• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ಮುಜುಗರ ತಂದ ಬಸ್ ನಿಲ್ದಾಣದ 'ಗುಂಬಜ್' ವಿವಾದ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 16; ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಲ್ಲಿ ಬರುವ ಕೆಲವು ಪ್ರಯಾಣಿಕರ ತಂಗುದಾಣದ ಮೇಲೆ ಗುಂಬಜ್ ನಿರ್ಮಿಸಿರುವ ವಿಚಾರ ಈಗ ರಾಜಕೀಯ ಕೆಸರು ಎರಚಾಟಕ್ಕೆ ಕಾರಣವಾಗಿದೆ.

ಮೈಸೂರು-ಕೊಡಗು ಬಿಜೆಪಿ ಸಂಸದ ಮತ್ತು ಶಾಸಕರ ನಡುವಿನ ಸಮನ್ವಯದ ಕೊರತೆ ಇಷ್ಟೊಂದು ರಾದ್ಧಾಂತಕ್ಕೆ ಕಾರಣವಾಯಿತಾ? ಎಂಬ ಪ್ರಶ್ನೆ ಶಾಸಕರು ಸ್ಪಷ್ಟನೆ ನೀಡಿದ ಬಳಿಕ ಕಾಡುತ್ತಿದೆ.

ಬಸ್‌ ನಿಲ್ದಾಣದ ಮೇಲಿನ ಗುಂಬಜ್ ಒಡೆಯಲು ಪ್ರತಾಪ ಸಿಂಹ ಯಾರು: ಸಿದ್ದರಾಮಯ್ಯ ಕಿಡಿ ಬಸ್‌ ನಿಲ್ದಾಣದ ಮೇಲಿನ ಗುಂಬಜ್ ಒಡೆಯಲು ಪ್ರತಾಪ ಸಿಂಹ ಯಾರು: ಸಿದ್ದರಾಮಯ್ಯ ಕಿಡಿ

ಪ್ರಯಾಣಿಕರ ತಂಗುದಾಣದ ಬಗೆಗೆ ಆ ಕ್ಷೇತ್ರದ ಶಾಸಕ ಎಸ್‍. ಎ. ರಾಮದಾಸ್ ಅವರಿಂದ ಮಾಹಿತಿ ಪಡೆಯದೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಪ್ರಯಾಣಿಕರ ತಂಗುದಾಣದ ಮೇಲಿನ ಗುಂಬಜ್ ಗಳನ್ನು ತೆರವು ಗೊಳಿಸದಿದ್ದರೆ ಜೆಸಿಬಿ ತಂದು ಒಡೆದು ಹಾಕುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಕೆ.ಆರ್.ಕ್ಷೇತ್ರದ ಬಸ್ ನಿಲ್ದಾಣದ ಮೇಲಿರುವ ಗುಂಬಜ್ ತೆರವಿಗೆ ಸಂಸದ ಪ್ರತಾಪ್‌ ಸಿಂಹ ಒತ್ತಾಯ ಕೆ.ಆರ್.ಕ್ಷೇತ್ರದ ಬಸ್ ನಿಲ್ದಾಣದ ಮೇಲಿರುವ ಗುಂಬಜ್ ತೆರವಿಗೆ ಸಂಸದ ಪ್ರತಾಪ್‌ ಸಿಂಹ ಒತ್ತಾಯ

ಸದ್ಯ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಜತೆಗೆ ರಾಜಕೀಯ ನಾಯಕರು ತಮಗೆ ತೋಚಿದಂತೆ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಲೇ ಸಾಗುತ್ತಿದ್ದಾರೆ. ಇದರ ನಡುವೆ ಅಂತೆ ಕಂತೆಗಳ ಸುದ್ದಿಗಳಿಗೆ ಬರವಿಲ್ಲ.

 ಮುಂದಿನ 3 ವರ್ಷಗಳಲ್ಲಿ ನಾಗನಹಳ್ಳಿ ಟರ್ಮಿನಲ್ ಪೂರ್ಣ: ಪ್ರತಾಪ್ ಸಿಂಹ ಮುಂದಿನ 3 ವರ್ಷಗಳಲ್ಲಿ ನಾಗನಹಳ್ಳಿ ಟರ್ಮಿನಲ್ ಪೂರ್ಣ: ಪ್ರತಾಪ್ ಸಿಂಹ

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಚಿಕ್ಕ ಚಿಕ್ಕ ವಿಚಾರಗಳು ಕೂಡ ದೊಡ್ಡ ದೊಡ್ಡ ವಿವಾದಗಳನ್ನು ಹುಟ್ಟು ಹಾಕುತ್ತಿವೆ. ಪ್ರಯಾಣಿಕರ ತಂಗುದಾಣದ ಮೇಲಿದ್ದ ಗುಂಬಜ್ ನೋಡಿದ ಜನರಲ್ಲಿ ಯಾವ ಭಾವನೆಗಳು ಬಂದಿರಲಿಲ್ಲ. ಕಾರಣ ಪಾರಂಪರಿಕ ನಗರಿ ಮೈಸೂರಿನ ಕಟ್ಟಡಗಳು ಗುಮ್ಮಟಗಳಿಂದ ಕೂಡಿದೆ. ಅದರಂತೆ ಪ್ರಯಾಣಿಕರ ತಂಗುದಾಣದ ಮೇಲೆ ಗುಮ್ಮಟಗಳನ್ನು ನಿರ್ಮಿಸುವ ಮೂಲಕ ಪಾರಂಪರಿಕ ನಗರಿಗೆ ಒತ್ತು ನೀಡುವ ಕಾರ್ಯವನ್ನು ಮಾಡಲಾಗಿತ್ತು.

ಮನಸ್ತಾಪಕ್ಕೆ ತುಪ್ಪ ಸುರಿದ ಗುಂಬಜ್ ವಿವಾದ

ಮನಸ್ತಾಪಕ್ಕೆ ತುಪ್ಪ ಸುರಿದ ಗುಂಬಜ್ ವಿವಾದ

ಸಂಸದ ಪ್ರತಾಪ್ ಸಿಂಹ ಈ ವಿಚಾರವನ್ನು ಪ್ರಸ್ತಾಪಿಸುವ ಮತ್ತು ಈ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ತನಕವೂ ಪ್ರಯಾಣಿಕರ ತಂಗುದಾಣ ಎಲ್ಲರ ಕಣ್ಣಿಗೂ ಪಾರಂಪರಿಕ ನಗರವನ್ನು ಪ್ರತಿಬಿಂಬಿಸುವ ಗುಮ್ಮಟದಂತೆಯೇ ಭಾಸವಾಗಿತ್ತು. ಅವರ ಹೇಳಿಕೆ ಬಳಿಕ ಅದು ಒಬ್ಬೊಬ್ಬರ ಕಣ್ಣಿಗೆ ಒಂದೊಂದು ರೀತಿಯಲ್ಲಿ ಕಾಣಲು ಆರಂಭಿಸಿತು. ಜತೆಗೆ ಧರ್ಮ, ರಾಜಕೀಯ ಬೆರೆತು ದೊಡ್ಡ ಸುದ್ದಿಯಾಗಿ ಹೊರ ಬರತೊಡಗಿತು. ಈ ವಿಚಾರದಲ್ಲಿ ನಡೆದ ರಾಜಕೀಯ ಮತ್ತೆ ಬಿಜೆಪಿ ಪಕ್ಷದ ಸಂಸದ ಮತ್ತು ಶಾಸಕರ ನಡುವಿನ ಮನಸ್ತಾಪಕ್ಕೆ ತುಪ್ಪ ಸುರಿದಂತೆ ಆಗಿದೆ.

ಎಣ್ಣೆಸೀಗೆಕಾಯಿ ಸಂಬಂಧ

ಎಣ್ಣೆಸೀಗೆಕಾಯಿ ಸಂಬಂಧ

ಮೊದಲೇ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್. ಎ. ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ನಡುವೆ ಎಣ್ಣೆಸೀಗೆಕಾಯಿ ಸಂಬಂಧವಿದೆ. ಈ ಹಿಂದೆ ಇವರ ನಡುವಿನ ಕಿತ್ತಾಟಗಳು ಸುದ್ದಿ ಮಾಡಿದ್ದವು. ತದನಂತರ ಉನ್ನತ ನಾಯಕರ ಮಧ್ಯಪ್ರವೇಶದಿಂದ ತಣ್ಣಗಾಗಿದ್ದವು. ಈಗ ನಡೆದ ಬೆಳವಣಿಗೆಯನ್ನು ಗಮನಿಸಿದರೆ ಮತ್ತೆ ಶಾಸಕ ಮತ್ತು ಸಂಸದರ ನಡುವಿನ ಜಟಾಪಟಿಗೆ ಕಾರಣವಾಗುತ್ತಿದೆ ಎನ್ನುವುದಕ್ಕಿಂತ ಬಿಜೆಪಿ ಪಕ್ಷಕ್ಕೆ ಮುಜುಗರ ತಂದರೆ ಅಚ್ಚರಿಯಿಲ್ಲ. ಸದ್ಯ ಗುಂಬಜ್ ಮಾದರಿಯ ಪ್ರಯಾಣಿಕರ ತಂಗುದಾಣಗಳನ್ನು ಬಿಜೆಪಿ ಶಾಸಕ ಎಸ್. ಎ. ರಾಮದಾಸ್ ಅವರು ಪ್ರತಿನಿಧಿಸುವ ಕೆ. ಆರ್. ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ.

ಗುಂಬಜ್ ಹಿಂದಿನ ಅಸಲಿಯತ್ತೇನು?

ಗುಂಬಜ್ ಹಿಂದಿನ ಅಸಲಿಯತ್ತೇನು?

ಜತೆಗೆ ಈಗಾಗಲೇ ಹರಿದಾಡುತ್ತಿರುವ ಅಂತೆ, ಕಂತೆ ಸುದ್ದಿಗಳಲ್ಲೂ ತಿರುಳಿಲ್ಲದಾಗಿದೆ. ಕೆಲವೆಡೆ ಪ್ರಯಾಣಿಕರ ತಂಗುದಾಣದ ಗುತ್ತಿಗೆ ಪಡೆದ ವ್ಯಕ್ತಿ ಮುಸ್ಲಿಂ ಆಗಿದ್ದು, ಹೀಗಾಗಿಯೇ ಗುಂಬಜ್ ನಿರ್ಮಿಸಲಾಗಿದೆ ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಪ್ರತಾಪ್ ಸಿಂಹ ಹೇಳಿಕೆಯ ಬಳಿಕ ಕಾಂಗ್ರೆಸ್ ನಾಯಕರು ಪುಟಿದೆದ್ದಿದ್ದಾರೆ. ರಾಜಕೀಯವಾಗಿ ಇದನ್ನು ಬಳಸಿಕೊಳ್ಳಲು ಎಲ್ಲರೂ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಪ್ರಕರಣ ತಾರಕಕ್ಕೇರುತ್ತಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಸಲಿಯತ್ತು ಏನು ಎಂಬುದನ್ನು ಪ್ರಯಾಣಿಕರ ತಂಗುದಾಣದ ಮೇಲೆ ಗುಮ್ಮಟ ನಿರ್ಮಿಸುವಂತೆ ಸೂಚಿಸಿದ ಶಾಸಕ ರಾಮದಾಸ್ ಅವರೇ ಬಿಚ್ಚಿಟ್ಟಿದ್ದಾರೆ. ಜತೆಗೆ ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ.

ಇಷ್ಟಕ್ಕೂ ಶಾಸಕರು ಹೇಳುತ್ತಿರುವುದೇನು?

ಇಷ್ಟಕ್ಕೂ ಶಾಸಕರು ಹೇಳುತ್ತಿರುವುದೇನು?

ಇಷ್ಟಕ್ಕೂ ಶಾಸಕ ಎಸ್. ಎ. ರಾಮದಾಸ್ ಹೇಳಿದ್ದೇನು? ಎಂದು ನೋಡುವುದಾದರೆ ಮೈಸೂರು ನಗರ ಪಾರಂಪರಿಕ ನಗರಿಯಾಗಿರುವುದರಿಂದ ಇದರ ಮಹತ್ವ ಸಾರುವ ಉದ್ದೇಶದಿಂದ ಕೆ. ಆರ್. ಕ್ಷೇತ್ರದ 54ನೇ ವಾರ್ಡ್‍ನ ಬೆಂಗಳೂರು ನೀಲಗಿರಿ (ಊಟಿ) ರಸ್ತೆಯಲ್ಲಿ ಶಾಸಕರ ನಿಧಿಯಿಂದ 10 ಲಕ್ಷ ರೂ ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಶೇ. 60ರಷ್ಟು ಕಾಮಗಾರಿ ಮುಗಿದಿದೆ. ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.

ಮೈಸೂರಿನ ಪಾರಂಪರಿಕತೆಯನ್ನು ತೋರಿಸುವ ದೃಷ್ಟಿಯಲ್ಲಿ ಅರಮನೆಯಲ್ಲಿರುವ ಮಾದರಿಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಮಸೀದಿ ರೀತಿಯಲ್ಲಿ ತಂಗುದಾಣವನ್ನು ನಿರ್ಮಿಸಲಾಗುತ್ತಿದೆ ಎಂಬ ಸುದ್ದಿಯನ್ನು ಹರಡಲಾಗುತ್ತಿದೆ. ಇದರ ಗುತ್ತಿಗೆದಾರ ಮುಸ್ಲಿಂ ವ್ಯಕ್ತಿ ಅಲ್ಲ. ದಂತಿ ಕನ್ ಸ್ಟ್ರಕ್ಷನ್ ಹೆಸರಿನಲ್ಲಿ ಮಹದೇವ್ ಎಂಬುವವರು ನಿರ್ಮಿಸುತ್ತಿದ್ದಾರೆ. ಈ ತಂಗುದಾಣಗಳಲ್ಲಿ ಎಲ್ ಇಡಿ ಸ್ಟ್ರೀನ್ ಅಳವಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಾಗುವುದು.

ರಾತ್ರೋರಾತ್ರಿ ಕಳಸ ಅಳವಡಿಸಿಲ್ಲ

ರಾತ್ರೋರಾತ್ರಿ ಕಳಸ ಅಳವಡಿಸಿಲ್ಲ

ಕಾಮಗಾರಿ ಹಂತಹಂತವಾಗಿ ನಡೆಯುತ್ತಿದೆ. ಸಂಸದರ ಹೇಳಿಕೆ ಬಳಿಕ ರಾತ್ರೋರಾತ್ರಿ ಕಳಸ ಅಳವಡಿಸಲಾಗಿದೆ ಎಂಬ ಸುದ್ದಿಗಳು ಸುಳ್ಳು. ಇದನ್ನು ವಾರದ ಹಿಂದೆಯೇ ನಿರ್ಮಿಸಲಾಗಿದೆ. ಮೈಸೂರಿನ ಹಲವಾರು ಕಡೆಗಳಲ್ಲಿ ಇಂತಹ ತಂಗುದಾಣವನ್ನು ನಿರ್ಮಿಸಲಾಗಿದೆ. ಈ ವಿನ್ಯಾಸಗಳಿಂದ ವಿವಾದವಾಗಿದೆ ಎನ್ನುವುದಾದರೆ ತಜ್ಞರ ಸಮಿತಿ ರಚನೆ ಮಾಡಿ ಅವರು ವರದಿ ನೀಡಲಿ ಎಂದು ಮನವಿ ಮಾಡಿದ್ದಾರೆ. ಪ್ರಯಾಣಿಕರ ತಂಗುದಾಣವನ್ನು ಪಾರಂಪರಿಕ ದೃಷ್ಟಿಯಿಂದ ನಿರ್ಮಿಸಲಾಗಿದೆ ಹೊರತು ಧರ್ಮದ ಆಧಾರದಲ್ಲಿ ಅಲ್ಲ ಎಂದು ರಾಮದಾಸ್ ಸ್ಪಷ್ಟೀಕರಣ ನೀಡಿದ್ದಾರೆ.

ಈ ವಿಚಾರ ಇಲ್ಲಿಗೆ ತಣ್ಣಗೆ ಆಗುತ್ತಾ ಅಥವಾ ಬೇರೆ ರೂಪ ಪಡೆಯುತ್ತದೆಯೇ ಗೊತ್ತಿಲ್ಲ. ಆದರೆ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಮೈಸೂರು ಭಾಗದಲ್ಲಿ ಇದು ಶಾಸಕ ವರ್ಸಸ್ ಸಂಸದ ಎಂಬ ಜಿದ್ದಾಜಿದ್ದಿಗೆ ಕಾರಣವಾದರೂ ಅಚ್ಚರಿಯಿಲ್ಲ. ಭುಗಿಲೆದ್ದಿರುವ ವಿವಾದವನ್ನು ಬಿಜೆಪಿ ನಾಯಕರು ಯಾವ ರೀತಿಯಲ್ಲಿ ತಣ್ಣಗೆ ಮಾಡುತ್ತಾರೋ ಗೊತ್ತಿಲ್ಲ. ಆದರೆ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ರಾಮದಾಸ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.

English summary
Mysuru city Nanjangudu road gumbaz-shaped bus shelter embarrassed BJP. Kodagu-Mysuru MP Pratap Simha sparked a controversy by his statement on bus shelter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X