ವಿಡಿಯೋ; ಮತಾಂತರ ಕಾಯ್ದೆ, ಬಿಜೆಪಿ ವಿರುದ್ಧ ಎಚ್. ವಿಶ್ವನಾಥ್ ಅಸಮಾಧಾನ

ಮೈಸೂರು, ಡಿಸೆಂಬರ್ 23; "ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ 2021'ರ ಕುರಿತು ವಿಧಾನ ಪರಿಷತ್ ಸದಸ್ಯ ಮಾಜಿ ಸಚಿವ ಎಚ್. ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮದೇ ಪಕ್ಷದ ಸರ್ಕಾರದ ನಿರ್ಧಾರದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಚ್. ವಿಶ್ವನಾಥ್, "ಹೊಸ ಕಾಯ್ದೆ ಜಾರಿಗೆ ತರುವ ಮೂಲಕ‌ ಸಮಾಜವನ್ನು ಒಡೆಯುವ ಕೆಲಸ‌ ಮಾಡಲಾಗುತ್ತಿದೆ" ಎಂದು ಆರೋಪಿಸಿದರು.

"ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವಿದ್ದು, ವಿ ದಿ ಪೀಪಲ್ ಆಫ್ ಇಂಡಿಯಾ ಎಂದೇ ಪ್ರಾರಂಭವಾಗುತ್ತದೆ. ಮಹಾತ್ಮ ಗಾಂಧೀಜಿ ಕೂಡ ಅಂತರ್ ಜಾತಿ, ಅಂತರ್ ಧರ್ಮಗಳ ವಿವಾಹವನ್ನು ಪ್ರೋತ್ಸಾಹಿಸಿದ್ದಾರೆ" ಎಂದರು.

H Vishwanath

"ಪ್ರಧಾನಿ ಮೋದಿ ಅವರು ಸಹ ಮನಸ್ಸಿನ ಸ್ವಚ್ಛತೆ, ಸೃಜನ ಶೀಲತೆ ಹಾಗೂ ಆತ್ಮ ನಿರ್ಭರತೆಗೆ ಒತ್ತು ಕೊಟ್ಟು ಹೇಳಿದ್ದಾರೆ. ಆದರೆ ನರೇಂದ್ರ ಮೋದಿ ಈವರೆಗೂ ಎಲ್ಲೂ ಸಹ ಹಿಂದುತ್ವದ ಬಗ್ಗೆ ಹೇಳಿಲ್ಲ. ಬಸವಣ್ಣ, ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರುಗಳು ಮಾನವ ಧರ್ಮದ ಪ್ರತಿಪಾದಕರುಗಳಾಗಿದ್ದಾರೆ. ಆದರೆ ಇದೀಗ ಬಸವಣ್ಣನವರ ಕೈಯಿಂದಲೇ ಸಮಾಜ ಒಡೆಯುವ ಕೆಲಸ ಮಾಡಿಸಿದಂತಿದ್ದು, ಹೊಸ ಕಾಯ್ದೆ ಮೂಲಕ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದಾರೆ" ಎಂದು ಸರ್ಕಾರದ ವಿರುದ್ಧವೇ ಹರಿಹಾಯ್ದರು.

ಅವರನ್ನೆಲ್ಲಾ ಜೈಲಿಗೆ ಹಾಕಲಾಗುತ್ತದೆಯೇ?; "ದೇಶದಲ್ಲಿ ಅನೇಕ ಮಂದಿ ಆರ್‌ಎಸ್‌ಎಸ್ ನಾಯಕರ ಕೆಲವು ಮಕ್ಕಳು ಮುಸ್ಲಿಂ ಧರ್ಮದವರನ್ನು ಮದುವೆ ಆಗಿದ್ದಾರೆ. ಸಿನಿಮಾ ನಟ-ನಟಿಯರು ಸಹ ಮುಸ್ಲಿಂ ಧರ್ಮದವರನ್ನು ಮದುವೆ ಆಗಿದ್ದಾರೆ. ಹಾಗಾದರೆ ಅವರನ್ನೆಲ್ಲಾ ಜೈಲಿಗೆ ಹಾಕಲಾಗುತ್ತದೆಯೇ?" ಎಂದು ವಿಶ್ವನಾಥ್ ಪ್ರಶ್ನಿಸಿದರು.

"ಮತಾಂತರ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ಇಬ್ಭಂದಿತನ ತೋರುತ್ತಿದೆ. ಹರಟೆ ಹೊಡೆಯುತ್ತಾ ಕುಳಿತ ಕಾಂಗ್ರೆಸ್ ನಾಯಕರು ಸಭೆಗೆ ಬರುವ ಮುನ್ನ ಕಾಯ್ದೆ ಮಂಡನೆ ಆಗಿತ್ತು. ಆಮೇಲೆ ಸದನಕ್ಕೆ ಬಂದು ನಾಟಕವಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ದಲಿತರು ಮುಸ್ಲಿಮರು ಹಾಗೂ ಹಿಂದುಳಿದವರು ನಿಮ್ಮ ವೋಟ್ ಬ್ಯಾಂಕ್ ಆಗಿದ್ದು ಇವರ ಪರ ಹೋರಾಟ ಮಾಡುತ್ತಿದ್ದೀರಾ?. ದಲಿತರು ಮತಾಂತರ ಆಗಲೇ ಬಾರದು ಎಂದು ದಿಗ್ಬಂಧನ ಹಾಕುತ್ತಿದ್ದಾರೆ. ಇದು ಯಾವ ನ್ಯಾಯ?" ಎಂದು ಎಚ್. ವಿಶ್ವನಾಥ್ ಕೇಳಿದರು.

ಇನ್ನೂ ಮತಾಂತರ ನಿಷೇಧ ಕಾಯ್ದೆ ವಿಚಾರದ ಬಗ್ಗೆ ಚಕಾರವೆತ್ತದ ಸ್ವಾಮೀಜಿಗಳು, ಮಠ ಮಾನ್ಯಗಳ ವಿರುದ್ಧವೂ ವಾಗ್ದಾಳಿ ನಡೆಸಿದ ವಿಶ್ವನಾಥ್, "ಸ್ವಾಮೀಜಿಗಳು, ಮಠ ಮಾನ್ಯಗಳು ಮತಾಂತರ ಕಾಯ್ದೆ ಬಗ್ಗೆ ಮಾತನಾಡುತ್ತಲೇ ಇಲ್ಲ. ಬಸವೇಶ್ವರರ ಹೆಸರಲ್ಲಿ ಪಾರಿತೋಷಕ ನೀಡುವವರು ಸಹ ಬಾಯಿ ಮುಚ್ಚಿ ಕುಳಿತಿದ್ದಾರೆ. ಅಹಿಂದ ಹಾಗೂ ವೀರಶೈವ ಸ್ವಾಮೀಜಿಗಳು ಸಹ ಮಾತನಾಡುತ್ತಿಲ್ಲ. ಹಾಗಾದರೆ ನಿಮ್ಮ ಬಾಯಿ ಕಟ್ಟಿರುವವರು ಯಾರು?. ಸಾಹಿತಿಗಳು, ಚಿಂತಕರು ಕಾಣುತ್ತಲೇ ಇಲ್ಲ. ಸಾಹಿತಿಗಳು ರಾಜ್ಯೋತ್ಸವ ಪ್ರಶಸ್ತಿಗಷ್ಟೇ ಸೀಮಿತವಾಗಿದ್ದು, ಏಕೆ ನೀವೆಲ್ಲ ಬಾಯಿ ಮುಚ್ಚಿಕೊಂಡು ಕುಳಿತಿದ್ದೀರಿ?" ಎಂದು ಕಿಡಿಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+