'ಶಾಸಕರು ನಿಮ್ಮ ಕೆಲಸ ಮಾಡಿಲ್ಲವೆಂದರೆ ಹುಚ್ಚು ನಾಯಿ ರೀತಿ ಹೊಡೆಯಿರಿ'
ಮೈಸೂರು, ಮೇ 26 : ಆಯ್ಕೆಯಾಗಿರುವ ನೂತನ ಶಾಸಕರು ದಬ್ಬಾಳಿಕೆ ನಡೆಸಿದರೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯಿರಿ. ನಿಮಗೆ ನಾನು ಸಹಕಾರ ನೀಡುತ್ತೇನೆ ಎಂದು ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಕೆ.ವೆಂಕಟೇಶ್ ಹೇಳಿಕೆ ನೀಡಿದ್ದಾರೆ.
ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಪ್ರತಿ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ರಾಜಕಾರಣ ನಡೆಯುತ್ತಿದ್ದು, 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ವೆಂಕಟೇಶ್ ಈ ಬಾರಿ ಜೆಡಿಎಸ್ ಅಭ್ಯರ್ಥಿ ಮಹದೇವ್ ವಿರುದ್ಧ ಸೋಲನುಭವಿಸಿದ್ದಾರೆ.
ಪಿರಿಯಾಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವೇಳೆ, ಮಾಜಿ ಶಾಸಕ ವೆಂಕಟೇಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಆಗಿರುವ ಕೆ.ವೆಂಕಟೇಶ್, ಮಧ್ಯಂತರ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಆದಷ್ಟು ಬೇಗ ಚುನಾವಣೆ ಬರುತ್ತದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಸದ್ಯದಲ್ಲೇ ಚುನಾವಣೆ ಎದುರಿಸುವ ಶಕ್ತಿ ನಮಗಿಲ್ಲ. ನನ್ನ ಜೊತೆಯಲ್ಲಿ ಇದ್ದವರೇ ಬೆನ್ನಿಗೆ ಚೂರಿ ಹಾಕಿ ಸೋಲಿಸಿದರು. ಜೊತೆಯಲ್ಲಿದ್ದವರು ವಿಶ್ವಾಸಘಾತುಕತನ ಮಾಡಿದರು ಎಂದರು.
ಆದರೆ ಈಗ ಬಂದಿರುವವರು ಕಾಂಗ್ರೆಸ್ ಜತೆಗೆ ಸೇರಿ ಸರಕಾರ ನಡೆಸುತ್ತಿದ್ದಾರೆ. ಹೀಗಾಗಿ ನೀವು ಯಾವುದಕ್ಕೂ ಹೆದರಬೇಡಿ. ನಾನು ನಿಮ್ಮೊಂದಿಗಿದ್ದೇನೆ. ಸರಕಾರದ ಮಟ್ಟದ ಕೆಲಸ ನಾನು ನೋಡಿಕೊಳ್ಳುತ್ತೇನೆ. ಸ್ಥಳೀಯವಾಗಿ ನೀವೆಲ್ಲಾ ಸಂಘಟಿತರಾಗಿ, ಜೆಡಿಎಸ್ ವಿರುದ್ಧ ಹೋರಾಟ ನಡೆಸಿ ಎಂದು ಸಭೆಯಲ್ಲಿ ಸಲಹೆ ನೀಡಿದರು.












Click it and Unblock the Notifications