ಎರಡು ವಾರ ಸಮಯ ಕೊಡಿ, ಕೊರೊನಾ ನಿಯಂತ್ರಣ ಮಾಡುತ್ತೇವೆ: ಮೈಸೂರು ಡಿಸಿ ರೋಹಿಣಿ ಸಿಂಧೂರಿ
ಮೈಸೂರು, ಅಕ್ಟೋಬರ್ 5: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ, ನಮಗೆ ಎರಡು ವಾರ ಸಮಯ ಕೊಡಿ, ಮೈಸೂರಿನಲ್ಲಿ ಕೊರೊನಾ ನಿಯಂತ್ರಣ ತರುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾಲಾವಕಾಶ ಕೇಳಿದ್ದಾರೆ.
ಕೊರೊನಾ ನಿಯಂತ್ರಣ ಸಭೆ ಬಳಿಕ ಸಚಿವ ಡಾ.ಕೆ ಸುಧಾಕರ್ ಮಾತನಾಡಿ, ""ಜಿಲ್ಲಾಧಿಕಾರಿಗಳು ಬಹಳ ವಿಶ್ವಾಸದಿಂದ ಕಾಲವಕಾಶ ಕೇಳಿದ್ದಾರೆ, ನಾವು ಕೊಟ್ಟಿದ್ದೇವೆ'' ಎಂದು ತಿಳಿಸಿದರು. ದಸರಾ ವಿಚಾರದಲ್ಲಿ ಇನ್ನು ಹಲವು ಮಾರ್ಪಾಡುಗಳನ್ನು ಮಾಡಲು ಚರ್ಚೆ ನಡೆದಿದೆ. ದಸರಾವನ್ನು ತೀರ ಸರಳವಾಗಿ ಮಾಡುವ ಅವಶ್ಯಕತೆ ಇದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಸಚಿವ ಡಾ.ಕೆ ಸುಧಾಕರ್ ಹೇಳಿದರು.

ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇಷ್ಟ ಇಲ್ಲ
ದಸರಾದಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇಷ್ಟ ಇಲ್ಲ. ಕೇರಳದಲ್ಲಿ ಓಣಂನ್ನು ವಿಜೃಂಭಣೆಯಿಂದ ಆಚರಣೆ ಮಾಡಿ ಸಾಕಷ್ಟು ಸಮಸ್ಯೆ ಆಗಿದೆ. ಮೈಸೂರಿನಲ್ಲಿ ಅದೇ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬುದು ನಮ್ಮ ಉದ್ದೇಶ. ಈಗಾಗಿ ಹಲವು ಮಾರ್ಪಾಡುಗಳಿಗಾಗಿ ಶೀಘ್ರದಲ್ಲಿ ಸಭೆ ನಡೆಸಲಾಗುವುದು ಎಂದು ಮೈಸೂರಿನಲ್ಲಿ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದರು.

ಆಕ್ಸಿಜನ್ ಬೆಡ್ ಗಳ ಕೊರತೆಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಳ
ರಾಜ್ಯಾದ್ಯಂತ 33 ಸಾವಿರ ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮುಂದೆ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಬೆಡ್ ಲಭ್ಯವಾಗಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ವೆಂಟಿಲೇಟರ್ ಇಲ್ಲದ ಕಾರಣ ಸಾವಿನ ಪ್ರಮಾಣ ಹೆಚ್ಚಳವಾಗಿಲ್ಲ, ಆಕ್ಸಿಜನ್ ಬೆಡ್ ಗಳ ಕೊರತೆಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.
ಈಗ ಆಕ್ಸಿಜನ್ ಬೆಡ್ ಗಳ ಕೊರತೆ ನೀಗಿಸಲಾಗುತ್ತಿದೆ ಎಂದರು.

ಕೊರೊನಾ ಹೆಚ್ಚಳವಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ನಂ ೨
65 ವರ್ಷ ಮೇಲ್ಪಟ್ಟವರು ಸ್ವಯಂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವ ಅಗತ್ಯವಿದ್ದು, 65 ವರ್ಷ ಮೇಲ್ಪಟ್ಟವರ ಸರ್ವೇ ಮಾಡಿಸಲು ಸೂಚಿಸಲಾಗಿದೆ. ದಿನೇ ದಿನೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದೇಶದಲ್ಲೇ ಕೊರೊನಾ ಹೆಚ್ಚಳವಾಗುತ್ತಿರುವ ರಾಜ್ಯಗಳಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ ಎಂಬ ಆಘಾತಕಾರಿ ಸುದ್ದಿ ತಿಳಿಸಿದರು.

ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಒಂದೇ ಮದ್ದು
ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ಕೊರೊನಾ ಕಾರ್ಯಪಡೆ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಶ್ರಮವಹಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಭರವಸೆ ನೀಡಿದರು.
ಮಾಸ್ಕ್ ಧರಿಸದಿದ್ದರೆ 1,000 ರುಪಾಯಿ ದಂಡ ವಿಧಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಕೇವಲ ಹಣ ವಸೂಲಿ ಮಾಡುವ ಉದ್ದೇಶದಿಂದ ದಂಡ ಹಾಕುತ್ತಿಲ್ಲ, ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಒಂದೇ ಮದ್ದು. ಹಾಗಾಗಿ ದಂಡದ ಮೂಲಕವೇ ಜನರನ್ನು ಜಾಗೃತಿಗೊಳಿಸಬೇಕಾಗಿದೆ ಎಂದು ಹೇಳಿದರು.












Click it and Unblock the Notifications