ನಾರಾಯಣಪುರದಲ್ಲಿ ವೃದ್ಧನ ಸಾವಿಗೆ ಕಾರಣವಾದ ಬೇಲಿ ತೆರವಿಗೆ ಆಗ್ರಹ
ಮೈಸೂರು, ಜನವರಿ 03: ಜನರು ಸಂಚರಿಸದಂತೆ ರಸ್ತೆಗೆ ಅಡ್ಡಲಾಗಿ ವ್ಯಕ್ತಿಯೊಬ್ಬರು ಬೇಲಿ ಹಾಕಿದ್ದು ಇದರಿಂದ ಹಲವರಿಗೆ ತೊಂದರೆಯಾಗಿದ್ದು, ಹೃದಯಾಘಾತವಾದ ವೃದ್ಧರೊಬ್ಬರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ರಸ್ತೆಯಿಲ್ಲದ ಪರಿಣಾಮ ಸಾವನ್ನಪ್ಪಿದ್ದಾರೆ ಎಂಬ ಆರೋಪ ಪಿರಿಯಾಪಟ್ಟಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಕೇಳಿಬಂದಿದೆ.
ನಾರಾಯಣಪುರ ಗ್ರಾಮದ ನಿವಾಸಿ ವೃದ್ಧ ತಿಮ್ಮಯ್ಯನಾಯಕ(80) ಎಂಬುವರಿಗೆ ಹೃದಯಾಘಾತವಾಗಿದ್ದು ಇವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೆ ಬದುಕಿ ಉಳಿಯುತ್ತಿದ್ದರೇನೋ ಆದರೆ ಗ್ರಾಮದಿಂದ ಬೆಣಗಾವಲು ಮೂಲಕ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಗ್ರಾಮದ ನಿವಾಸಿ ರಂಗನಾಯಕ ಎಂಬುವರು ಬೇಲಿ ಹಾಕಿದ್ದರಿಂದ ವಾಹನ ಮತ್ತು ಜನ ಸಂಚರಿಸಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ ಎನ್ನುವುದು ಮೃತ ವೃದ್ಧನ ಕುಟುಂಬದ ಆರೋಪವಾಗಿದೆ.
ಕುಶಾಲನಗರ ಮತ್ತು ಬೆಟ್ಟದಪುರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಬೆಣಗಾಲು ಗ್ರಾಮದಿಂದ ಕೇವಲ 1 ಕಿ.ಮೀ. ಅಂತರವಿರುವ ನಾರಾಯಣಪುರಕ್ಕೆ ಕಳೆದ 4 ವರ್ಷಗಳ ಹಿಂದೆ ರಸ್ತೆಯಿತ್ತು ಎಂದು ವಾಲ್ಮೀಕಿ ಸಂಘದ ಅಧ್ಯಕ್ಷ ಮಂಜು ಹೇಳುತ್ತಿದ್ದು, ಆದರೆ ಕಳೆದ 6 ವರ್ಷಗಳಲ್ಲಿ ರಂಗನಾಯಕನ ಕುಟುಂಬ ಈ ರಸ್ತೆಗೆ ಅಕ್ರಮವಾಗಿ ಬೇಲಿ ಹಾಕಿಕೊಂಡಿರುವುದರಿಂದ ಸಂಪರ್ಕ ಬಂದ್ ಆಗಿದೆ.

ಇದರಿಂದ ರೋಗಿಗಳಿಗಲ್ಲದೆ ವಿದ್ಯಾರ್ಥಿಗಳಿಗೆ, ವೃದ್ದರಿಗೆ, ಗರ್ಭಿಣಿ ಸ್ತ್ರೀಯರಿಗೆ ಹಾಗೂ ಸಾವು ನೋವು ಸಂಭವಿಸಿದ ದಿನಗಳಲ್ಲಿ ರಸ್ತೆಯಿಲ್ಲದೆ ಭಾರೀ ತೊಂದರೆ ಆಗುತ್ತಿದೆ ಎಂದು ದೂರಿದ್ದಾರೆ. ಈ ಕುರಿತಂತೆ ವಾಲ್ಮೀಕಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್.ರವಿನಾಯಕ್ ಮಾತನಾಡಿ ಬೆಣಗಾಲು ಗ್ರಾಮದಲ್ಲಿರುವ ಬಹಳಷ್ಟು ಜನರು ನಾರಾಯಣಪುರದಲ್ಲಿ ಜಮೀನು ಹೊಂದಿದ್ದು ದಿನನಿತ್ಯವೂ ಹೊಲದ ಕೆಲಸಕ್ಕೆ ಓಡಾಡಲು ರಸ್ತೆಯಿಲ್ಲದೆ ನರಕ ಅನುಭವಿಸುತ್ತಿದ್ದೇವೆ.
ಈ ಬಗ್ಗೆ ತಾಲೂಕು ತಹಸೀಲ್ದಾರ್ ಮತ್ತು ಹುಣಸೂರು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ ಪರಿಣಾಮ ಸ್ಥಳ ಪರಿಶೀಲನೆ ನಡೆಸಿ ಕೂಡಲೇ ತೆರವು ಮಾಡಿಸುವಂತೆ ಆದೇಶ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಯಾವುದೇ ರೀತಿ ಕಾನೂನು ಕ್ರಮ ಕೈಗೊಳ್ಳದಿರುವುದರಿಂದ ಬೆಣಗಾಲು ಗ್ರಾಮದಲ್ಲಿ ಸಾವು ಸಂಭವಿಸಿದ ಸಂದರ್ಭದಲ್ಲಿ ಸಂಸ್ಕಾರ ನಡೆಸಬೇಕಾದರೆ ನಾರಾಯಣಪುರಕ್ಕೆ ತರಬೇಕಾಗಿದೆ.

ಈಗ ಇಲ್ಲಿಗೆ ಬರಬೇಕಾದರೆ ಬೆಣಗಾಲು ಗ್ರಾಮದಿಂದ ಗಾಂಧಿನಗರ ಮಾರ್ಗವಾಗಿ ಕನಿಷ್ಟ 6 ರಿಂದ 7 ಕಿ.ಮೀ. ತೆರಳಬೇಕಾದ ಪರಿಸ್ಥಿತಿಯಿದೆ. ಇದರಿಂದ ತೊಂದರೆಯಾಗುತ್ತಿದ್ದು ಕೂಡಲೇ ೩೦ಕ್ಕೂ ಹೆಚ್ಚು ಕುಟುಂಬವಿರುವ ನಾರಾಯಣಪುರಕ್ಕೆ ಮೊದಲಿದ್ದ ರಸ್ತೆಗೆ ಹಾಕಿರುವ ಬೇಲಿಯನ್ನು ತೆರವುಗೊಳಿಸಿ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications