ಶಿವಣ್ಣ ಮೆಚ್ಚಿ ಹೊಗಳಿದ ಶಿಲ್ಪಿ ಕಿರಣ್ ಸುಬ್ಬಯ್ಯ: ಮೈಸೂರಿನ ಶಿಲ್ಪನಿಕೇತನ ಸೃಷ್ಟಿ ಹೇಗಾಯಿತು?
ಮೈಸೂರು, ಫೆಬ್ರವರಿ 20 : ಶಿಲ್ಪಕಲೆಯಲ್ಲಿ ಮೈಸೂರು ದೇಶ ವಿದೇಶಗಳ ಗಮನಸೆಳೆದಿದೆ. ಅದರಲ್ಲೂ ಅಯೋಧ್ಯೆಯಲ್ಲಿನ ಶ್ರೀ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೈನಲ್ಲಿ ಅರಳಿದ್ದು ಎಂಬುದು ಜಗಜ್ಜಾಹೀರಾದ ಬಳಿಕ ಎಲ್ಲರ ದೃಷ್ಠಿ ಇತ್ತ ನೆಟ್ಟಿದೆ. ಅಷ್ಟೇ ಅಲ್ಲದೆ ಮೈಸೂರಿನಲ್ಲಿರುವ ಶಿಲ್ಪಿಗಳಿಗತ್ತ ಅಚ್ಚರಿಯಿಂದ ನೋಡುವಂತಾಗಿದೆ.
ಮೈಸೂರು ನಗರಕ್ಕೊಂದು ಸುತ್ತು ಬಂದರೆ ಹಲವು ಪ್ರತಿಭಾನ್ವಿತ ಶಿಲ್ಪಿಗಳು ನಮಗೆ ಸಿಗುತ್ತಾರೆ. ಅವರ ನಡುವೆ ಅದ್ಭುತ ಕಲೆಗಾರರೊಬ್ಬರಿದ್ದಾರೆ ಅವರೇ ಅಪ್ಪನೆರವಂಡ ಕಿರಣ್ ಸುಬ್ಬಯ್ಯ. ಇವರ ಕಾರ್ಯಕ್ಷೇತ್ರದ ಹೆಸರು ಶಿಲ್ಪನಿಕೇತನ. ಈ 'ಶಿಲ್ಪನಿಕೇತನ'ಕ್ಕೆ ಕಾಲಿಟ್ಟಿದ್ದೇ ಆದರೆ ಒಂದು ಕ್ಷಣ ನಿಬ್ಬೆರಗಾಗುವುದು ಖಚಿತ. ಇವರ ಕೈಗೆ ಶಿಲೆ ಸಿಕ್ಕರೆ ಅದು ಯಾವುದೆಲ್ಲಾ ರೂಪ ತಾಳಬಹುದು ಎಂಬುವುದಕ್ಕೆ ಶಿಲ್ಪನಿಕೇತನದಲ್ಲಿ ಅರಳಿ ನಿಂತ ಸುಂದರ ಶಿಲ್ಪಗಳು ಸಾಕ್ಷಿಯಾಗುತ್ತವೆ.

ನಾವು ಉಪಯೋಗಕ್ಕೆ ಬಾರದೆ ಎಸೆವ ಕಲ್ಲುಗಳೂ ಸಹ ಇಲ್ಲಿ ಹೊಸ ರೂಪ ಪಡೆದಿವೆ. ಮನೆಯ ಟಿವಿ ಸ್ಟ್ಯಾಂಡ್ನಿಂದ ಆರಂಭವಾಗಿ 135 ಹೆಡೆಯ 5ಅಡಿ ಆದಿಶೇಷನವರೆಗೆ ವಿವಿಧ ನಮೂನೆಯ ವಿವಿಧ ಭಂಗಿಯ ಬಹುರೂಪಿ ಶಿಲ್ಪಗಳು ಮನಸ್ಸೆಳೆಯುತ್ತವೆ. ಪ್ರತಿಯೊಂದು ಶಿಲ್ಪಗಳ ಕೆತ್ತನೆಯಲ್ಲಿಯೂ ಹೊಸತನ ಎದ್ದು ಕಾಣುತ್ತದೆ. ಇಂತಹ ಅದ್ಭುತ ಕಲೆಗಳನ್ನು ಕಳೆದ ನಾಲ್ಕೈದು ದಶಕಗಳಿಂದ ಶಿಲೆಯ ಮೇಲೆ ಅಪ್ಪನೆರವಂಡ ಕಿರಣ್ ಸುಬ್ಬಯ್ಯ ಅರಳಿಸುತ್ತಾ ಬಂದಿದ್ದಾರೆ.
ಬೇಲೂರು, ಹಳೆಬೀಡಿನ ಶಿಲ್ಪಕಲೆ ಪ್ರೇರಣೆ
ಯಾವುದೇ ಪ್ರಚಾರ ಬಯಸದೆ ತನ್ನ ಪಾಡಿಗೆ ತಾನು ಎಂಬಂತೆ ಕಲೆಯನ್ನೇ ಉಸಿರಾಗಿಸಿಕೊಂಡು ಕೆತ್ತನೆಯಲ್ಲಿಯೇ ಬದುಕು ಕಟ್ಟಿಕೊಂಡಿರುವ ಕಿರಣ್ ಸುಬ್ಬಯ್ಯ ಮೂಲತಃ ಕೊಡಗಿನ ಪಾರಾಣೆಯ ಅಪ್ಪನೆರವಂಡ ಸುಬ್ಬಯ್ಯ ಹಾಗೂ ಶ್ರೀಮತಿ ಪಾಲಿಸುಬ್ಬಯ್ಯರವರ ಪುತ್ರ.. 1950 ಮೇ 24ರಂದು ಜನಿಸಿದ ಕಿರಣ್ಸುಬ್ಬಯ್ಯರವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಮೈಸೂರಿನ ಗುಡ್ಶೆಫರ್ಡ್, ಸೆಂಟ್ ಮೇರಿಸ್ ಶಾಲೆಯಲ್ಲಿ ಪಡೆದರು.

ಕಿರಣ್ ಸುಬ್ಬಯ್ಯ ಅವರಲ್ಲಿ ಶಿಲ್ಪಿಯಾಗಬೇಕೆಂಬ ಹಂಬಲವನ್ನು ಮೂಡಿಸಿದ್ದೇ ಬೇಲೂರು, ಹಳೆಬೀಡಿನ ಶಿಲ್ಪಕಲೆಗಳು ಎಂದರೆ ತಪ್ಪಾಗಲಾರದು. ಏಕೆಂದರೆ ಅವರು ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಓದುತ್ತಿದ್ದಾಗ ಅವರನ್ನು ಪ್ರವಾಸಕ್ಕೆಂದು ಬೇಲೂರು ಮತ್ತು ಹಳೆಬೀಡಿಗೆ ಕರೆದೊಯ್ಯಲಾಗಿತ್ತು. ಆಗ ಅಲ್ಲಿ ಕಂಡ ಶಿಲಾ ವೈಭವ ಅವರನ್ನು ಆಕರ್ಷಿಸಿತ್ತು. ಅದನ್ನೇ ನೋಡುತ್ತಾ ತಲ್ಲೀನರಾದರಲ್ಲದೆ, ನಾನೇಕೆ ಇಂತಹ ಕೆತ್ತನೆ ಮಾಡಬಾರದು ಎಂಬ ಪ್ರಶ್ನೆಯೊಂದು ಅವರ ಮನದಾಳದಲ್ಲಿ ಮೂಡಿತ್ತು.
ಶಿಲ್ಪನಿಕೇತನದ ಸೃಷ್ಟಿಹೇಗಾಯಿತು?
ಇದಕ್ಕೆ ಉತ್ತರ ಕಂಡುಕೊಳ್ಳುವ ಸಲುವಾಗಿ ಅವರು ತರಬೇತಿಗಾಗಿ ಮೈಸೂರಿನ ಶ್ರೀ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟ್ಯೂಟ್ ಸೇರಿದರು. ಆದರೆ ಅಲ್ಲಿ ತರಬೇತಿಯನ್ನು ಪೂರ್ಣಗೊಳಿಸದೆ ಅರ್ಧಕ್ಕೆ ಬಿಟ್ಟು ತಾವೇ ಮನೆಯಲ್ಲಿ ಬಳಪದ ಕಲ್ಲಿನಲ್ಲಿ ಸಣ್ಣಪುಟ್ಟ ಕಲಾಕೃತಿಗಳನ್ನು ಕೆತ್ತಲು ಆರಂಭಿಸಿದರು. ಮೊದಮೊದಲು ಕಷ್ಟವಾಗಿ ಕಂಡರೂ ಅದರಲ್ಲಿಯೇ ತಲ್ಲೀನರಾದರು. ದಿನಗಳು ಕಳೆದಂತೆಯೇ ಉಳಿಯ ಏಟಿಗೆ ಶಿಲೆಗಳಲ್ಲಿ ಸದ್ದಿಲ್ಲದೆ ಚಿತ್ತಾರಗಳು ಅರಳಲಾರಂಭಿಸಿದವು. ಅದೇ ಮುಂದೆ 'ಶಿಲ್ಪನಿಕೇತನ'ದ ಹುಟ್ಟಿಗೆ ಕಾರಣವಾಯಿತು.

ಕಿರಣ್ ಸುಬ್ಬಯ್ಯರವರ ಕಲಾ ಚಾತುರ್ಯತೆಗೆ ಅವರು 'ಶಿಲ್ಪನಿಕೇತನ'ದಲ್ಲಿ ಸಂಗ್ರಹಿಸಿಟ್ಟಿರುವ ಸುಮಾರು ನೂರಾರು ಶಿಲ್ಪಕಲಾಕೃತಿಗಳೇ ಸಾಕ್ಷಿಯಾಗಿವೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇ ಆದರೆ ಇಲ್ಲಿರುವ ಶಿಲ್ಪಗಳ ವೈಶಿಷ್ಟ್ಯತೆ ನಮಗೆ ಗೋಚರವಾಗುತ್ತದೆ. ಇಲ್ಲಿನ ಶಿಲ್ಪಗಳ ವೈಶಿಷ್ಟ್ಯವೆಂದರೆ ಒಂದೇ ಶಿಲ್ಪ ಬಹುರೂಪದಲ್ಲಿ ಗೋಚರಿಸುವುದು. ಇಂತಹವೊಂದು ಪ್ರಯೋಗ ವಿಶ್ವದಲ್ಲಿಯೇ ಪ್ರಥಮ ಎಂದು ಹೇಳಲಾಗುತ್ತಿದೆ. ಈಗಾಗಲೇ ಇವರ ಸಂಗ್ರಹಾಲಯದಲ್ಲಿರುವ ಶಿಲ್ಪಗಳಲ್ಲಿ ದ್ವಿಬಹುರೂಪಿ, ತ್ರಿಬಹುರೂಪಿ ಹಾಗೂ ಚತುರ್ ಬಹುರೂಪಿ ಶಿಲ್ಪಗಳು, ಪಂಚಬಹುರೂಪವಿರುವ ಅಪರೂಪದ ಶಿಲ್ಪಗಳಿರುವುದು ಇವರ ಕಲಾ ಕೌಶಲ್ಯತೆಗೆ ಹಿಡಿಕ ಕನ್ನಡಿಯಾಗಿದೆ.
ವಿಸ್ಮಯ ಮೂಡಿಸುವ ಶಿಲ್ಪಗಳು
ಇನ್ನು ಅವರ ಮನೆಯಲ್ಲಿ ಎಲ್ಲಿ ನೋಡಿದರಲ್ಲಿ ಶಿಲ್ಪಕಲಾಕೃತಿಗಳೇ ಕಾಣಸಿಗುತ್ತವೆ. ಮನೆಯಲ್ಲಿರುವ ಟೀಪಾಯಿ, ಟಿವಿ ಸ್ಟ್ಯಾಂಡ್ ಸೇರಿದಂತೆ ಮನೆಬಳಕೆಯ ಪೀಠೋಪಕರಣಗಳೆಲ್ಲವೂ ಶಿಲೆಯಿಂದಲೇ ನಿರ್ಮಾಣವಾಗಿದ್ದು, ಇವುಗಳೆಲ್ಲವನ್ನೂ ಪ್ರತ್ಯೇಕ ಕೋಣೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಅವರ ಒಂದೇ ಶಿಲ್ಪಕಲಾಕೃತಿ ವಿಭಿನ್ನ ರೀತಿಯಲ್ಲಿ ಗಮನಸೆಳೆಯುತ್ತದೆ. ಎಲ್ಲಾ ಭಾವನೆಗಳನ್ನು ಅವರು ಕಲೆಯ ಮೂಲಕ ತೆರೆದಿಟ್ಟಿದ್ದಾರೆ. ಭ್ರಷ್ಟತೆ, ಸ್ವಾರ್ಥ, ದುಷ್ಟತನವನ್ನು ಕೆಲವು ಶಿಲ್ಪಗಳು ಪ್ರತಿಬಿಂಬಿಸಿದರೆ, ಇನ್ನು ಕೆಲವು ಶಿಲ್ಪಗಳು ಒಬ್ಬ ಮನುಷ್ಯನ ಹಲವು ಮುಖಗಳನ್ನು ತೋರಿಸುತ್ತದೆ.

ಸುಂದರ ಮಹಿಳೆಯ ಸೌಂದರ್ಯ ಪ್ರದರ್ಶನ, ಪ್ರೇಯಸಿ ನಡುವಿನ ಶೃಂಗಾರ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯೊಬ್ಬಳ ಮೂಕರೋಧನ, ಗಂಡು ಹೆಣ್ಣಿನ ಸಮಾಗಮನ ಮುಂತಾದವುಗಳಲ್ಲದೆ, ಪ್ರೀತಿ, ಪ್ರೇಮ, ಪ್ರಣಯಗಳಿಗೆ ಸಂಬಂಧಿಸಿದ ಕಲಾಕೃತಿಗಳು, ನೃತ್ಯದ ಮೂಲಕ ಸ್ವಾಗತಿಸುವ ಶಿಲಾ ಬಾಲಕಿಯರು, ತಾಯಿ ಮಗುವಿನ ಸಂಬಂಧ, ರಾಮ ಸೀತೆ, ಲಕ್ಷ್ಮಣರಿಗೆ ಸ್ವಾಮಿ ಭಕ್ತಿ ತೋರುತ್ತಿರುವ ಹನುಮಂತ, ಹೀಗೆ ಒಂದಲ್ಲ, ಎರಡಲ್ಲ ನೂರಾರು ಭಾವನೆಗಳನ್ನು ಬಿಂಬಿಸುವ ಕಲಾಕೃತಿ ನಮ್ಮನ್ನು ಬೆರಗುಗೊಳಿಸುತ್ತದೆ.
ವಿಶ್ವ ವಿಖ್ಯಾತಿಯ 135 ಹೆಡೆಗಳ ಆದಿಶೇಷ
ಕಲ್ಲಿನಲ್ಲಿ ಒಂದೇ ಒಂದು ಶಿಲ್ಪವನ್ನು ಕೆತ್ತುವುದೇ ತ್ರಾಸವಾಗಿರುವಾಗ ಒಂದೇ ಶಿಲ್ಪಕ್ಕೆ ಎರಡು, ಮೂರು, ನಾಲ್ಕು, ಐದು ರೂಪವನ್ನು ನೀಡುವುದು ಅಷ್ಟು ಸುಲಭವಲ್ಲ ಆದರೂ ಯಾವುದು ಕಷ್ಟವೋ ಅದನ್ನೇ ಸುಲಭ ಮಾಡಿ ತೋರಿಸಿದ್ದಾರೆ ಹೀಗಾಗಿ ಅವರ ಕಲಾ ನೈಪುಣ್ಯತೆಯನ್ನು ದೂರದ ಅಮೇರಿಕಾ, ಇಂಗ್ಲೆಂಡ್, ಸಿಂಗಾಪುರ ಹಾಗೂ ಜರ್ಮನ್ ನ ಕಲಾ ರಸಿಕರು ಕೊಂಡಾಡಿದ್ದಾರೆ.

ಅವರ ಕೆತ್ತನೆಯಲ್ಲಿ ದಾಖಲೆ ಸೃಷ್ಟಿಸಿದ್ದು ಕೃಷ್ಣ ಶಿಲೆಯಲ್ಲಿ ಕೆತ್ತಲಾದ ಐದು ಅಡಿ ಎತ್ತರದ ಸುಮಾರು 135 ಹೆಡೆಗಳನ್ನು ಬಿಚ್ಚಿ ನಿಂತಿರುವ ಆದಿಶೇಷ. ಇದು ನೋಡುಗರನ್ನು ವಿಸ್ಮಯಗೊಳಿಸುತ್ತದೆ. ಈ ವಿಗ್ರಹದ ಹಿಂದೆ ಶ್ರೀಯಂತ್ರ, ಓಂಯಂತ್ರ, ಗಾಯತ್ರಿ ಮಂತ್ರವನ್ನು ಸುಂದರವಾಗಿ ಕೆತ್ತಲಾಗಿದೆ. ಇಲ್ಲಿಯೂ ತಮ್ಮ ಅಖಂಡ ಪ್ರತಿಭೆಯನ್ನು ಮೆರೆದಿದ್ದಾರೆ. ಈ ಹಿಂದೆ ನೇಪಾಳದಲ್ಲಿದ್ದ ಎರಡು ಅಡಿಯ 107 ಹೆಡೆಗಳ ಆದಿಶೇಷ ವಿಶ್ವದಲ್ಲಿಯೇ ವಿಶಿಷ್ಟ ಎಂಬ ಖ್ಯಾತಿಗೆ ಪಾತ್ರವಾಗಿ ಗಿನ್ನಿಸ್ ದಾಖಲೆಯಾಗಿತ್ತು. ಆದರೆ ಈಗ ಅದಕ್ಕಿಂತಲೂ ದೊಡ್ಡ ಕೆತ್ತನೆಯನ್ನು ಕಿರಣ್ಸುಬ್ಬಯ್ಯ ಮಾಡಿದ್ದಾರೆ. ಇವರು ಕೂಡ ತಮ್ಮ ಕೆತ್ತನೆಗೆ ಹೆಚ್.ಡಿ.ಕೋಟೆಯಲ್ಲಿ ದೊರೆಯುವ ಕೃಷ್ಣಶಿಲೆಯನ್ನು ಬಳಸುವುದು ವಿಶೇಷವಾಗಿದೆ.
ತೆರೆಮರೆಯಲ್ಲಿಯೇ ಅದ್ಭುತ ಸಾಧನೆ
ಇವತ್ತು ಕಿರಣ್ ಸುಬ್ಬಯ್ಯರವರು ಪ್ರಚಾರಕ್ಕೆ ಒತ್ತು ನೀಡದೆ ತಮ್ಮ ಪಾಡಿಗೆ ತಾವು ಎಂಬಂತೆ ತೆರೆಮರೆಯಲ್ಲಿದ್ದುಕೊಂಡೇ ಅದ್ಭುತ ಸಾಧನೆ ಮಾಡಿದ್ದಾರೆ. ಇವರ ಕಲೆಯನ್ನು ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವರು ಹತ್ತಿರದಿಂದ ನೋಡಿ ಖುಷಿಪಟ್ಟಿದ್ದಾರೆ. ಕಿರಣ್ ಸುಬ್ಬಯ್ಯರವರು ಇವತ್ತು ಸಾಧನೆ ಮಾಡಿದ್ದರೆ ಅದಕ್ಕೆ ಅವರ ಪತ್ನಿ ಮತ್ತು ಮಕ್ಕಳ ಪ್ರೋತ್ಸಾಹವೂ ಕಾರಣ ಎಂದರೆ ತಪ್ಪಾಗಲಾರದು.
ಕೊಡಗಿನವರು ಅಂದ್ರೆ ಕೋವಿ ಹಿಡಿಯುವ ಶೂರರು ಎಂಬ ಮಾತಿದೆ ಆದರೆ ಕಿರಣ್ಸುಬ್ಬಯ್ಯರವರು ಉಳಿ ಹಿಡಿದು ಜಗತ್ತೇ ನಿಬ್ಬೆರಗಾಗುವಂತಹ ಕಲೆಯನ್ನು ಧಾರೆ ಎರೆದಿದ್ದಾರೆ. ಇದಕ್ಕಿಂತಲೂ ಸಾಧನೆ ಇನ್ನೇನು ಬೇಕು? ಹಾಗಾದರೆ ಮೈಸೂರಿಗೆ ಬಂದವರು ನಗರದ ಹೈವೇ ಸರ್ಕಲ್ ಬಳಿಯಿರುವ ಶಿಲ್ಪನಿಕೇತನಕ್ಕೆ ಭೇಟಿ ನೀಡಿ ಅಪೂರ್ವ ಶಿಲ್ಪಕಲಾ ಪ್ರಪಂಚವನ್ನು ಕಣ್ತುಂಬಿಸಿಕೊಳ್ಳಲು ಮರೆಯದಿರಿ.












Click it and Unblock the Notifications