ಮೈಸೂರಿಗೆ ಬಂದ ಜರ್ಮನಿ ಹಿರಿಯ ಪೊಲೀಸ್ ಅಧಿಕಾರಿಗಳು: ಇಲ್ಲಿದೆ ವಿವರ
ಮೈಸೂರು, ಅಕ್ಟೋಬರ್ 26: ಮೈಸೂರು ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ, ತರಬೇತಿ ವಿಭಾಗದ ಎಡಿಜಿಪಿಗಳಾದ ಅಲೋಕ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರ್ಮನಿ ದೇಶದ ಬವೇರಿಯಾ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಎರಡು ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.
ವಿಚಾರ ಸಂಕಿರಣದಲ್ಲಿ ಕರ್ನಾಟಕ ಸರ್ಕಾರ ಮತ್ತು ಜರ್ಮನಿ ದೇಶಗಳ ಬಾಂದವ್ಯ ವೃದ್ಧಿ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಜರ್ಮನಿ ದೇಶದ ಬವೇರಿಯಾ ರಾಜ್ಯದ ಪೊಲೀಸ್ ಇಲಾಖೆಯೊಂದಿಗೆ 2016 ರಿಂದ ತರಬೇತಿ ವಿಭಾಗದಲ್ಲಿ ಪರಸ್ಪರ ಮಾಹಿತಿ, ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರತೆ, ಕುರಿತು ಸಹಕಾರ ವೃದ್ಧಿಸಲು ಒಪ್ಪಂದ ಮಾಡಿಕೊಂಡಿದೆ. ಅದರ ಅನ್ವಯ ಎರಡು ರಾಜ್ಯಗಳ ಅಧಿಕಾರಿಗಳು ತರಬೇತಿ ಕುರಿತು ಭೇಟಿ ಹಾಗೂ ಸನ್ನಿವೇಶ ಆಧಾರಿತ ತರಬೇತಿ (Scenario Based Learning) ಅಭಿವೃದ್ಧಿಪಡಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಯಿತು.

ಬವೇರಿಯಾ ರಾಜ್ಯದ ಜನಸಂಖ್ಯೆ ಅಂದಾಜು 7 ಕೋಟಿಯಷ್ಟಿದ್ದು ಯುರೋಪಿನಲ್ಲಿಯೇ ಉತ್ತಮ ಪೊಲೀಸ್ ವ್ಯವಸ್ಥೆಯನ್ನು ಹೊಂದಿದೆ. ಎರಡೂ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧಗಳ ಪತ್ತೆ ಮತ್ತು ನಿಯಂತ್ರಣ, ಮಹಿಳೆಯರ ಮತ್ತು ಮಕ್ಕಳ ವಿರುದ್ಧದ ಅಪರಾಧಗಳು, ಸಂಚಾರ ನಿರ್ವಹಣೆ ಹಾಗೂ ಸೈಬರ್ ಅಪರಾಧಗಳ ಪತ್ತೆ ಮತ್ತು ತಡೆಗಟ್ಟುವಿಕೆ ಕುರಿತು ಪರಿಣಾಮಕಾರಿಯಾಗಿ ಆಧಿಕಾರಿಗಳಿಗೆ ಸನ್ನಿವೇಶ ಆಧಾರಿತ ತರಬೇತಿ ನೀಡುವ ಕುರಿತು ಕೌಶಲ್ಯ ಅಭಿವೃದ್ಧಿಪಡಿಸುವ ಬಗ್ಗೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಬವೇರಿಯಾ ರಾಜ್ಯದ ತರಬೇತಿ ಮುಖ್ಯಸ್ಥರಾದ ಶ್ರೀ ಆಂಡ್ರಿಯನ್ ಡೈಟೆಲ್‌ರವರು ಕರ್ನಾಟಕ ಪೊಲೀಸ್‌ನ ಎಲ್ಲಾ ತರಬೇತಿ ಶಾಲೆಗಳ ಮುಖ್ಯಸ್ಥರೊಂದಿಗೆ ವಿಚಾರ ವಿನಿಮಯ ಮಾಡಿದರು.
ವಿಚಾರ ಸಂಕಿರಣದಲ್ಲಿ ಜರ್ಮನಿಯ ಬವೇರಿಯಾ ಮತ್ತು ಕರ್ನಾಟಕ ರಾಜ್ಯದ ಮಧ್ಯ ಸಮನ್ವಯ ಸಾಧಿಸುವ ಸಂಸ್ಥೆಯಾದ ಹ್ಯಾನ್ ಸೀಡಲ್ ಫೌಂಡೇಶನ್‌ನ ಅಧಿಕಾರಿಗಳಾದ ಜುಡಿತ್ ವೇನ್‌ಭರ್ಗರ್ ಹಾಗೂ ಡಾ. ಅರುಲ್, ತರಬೇತಿ ವಿಭಾಗದ ಡಿಐಜಿಪಿ ಬೋರಲಿಂಗಯ್ಯ, ಕೆಪಿಎ ನಿರ್ದೇಶಕರಾದ ಚೆನ್ನಬಸವಣ್ಣ ಎಸ್.ಎಲ್., ಉಪ ನಿರ್ದೇಶಕರು ಸೇರಿದಂತೆ ರಾಜ್ಯದ 11 ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರುಗಳು ಹಾಗೂ ಕೆಪಿಎನ ಸಹಾಯಕ ನಿರ್ದೇಶಕರುಗಳು ಉಪಸ್ಥಿತರಿದ್ದರು.












Click it and Unblock the Notifications