ಕಾರ್ಯಕಾರಿಣಿಯಲ್ಲಿ ಈಶ್ವರಪ್ಪ ಗ್ಯಾಂಗ್; ಮುಜುಗರಕ್ಕೀಡಾಗ್ತಾರಾ ಬಿಎಸ್ವೈ?
ಶನಿವಾರ ಮತ್ತು ಭಾನುವಾರ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಣಿಯಲ್ಲಿ ಕೆ.ಎಸ್ ಈಶ್ವರಪ್ಪ ಮತ್ತು ಅವರ ಅತೃಪ್ತರ ತಂಡ ಭಾಗವಹಿಸುತ್ತಿದೆ.ಇಲ್ಲಿ ಬಿಎಸ್ವೈ - ಈಶ್ವರಪ್ಪ ಮುಖಾಮುಖಿಯಾದರೆ ಪರಿಸ್ಥಿತಿಯೇನು ಎಂಬುದೇ ಪ್ರಶ್ನೆ.
ಮೈಸೂರು, ಮೇ 5: ಶನಿವಾರ ಮತ್ತು ಭಾನುವಾರ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಣಿಯಲ್ಲಿ ಕೆ.ಎಸ್ ಈಶ್ವರಪ್ಪ ಮತ್ತು ಅವರ ಅತೃಪ್ತರ ತಂಡ ಭಾಗವಹಿಸುತ್ತಿದೆ. ಆದರೆ ಕಾರ್ಯಕಾರಣಿಯಲ್ಲಿ ಭಾಷಣ ಮಾಡಲಿರುವವರ ಪಟ್ಟಿಯಲ್ಲಿ ಈಶ್ವರಪ್ಪ ಹೆಸರು ಮಾತ್ರ ನಾಪತ್ತೆಯಾಗಿದೆ.
ಸದ್ಯ ಕರ್ನಾಟಕ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಕಾರ್ಯಕಾರಣಿಯಲ್ಲಿ ಈಶ್ವರಪ್ಪ ಭಾಷಣಕ್ಕೆ ಬ್ರೇಕ್ ಹಾಕಿರುವ ನಡೆಗಳ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ನಡೆ ಕುತೂಹಲ ಹುಟ್ಟಿಸಿದೆ. ಅದರಲ್ಲೂ ಕಾರ್ಯಕಾರಣಿಯಲ್ಲಿ ಬಿಎಸ್ವೈ - ಈಶ್ವರಪ್ಪ ಮುಖಾಮುಖಿಯಾದರೆ ಪರಿಸ್ಥಿತಿಯೇನು ಎಂಬುದೇ ಪ್ರಶ್ನೆಯಾಗಿ ಉಳಿದಿದೆ. [ರಾಜ್ಯ ಬಿಜೆಪಿಯ ಎರಡು ಒಡೆದ ಮನಸ್ಸುಗಳು ಮತ್ತಷ್ಟು ದೂರ..ದೂರ?]
ಒನ್ ಇಂಡಿಯಾ ಜತೆ ಮಾತನಾಡಿರುವ ಅತೃಪ್ತ ತಂಡದ ಮುಖಂಡ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ, "ನಾವೆಲ್ಲಾ ಕಾರ್ಯಕಾರಣಿಯಲ್ಲಿ ಭಾಗವಹಿಸಲಿದ್ದೇವೆ. ನಮಗೆ ಪಕ್ಷದ ಕಡೆಯಿಂದ ನೀಡಲಾಗಿದ್ದ ನೊಟೀಸ್ ಹಿಂತೆಗೆದುಕೊಳ್ಳುವಾಗಲೇ ಕಾರ್ಯಕಾರಿಣಿಗೆ ಆಹ್ವಾನ ನೀಡಲಾಗಿತ್ತು. ಜತೆಗೆ ಹೈಕಮಾಂಡ್ ಕೂಡಾ ಭಾಗವಹಿಸುವಂತೆ ಹೇಳಿದೆ. ನಾವೆಲ್ಲಾ ಕಾರ್ಯಕಾರಣಿಯಲ್ಲಿ ಭಾಗವಹಿಸಲಿದ್ದೇವೆ," ಎಂದು ಹೇಳಿದ್ದಾರೆ.
ಈ ಮೂಲಕ ಕಾರ್ಯಕಾರಣಿಯಲ್ಲಿ ಈಶ್ವರಪ್ಪ ಮತ್ತು ಅತೃಪ್ತರ ತಂಡ ಭಾಗವಹಿಸುವುದು ನಿಕ್ಕಿಯಾಗಿದೆ.
ಒಂದೊಮ್ಮೆ ಕಾರ್ಯಕಾರಣಿಯಲ್ಲಿ ಯಡಿಯೂರಪ್ಪ ಮತ್ತು ಅತೃಪ್ತರ ತಂಡ ಮುಖಾಮುಖಿಯಾದರೆ ಪರಿಸ್ಥಿತಿ ಏನಿರಬಹುದು ಎಂಬುದೇ ಕುತೂಹಲ ಹುಟ್ಟಿಸಿದೆ. ಅದರಲ್ಲೂ ನೋಟಿಸ್ ಹಿಂತೆಗೆದುಕೊಂಡ ನಂತರ ಪರಿಸ್ಥಿತಿ ಪೂರ್ತಿ ಬದಲಾಗಿದೆ. ಬೆಂಗಳೂರಿನಲ್ಲಿ ಸಭೆ ಸೇರಿದ್ದ ಅತೃಪ್ತರು ಯಡಿಯೂರಪ್ಪನವರ ಮೇಲೆ ಪರೋಕ್ಷವಾಗಿ ತೀಕ್ಷ್ಣ ದಾಳಿ ನಡೆಸಿದ್ದರು.
ಈ ಎಲ್ಲಾ ಹಿನ್ನಲೆಯಲ್ಲಿ ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ಬಜೆಪಿ ಕಾರ್ಯಕಾರಣಿ ಕುತೂಹಲದ ಕೇಂದ್ರಕ್ಕೆ ಬಂದಿದೆ.












Click it and Unblock the Notifications