ವಜನಿಕರಲ್ಲಿ ಒಂದೆಡೆ ಆತಂಕ ಸೃಷ್ಟಿಸುವ ಜತೆಗೆ ಬಿಸಿಲಿನ ತಾಪದಿಂದ ಬಸವಳಿದಿರುವ ಜನರಿಗೆ ಒಂದಿಷ್ಟು ಸಮಾಧಾನ ತಂದಿದೆ.
ಮೈಸೂರು ನಗರ ಹಾಗೂ ಜಿಲ್ಲೆಯ ಹಲವು ಕಡೆಗಳಲ್ಲಿ ಶುಕ್ರವಾರ ಬೆಳಗ್ಗಿನಿಂದಲೂ ಮೋಡಕವಿದ ವಾತಾವರಣವಿತ್ತು. ಅದರಂತೆ ಸಂಜೆ ವೇಳೆಗೆ ಎಚ್.ಡಿ.ಕೋಟೆ, ಹಂಪಾಪುರ, ಹನಗೋಡು, ಹುಣಸೂರು ತಾಲೂಕಿನ ಹಲವೆಡೆಗಳಲ್ಲಿ ಗುಡುಗು, ಗಾಳಿಸಹಿತ ಭಾರೀ ಮಳೆ ಸುರಿಯಿತು. ಸಂಜೆ 7 ಗಂಟೆ ವೇಳೆಗೆ ಮೈಸೂರಿನ ಕೆಲವು ಬಡಾವಣೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಯಿತು.

ಧರೆಗುರುಳಿದ ಮರ, ವಿದ್ಯುತ್ ಕಂಬ: ಎಚ್.ಡಿ.ಕೋಟೆ ತಾಲೂಕಿನಲ್ಲಿ ಸುರಿದ ಗಾಳಿಮಳೆಯಿಂದಾಗಿ ತಾಲೂಕಿನ ಇಟ್ನ ಕಾಲೋನಿಯಲ್ಲಿ ಭಾರೀ ಗಾತ್ರದ ಮರ ಹಾಗೂ ವಿದ್ಯುತ್ ಕಂಬ ಧರೆಗುರುಳಿತು. ಮಳೆ ಗಾಳಿಯಿಂದಾಗಿ ಬೃಹದಾಕಾರದ ಮರವೊಂದು ಮನೆಯ ಮೇಲುರುಳಿದ ಪರಿಣಾಮ ಮನೆ ಬಹುತೇಕ ಶಿಥಿಲಗೊಂಡಿದೆ. ಆದರೆ ಮರ ಬಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಅನಾಹುತ ತಪ್ಪಿದೆ. ವಿದ್ಯುತ್ ಕಂಬ ನೆಲಕ್ಕುರುಳಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.











Click it and Unblock the Notifications