ಮೈಸೂರು; ಮಗಳಿಗೆ ಮಕ್ಕಳಾಗದ್ದಕ್ಕೆ ಕಳ್ಳನಾದ ತಂದೆ
ಮೈಸೂರು, ಅಕ್ಟೋಬರ್ 6: ಮಗಳಿಗೆ ಮಕ್ಕಳಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಮಗುವನ್ನು ಅಪಹರಿಸಿ ಕಳ್ಳನಾದ ಘಟನೆ ಇಲ್ಲಿಗೆ ಸಮೀಪದ ನಂಜನಗೂಡಿನಲ್ಲಿ ನಡೆದಿದೆ.
ಐದು ದಿನಗಳ ಹಿಂದೆ ನಂಜನಗೂಡಿನ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬಳ ಮಗುವೊಂದು ಅಪಹರಣಕ್ಕೀಡಾಗಿತ್ತು. ಆರೋಪಿಯು ಭಿಕ್ಷುಕಿಯ ಕೈಗೆ ಹತ್ತು ರೂಪಾಯಿ ನೀಡಿ ನಂತರ ಉಪಾಯವಾಗಿ ಮಗುವನ್ನು ಅಪಹರಿಸಿದ್ದ. ತನಿಖೆ ಕೈಗೊಂಡ ಪೊಲೀಸರು ಕೊನೆಗೂ ಸೋಮವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಆತ ಮಗುವನ್ನು ಅಪಹರಿಸಿದ್ದಕ್ಕೆ ಕೊಟ್ಟ ಕಾರಣ ಅಚ್ಚರಿ ಮೂಡಿಸಿತ್ತು.
ಆರೋಪಿಯನ್ನು ಗಂಗರಾಜು (47) ಎಂದು ಗುರ್ತಿಸಲಾಗಿದ್ದು, ನಂಜನಗೂಡು ತಾಲೂಕು ಹುಣಸೆಕೊಪ್ಪ ಗ್ರಾಮದವನಾಗಿದ್ದಾನೆ. ಈತನ ಮಗಳಿಗೆ ಮದುವೆಯಾಗಿ ನಾಲ್ಕು ವರ್ಷವಾದರೂ ಮಕ್ಕಳಾಗಿರಲಿಲ್ಲ. ಮಗುವೊಂದನ್ನು ತಂದು ಪೋಷಿಸಿದರೆ ಮಗಳಿಗೆ ಮಕ್ಕಳಾಗುತ್ತದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದ ಮಾತನ್ನು ನಂಬಿದ್ದ ಗಂಗರಾಜು ಭಿಕ್ಷುಕಿಯ ಮಗುವಿನ ಅಪಹರಣಕ್ಕೆ ಮುಂದಾಗಿದ್ದನು ಎಂಬುದು ವಿಚಾರಣೆಯ ವೇಳೆ ತಿಳಿದುಬಂದಿದೆ.

ಈತ ಯಶಸ್ವಿಯಾಗಿ ಮಗುವನ್ನು ಅಪಹರಿಸಿದನಾದರೂ ಪೊಲೀಸರ ಚಾಣಾಕ್ಷತೆಯಿಂದ ಈಗ ಜೈಲು ಸೇರಿದ್ದಾನೆ.












Click it and Unblock the Notifications