ಚಾಮರಾಜನಗರ; ಲೋಕಸಭಾ ಟಿಕೆಟ್‌ಗಾಗಿ ಹಾಲಿ ಸಂಸದರ ಅಳಿಯಂದಿರ ನಡುವೆ ಪೈಪೋಟಿ!
ಮೈಸೂರು: ಲೋಕಸಭೆ ಚುನಾವಣೆ ರಂಗು ನಿಧಾನವಾಗಿ ಗರಿಗೆದರುತ್ತಿದ್ದು, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಇದೀಗ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಂದೇ ಕುಟುಂಬದ ಇಬ್ಬರು ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿದ್ದಾರೆ.
ಹಾಲಿ ಚಾಮರಾಜನಗರ ಸಂಸದ ಶ್ರೀನಿವಾಸಪ್ರಸಾದ್ ಅವರು ಈಗಾಗಲೇ ನಾನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಹೀಗಾಗಿ ಅವರ ಅಳಿಯ ಡಾ.ಮೋಹನ್ ಅವರು ವೈದ್ಯಕೀಯ ಕ್ಷೇತ್ರದಿಂದ ರಾಜಕೀಯ ಕ್ಷೇತ್ರಕ್ಕೆ ಬರಲು ಆಸಕ್ತಿ ತೋರಿದ್ದಾರೆ. ಅದೇ ರೀತಿ ನಂಜನಗೂಡು ಕ್ಷೇತ್ರದ ಮಾಜಿ ಶಾಸಕ ಹರ್ಷವರ್ಧನ್ ಕೂಡ ಇದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಶ್ರೀನಿವಾಸಪ್ರಸಾದ್ ಅವರನ್ನು ಮೈಸೂರಿನ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.

ನಂತರ ಮಾತನಾಡಿದ ಸಂಸದ ಶ್ರೀನಿವಾಸಪ್ರಸಾದ್, ನನ್ನ ಇಬ್ಬರು ಅಳಿಯಂದಿರಾದ ಡಾ.ಮೋಹನ್, ಹರ್ಷವರ್ಧನ್ ಜತೆಗೆ ಸಾಕಷ್ಟು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅವರಿಬ್ಬರೂ ತುಂಬಾ ಅನ್ಯೋನ್ಯವಾಗಿದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಹಿರಂಗ ಪ್ರಚಾರಕ್ಕೆ ಹೋಗಲ್ಲ
ಮುಂದಿನ ಚುನಾವಣೆಯಲ್ಲಿ ಬಹಿರಂಗ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ ಬಿಜೆಪಿಯನ್ನು ಬೆಂಬಲಿಸಿ ಎಂದು ಎಲ್ಲರನ್ನೂ ಕೇಳಿಕೊಳ್ಳುತ್ತೇನೆ. ಸಚಿವ ಮಹದೇವಪ್ಪ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಕಳೆದ ಐದು ವರ್ಷಗಳಲ್ಲಿ ಸಂಸತ್‌ನಲ್ಲಿ ಪ್ರಶ್ನೆ ಕೇಳಿಲ್ಲ ಎಂಬುದನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಆದರೆ, ಹಿಂದಿನ ಅವಧಿಯಲ್ಲಿ ನಾನು ಕೇಳಿರುವ ಪ್ರಶ್ನೆಗಳು, ತಂದಿರುವ ಅನುದಾನದ ಬಗ್ಗೆ ನನ್ನ ಆತ್ಮಚರಿತ್ರೆಯಲ್ಲಿ ತಿಳಿಸುತ್ತೇನೆ. ಸಂಸದರ ನಿಧಿ ತರುವುದನ್ನು ಹುಟ್ಟುಹಾಕಿದ್ದೇ ನಾನು ಎಂದು ಸಮರ್ಥಿಸಿಕೊಂಡರು.
ಬಿ.ವೈ.ವಿಜಯೇಂದ್ರ ಮಾತನಾಡಿ, 'ಮೈಸೂರಿಗೆ ಬಂದಾಗ ನಮ್ಮೆಲ್ಲರ ಹಿರಿಯ ನಾಯಕರಾದ ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ ಮಾಡುತ್ತಿರುತ್ತೇನೆ. ಅದರಂತೆ ಭೇಟಿ ಮಾಡಿದ್ದೇನೆ. ಮುಂದಿನ ತಿಂಗಳು 17ಕ್ಕೆ ಅವರು ರಾಜಕೀಯ ಜೀವನದಲ್ಲಿ 50 ವರ್ಷ ಪೂರೈಸಲಿದ್ದಾರೆ. ಅವರು ನನ್ನನ್ನು ನೋಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ, ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ವಿಚಾರವಾಗಿ ಮಾತನಾಡಿ ಸಲಹೆ, ಸೂಚನೆಗಳನ್ನು ಪಡೆದಿದ್ದೇನೆ' ಎಂದರು.












Click it and Unblock the Notifications