ದ್ರೋಣ, ರಾಜೇಂದ್ರರ ಸಾಲಿನಲ್ಲಿ ಅರ್ಜುನ: ಬಳ್ಳೆ ಆನೆ ಶಿಬಿರದಲ್ಲಿ ನೆನಪಾಗಿ ಉಳಿಯಲಿರುವ ದಸರಾ ಕ್ಯಾಪ್ಟನ್‌

ಮೈಸೂರು, ಡಿಸೆಂಬರ್‌ 06: ಗತ್ತು, ಗೈರತ್ತು, ಗಾಂಭೀರ್ಯದ ನಡಿಗೆ ಮೂಲಕ ಜನಮನ ಗೆದ್ದಿದ್ದ ಸಾಕಾನೆ ಅರ್ಜುನನ ಯುಗಾಂತ್ಯವಾಗಿದೆ. ಇಡೀ ನಾಡು ಆತನ ಸಾವಿಗೆ ಕಣ್ಣೀರಿಟ್ಟಿದೆ. ಅದರಲ್ಲೂ ವಾಸಸ್ಥಾನವಾದ ಹೆಚ್.ಡಿ.ಕೋಟೆ ತಾಲೂಕಿನ ಬಳ್ಳೆ ಆನೆ ಶಿಬಿರದಲ್ಲಂತೂ ದುಃಖ ಮಡುಗಟ್ಟಿದೆ. ಈ ಆನೆ ಶಿಬಿರದಿಂದ ಅರ್ಜುನನ ನೆನಪು ಮಾಸಲು ಸಾಧ್ಯವೇ ಇಲ್ಲದಂತಾಗಿದೆ.

ಬಳ್ಳೆ ಆನೆ ಶಿಬಿರ ದೈತ್ಯ ಗಜರಾಜರ ತಾಣ ಎಂದರೂ ತಪ್ಪಾಗುವುದಿಲ್ಲ. ಇವತ್ತಿಗೂ ಅರ್ಜುನ ಸೇರಿದಂತೆ ಈ ಹಿಂದೆ ಅಂಬಾರಿ ಹೊತ್ತಿದ್ದ ದ್ರೋಣ ಮತ್ತು ರಾಜೇಂದ್ರ ಸಾಕಾನೆಗಳು ಇಲ್ಲಿದ್ದವು ಎನ್ನುವುದೇ ಖುಷಿಯ ವಿಚಾರವಾಗಿದೆ. ಪ್ರತಿ ವರ್ಷವೂ ಮೈಸೂರು ದಸರಾಕ್ಕೆ ಕೊಡಗು ಮೈಸೂರು ಮತ್ತು ಚಾಮರಾಜನಗರ ಆನೆಶಿಬಿರಗಳಿಂದ ಸಾಕಾನೆಗಳನ್ನು ಕರೆಯಿಸಿ ಅವುಗಳಿಗೆ ತಾಲೀಮು ನಡೆಸಿ ಜಂಬೂಸವಾರಿಯಲ್ಲಿ ಬಳಸಿಕೊಳ್ಳುವುದು ಹಿಂದಿನಿಂದಲೂ ನಡೆದು ಬಂದಿದೆ.

Elephant Arjuna Death: Arjunas Memorial At Balle Elephant Camp

ಆನೆ ಶಿಬಿರಗಳಿಂದ ಬರುವ ಸಾಕಾನೆಗಳ ಪೈಕಿ ಸಮರ್ಥ ಮತ್ತು ದೈತ್ಯ ಸಾಕಾನೆಯನ್ನು ಆಯ್ಕೆ ಮಾಡಿ ಅದನ್ನು ಅಂಬಾರಿ ಹೊರಲು ಬಳಸಿಕೊಳ್ಳಲಾಗುತ್ತಿದ್ದು, ಅದರಂತೆ ಅಂಬಾರಿ ಹೊತ್ತ ಆನೆಗಳ ಪೈಕಿ ದ್ರೋಣ, ರಾಜೇಂದ್ರ, ಅರ್ಜುನ ಬಳ್ಳೆ ಶಿಬಿರದವರು ಎನ್ನುವುದೇ ವಿಶೇಷ. ಇದುವರೆಗೆ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಇದುವರೆಗೆ ಹಲವು ಆನೆಗಳು ಅಂಬಾರಿ ಹೊತ್ತು ಸಾಗಿವೆ. ಇಂತಹ ಅಂಬಾರಿ ಹೊತ್ತ ಆನೆಗಳ ನಡುವೆ ದ್ರೋಣ ಮತ್ತು ರಾಜೇಂದ್ರರ ಹೆಸರು ಅಚ್ಚಳಿಯದೆ ಉಳಿದಿದೆ.

ಅರ್ಜುನನಿಗೆ ಸ್ಮಾರಕ ನಿರ್ಮಾಣ

ಎಚ್.ಡಿ.ಕೋಟೆಯ ಬಳ್ಳೆ ಆನೆಶಿಬಿರದಲ್ಲಿರುವ ದ್ರೋಣ ಮತ್ತು ರಾಜೇಂದ್ರರ ಸಮಾಧಿಗಳು ಅವು ಬದುಕಿದ ರೀತಿ, ಮೈಸೂರು ದಸರಾದಲ್ಲಿ ಜಂಬೂಸವಾರಿಗೆ ನೀಡಿದ ಕೊಡುಗೆ ಎಲ್ಲವನ್ನು ಸಾರಿ ಹೇಳುತ್ತಿವೆ. ಇನ್ನು ಮುಂದೆ ಅರ್ಜುನನೂ ಬಳ್ಳೆ ಶಿಬಿರದಲ್ಲಿ ನೆನಪಾಗಿ ಉಳಿಯಲಿದ್ದಾನೆ. ಈಗಾಗಲೇ ಸರ್ಕಾರ ಆತನ ಸ್ಮಾರಕ ನಿರ್ಮಿಸುವ ಭರವಸೆ ನೀಡಿದೆ. ಅರ್ಜುನನಂತೆ ದ್ರೋಣ ಮತ್ತು ರಾಜೇಂದ್ರ ಕೂಡ ಸಾಧು ಮತ್ತು ದೈತ್ಯ ಬಲ ಹೊಂದಿದ್ದ ಆನೆಗಳಾಗಿದ್ದವು. ಅಷ್ಟೇ ಅಲ್ಲದೆ ಅರಣ್ಯ ಅಧಿಕಾರಿಗಳು, ಸಿಬ್ಬಂದಿ, ಮಾವುತ, ಕಾವಾಡಿಗಳು ಸೇರಿದಂತೆ ಆನೆ ಶಿಬಿರದ ಮಂದಿಗೆ ಅಚ್ಚುಮೆಚ್ಚಾಗಿದ್ದವು.

ದ್ರೋಣ ಜಂಬೂಸವಾರಿಯಲ್ಲಿ 18 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದರೆ, ರಾಜೇಂದ್ರ ಮೂರು ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದನು. ವಯಸ್ಸಾಗಿದ್ದ ರಾಜೇಂದ್ರನಿಗೆ ಹೆಚ್ಚು ಬಾರಿ ಅಂಬಾರಿ ಹೊರುವ ಅವಕಾಶ ದೊರೆತಿಲ್ಲವಾದರೂ ಜಂಬೂಸವಾರಿಯಲ್ಲಿ ಇತರೆ ಆನೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದನು. ವಯಸ್ಸಾಗಿದ್ದರಿಂದ ಈತ ಮೃತಪಟ್ಟಿದ್ದನು. ಆದರೆ ಆತನ ಒಡನಾಟದಲ್ಲಿದ್ದವರಿಗೆ ಅವನನ್ನು ಮರೆಯುವುದು ಕಷ್ಟವಾಗಿತ್ತು.

Elephant Arjuna Death: Arjunas Memorial At Balle Elephant Camp

ದ್ರೋಣ ರಾಜೇಂದ್ರರ ಸಮಾಧಿ

ಸಾಕಾನೆ ದ್ರೋಣ ದೃಢಕಾಯನಾಗಿದ್ದನಾದರೂ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದನು. ಆತನ ಸಾವು ಎಲ್ಲರಿಗೂ ನೋವು ತರಿಸಿತ್ತು. ಅದರಲ್ಲಿಯೂ ಶಿಬಿರದಲ್ಲಿ ಆತನ ಒಡನಾಟದಲ್ಲಿದ್ದ ಮಾವುತ ಕಾವಾಡಿಗಳಿಗೆ ದಿಕ್ಕೇ ತೋಚದಂತಾಗಿತ್ತು. ಆ ದುಃಖ ಮರೆಯಲು ಬಹಳಷ್ಟು ದಿನಗಳೇ ಬೇಕಾಯಿತು. ಶಿಬಿರದ ಕಣ್ಮಿಣಿಯಾಗಿದ್ದ ಈ ಎರಡು ಸಾಕಾನೆಗಳು ಸದಾ ತಮ್ಮ ನೆನಪಿನಲ್ಲಿರಬೇಕು ಎಂದು ನಿರ್ಧರಿಸಿದ ಅಂದಿನ ಅರಣ್ಯಾಧಿಕಾರಿಗಳು ಇವರಿಬ್ಬರಿಗೂ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಬರುವ ಬಳ್ಳೆ ಆನೆ ಶಿಬಿರದಲ್ಲಿರುವ ಸಮಾಧಿ ನಿರ್ಮಿಸುವ ಮೂಲಕ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದರು.

ಸುಮಾರು ಎರಡು ದಶಕಗಳಿಗೂ ಹಿಂದೆ ನಿರ್ಮಾಣವಾದ ಈ ಸಮಾಧಿಗಳನ್ನು ಇಂದಿಗೂ ಇಲ್ಲಿನ ಮಾವುತ ಕಾವಾಡಿಗಳು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಅತ್ತ ಕಡೆ ಹೋದಾಗಲೆಲ್ಲ ಅದಕ್ಕೊಂದು ನಮನ ಸಲ್ಲಿಸಿ ಬರುತ್ತಾರೆ. ಅಷ್ಟೇ ಅಲ್ಲ ಶಿಬಿರದಲ್ಲಿರುವ ಆನೆಗಳಿಂದ ಆಗಾಗ್ಗೆ ಸಲಾಮ್ ಹೊಡೆಸುತ್ತಾರೆ. ಅರಣ್ಯದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಾಸ್ತಮ್ಮ ಪೂಜಾ ಮಹೋತ್ಸವದ ಸಂದರ್ಭ ದ್ರೋಣ ಮತ್ತು ರಾಜೇಂದ್ರರ ಸಮಾಧಿಗೂ ಪೂಜಾ ಕಾರ್ಯ ನಡೆಯುತ್ತದೆ. ಅವತ್ತು ಅರಣ್ಯಧಿಕಾರಿಗಳ ಅನುಮತಿಯೊಂದಿಗೆ ಸಮಾಧಿಯನ್ನು ಸ್ವಚ್ಚಗೊಳಿಸುವ ಮಾವುತ ಮತ್ತು ಕಾವಾಡಿಗಳು ಬಳಿಕ ಪೂಜೆ ಸಲ್ಲಿಸಿ ನಮಿಸುತ್ತಾರೆ. ಇನ್ನು ಮುಂದೆ ದ್ರೋಣ ಮತ್ತು ರಾಜೇಂದ್ರ ಜೊತೆ ಅರ್ಜುನನೂ ನೆನಪಾಗಿ ಬಳ್ಳೆ ಆನೆಶಿಬಿರದಲ್ಲಿ ಉಳಿಯಲಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+