ಕೈಕೊಟ್ಟ ಮಳೆ: ಹೆಚ್.ಡಿ.ಕೋಟೆಯಲ್ಲಿ ಬರದ ಛಾಯೆ, ರೈತರಲ್ಲಿ ಹೆಚ್ಚಿದ ಆತಂಕ
ಮೈಸೂರು, ಸೆಪ್ಟೆಂಬರ್ 04: ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ತುಂಬಿ ತುಳುಕುತ್ತಿದ್ದ ಕೆರೆಗಳು ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಬರಿದಾಗಿವೆ. ಪರಿಣಾಮ ರೈತರು ಆತಂಕಗೊಂಡಿದ್ದಾರೆ. ಅದರಲ್ಲೂ ಕೇರಳ ಗಡಿಗೆ ಹೊಂದಿಕೊಂಡಿರುವ ಅರೆಮಲೆನಾಡು ಪ್ರದೇಶವಾಗಿ ನಾಲ್ಕು ಜಲಾಶಯಗಳನ್ನು ಹೊಂದಿರುವ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು, ಕೆರೆಗಳಲ್ಲಿ ನೀರು ಬತ್ತಿಹೋಗುತ್ತಿರುವುದು ಆತಂಕ ತಂದಿದೆ.
ಸಾಮಾನ್ಯವಾಗಿ ಅತ್ತ ಕೇರಳ ಇತ್ತ ಕೊಡಗಿನಲ್ಲಿ ಮಳೆ ಸುರಿದಾಗಲೆಲ್ಲ ಅದರ ಪರಿಣಾಮವಾಗಿ ಹೆಚ್.ಡಿ.ಕೋಟೆ ತಾಲೂಕಿನ ಕೆಲವೆಡೆ ಮಳೆ ಸುರಿಯುತ್ತದೆ. ಜೊತೆಗೆ ಅರಣ್ಯ ಪ್ರದೇಶವನ್ನು ಹೊಂದಿರುವುದರಿಂದ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ತುಂಬುತ್ತವೆ. ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕೆರೆಗಳಲ್ಲಿದ್ದ ನೀರು ದಿನದಿಂದ ದಿನಕ್ಕೆ ಬತ್ತಲಾರಂಭಿಸಿದ್ದು, ರೈತರಲ್ಲಿ ಭಯವನ್ನುಂಟು ಮಾಡಿದೆ.

ಜುಲೈ ತಿಂಗಳಲ್ಲಿ ಸ್ವಲ್ಪ ಮಳೆ ಸುರಿದಿದ್ದನ್ನು ಹೊರತುಪಡಿಸಿದರೆ ಮಳೆಯೇ ಸುರಿಯಲಿಲ್ಲ. ಈಗ ಮಳೆ ಸುರಿಯುವ ಲಕ್ಷಣಗಳು ಕೂಡ ಕಾಣಿಸುತ್ತಿಲ್ಲ. ಬೇಸಿಗೆಯ ದಿನಗಳಿಗಿಂತಲೂ ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಕಾರಣ ಕೆರೆಯಲ್ಲಿರುವ ನೀರು ಆವಿಯಾಗಿ ಹೋಗುತ್ತಿದೆ. ಕೆಲವು ರೈತರು ಕೆರೆ ನೀರನ್ನು ನಂಬಿದ್ದರಾದರೂ ಕೆರೆಗಳ ನೀರು ಖಾಲಿಯಾದ ಕಾರಣಗಳಿಂದ ರೈತರ ಬೆಳೆಗಳು ಒಣಗುವಂತಾಗಿದೆ.
ಮಳೆಗಾಲದಲ್ಲೂ ಮಳೆಗಾಗಿ ಪ್ರಾರ್ಥನೆ
ಈಗ ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಮಳೆಗಾಲದಲ್ಲೂ ರೈತರು ಮಳೆಗಾಗಿ ದೇವರ ಪ್ರಾರ್ಥನೆ ಮಾಡುವಂತಾಗಿದೆ. ಸಾಮಾನ್ಯವಾಗಿ ಈ ದಿನಗಳಲ್ಲಿ ಕೆರೆಕಟ್ಟೆಗಳು ತುಂಬಿ ನೀರು ಅಲೆಯಾಡಬೇಕಿತ್ತು. ಗಿಡಮರಗಳು ಸೇರಿದಂತೆ ಕಾಡು ಹಸಿರಿನಿಂದ ಕಂಗೊಳಿಸಬೇಕಾಗಿತ್ತು. ಆದರೆ ಮಳೆಯಿಲ್ಲದೆ ಅರಣ್ಯದಲ್ಲಿ ಕುರುಚಲು ಗಿಡಗಳು, ಹೊಲಗದ್ದೆಗಳಲ್ಲಿ ಬೆಳೆಗಳು ಒಣಗುತ್ತಿವೆ. ಅತ್ತ ಕೆರೆಯಲ್ಲಿ ನೀರು ಮಾಯವಾಗುತ್ತಿದೆ.
ಹಿಂದಿನ ಮಳೆಗಾಲದ ದಿನಗಳನ್ನು ನೆನಪಿಸಿಕೊಳ್ಳುವ ರೈತರು ತಾಲೂಕಿನಲ್ಲಿ ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲೇ ಹೆಚ್ಚು ಮಳೆಯಾಗುತ್ತಿತ್ತು, ಈ ಬಾರಿ ಮಳೆಯಿಲ್ಲದೆ ಆಗಸ್ಟ್ ತಿಂಗಳು ಮುಗಿದು ಹೋಗಿದೆ. ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರೆದರೆ ಮಳೆಯನ್ನು ನಂಬಿ ಬೆಳೆದ ಬೆಳೆಗಳು ಒಣಗಿ ಹೋಗಲಿದ್ದು, ಬೇಸಿಗೆ ಮುನ್ನವೇ ನೀರಿಗಾಗಿ ಹಾಹಾಕಾರ ಉಂಟಾಗುವ ಆತಂಕವನ್ನು ಹೊರಹಾಕುತ್ತಿದ್ದಾರೆ.

ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ
ಕಳೆದ ಜುಲೈ ತಿಂಗಳಲ್ಲಿ ವಾಡಿಕೆ 138 ಮಿ.ಮೀ ಮಳೆಗೆ 183 ಮಿ.ಮೀ ಮಳೆ ಸುರಿದು ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿತ್ತು, ಆಗಸ್ಟ್ ತಿಂಗಳ ಆಶ್ಲೇಷಾ ಮತ್ತು ಮಖೆ ಮಳೆಗಳು ಕೈಕೊಟ್ಟ ಪರಿಣಾಮ ವಾಡಿಕೆ 64 ಮಿ.ಮೀ ಮಳೆಗೆ ಕೇವಲ 18 ಮಿ.ಮೀ ಮಳೆಯಾಗುವ ಮೂಲಕ ಆಗಸ್ಟ್ ತಿಂಗಳಲ್ಲಿ ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ಮುಂಗಾರು ಮಳೆ ಕ್ಷೀಣಿಸಿ ಬರ ಕಾಣಿಸಿದೆ.
ಕಳೆದ ಏಪ್ರೀಲ್ ತಿಂಗಳಲ್ಲಿ 76.54 ಮಿ.ಮೀ ಮಳೆಗೆ 54 ಮಿ.ಮೀ, ಮೇ ತಿಂಗಳಲ್ಲಿ ವಾಡಿಕೆ 122 ಮಿ.ಮೀ, ಮಳೆಗೆ 178 ಮಿ.ಮೀ, ಜೂನ್ ವಾಡಿಕೆ 91 ಮಿ.ಮೀ ಮಳೆಗೆ 74 ಮಿ.ಮೀ, ಜುಲೈ ತಿಂಗಳಲ್ಲಿ ವಾಡಿಕೆ 138 ಕ್ಕೆ 187 ಮಿ.ಮೀ, ಇನ್ನೂ ಆಗಸ್ಟ್ ತಿಂಗಳಲ್ಲಿ ವಾಡಿಕೆ ಮಳೆ 64 ಮಿ.ಮೀ ಕೇವಲ 18 ಮಿ.ಮೀ ಮಳೆಯಾಗಿದೆ. ಈ ಮೂಲಕ ಮುಂಗಾರು ಮಳೆ ಕಣ್ಣಮುಚ್ಚಾಲೆ ಆಡಿರುವುದು ಎದ್ದು ಕಾಣಿಸುತ್ತಿದೆ.
ಅಲ್ಪಾವಧಿ ಬೆಳೆಯುವುದೂ ಕಷ್ಟ
ಹೆಚ್ಡಿ ಕೋಟೆ ತಾಲೂಕಿನಲ್ಲಿ ನಾಲ್ಕು ಜಲಾಶಯಗಳಿದ್ದರೂ ತಾಲೂಕಿನ ಭಾಗಶಃ ರೈತರನ್ನು ಹೊರತುಪಡಿಸಿ ಹೆಚ್ಚಿನವರು ಮಳೆಯಾಶ್ರಿತ ಬೆಳೆಗಳ ಕೃಷಿ ಚಟುವಟಿಕೆಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ತಂಬಾಕು, ಕಬ್ಬು, ಹತ್ತಿ ಬೆಳೆಯತ್ತ ಹೆಚ್ಚು ಆಸಕ್ತಿ ತೋರುವ ರೈತರು ಈ ಬಾರಿ ಪೂರ್ವ ಮುಂಗಾರು ಕೈಕೊಟ್ಟು ಮುಂಗಾರು ಮಳೆ ಕೂಡ ತಡವಾದ್ದರಿಂದ ತಾಲೂಕಿನ ಪ್ರಮುಖ ಬೆಳೆ ಹತ್ತಿ, ತಂಬಾಕು ಬೆಳೆ ಬಿತ್ತನೆ ಕಡಿಮೆ ಮಾಡಿ ಮುಸುಕಿನ ಜೋಳ, ಶುಂಠಿ, ರಾಗಿ, ದ್ವಿದಳ ಧಾನ್ಯಗಳಿಗೆ ಆದ್ಯತೆ ನೀಡಿದ್ದರು.

ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆ ಸುರಿಯಬಹುದೆಂದು ನಂಬಿದ್ದರು. ಆದರೆ ಮಳೆ ಮಾಯವಾಗಿರುವುದರಿಂದ ಬೆಳೆಗಳು ಒಣಗುತ್ತಿರುವುದರಿಂದ ಬಿತ್ತನೆ ಹಾಕಿದ್ದ ಮೂಲ ಬಂಡವಾಳವೂ ರೈತರಿಗೆ ಬಾರದಂತಾಗಿದೆ. ಹೀಗೆ ಆದರೆ ಮುಂದೇನು ಎಂಬ ಭಯ ಅವರನ್ನು ಕಾಡಲಾರಂಭಿಸಿದೆ. ಇದರ ನಡುವೆ ಹಿಂಗಾರು ಮಳೆಗೆ ಅನುಗುಣವಾಗಿ ಅಲ್ಪಾವಧಿ ಬೆಳೆಗಳಾದ ಚೀಯಾ(ಗೇಲ್), ಅಲಸಂದೆ, ಕುಂಬಳ, ಉದ್ದು, ಹೆಸರು ಬೆಳೆಯತ್ತಿದ್ದವರು ಹಿಂದೇಟು ಹಾಕುವಂತಾಗಿದೆ.
ಬರಪೀಡಿತ ತಾಲೂಕು ಘೋಷಣೆ ಸಾಧ್ಯತೆ
ಇನ್ನೊಂದೆಡೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಈ ಬಾರಿ ಶೇ.86 ರಷ್ಟು ಮಳೆ ಕೊರತೆಯಾಗಿರುವ ಹಿನ್ನಲೆಯಲ್ಲಿ ತಾಲೂಕನ್ನು ಈ ಬಾರಿ ಬರಪೀಡಿತ ಘೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ನೀಡುವ ಸಂಬಂಧ ತಾಲೂಕಿನಲ್ಲಿ ತೀರಾ ಕನಿಷ್ಠ ಮಳೆ ಆಗಿರುವ 26 ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.
ಈಗಾಗಲೇ ಹಳ್ಳಿಗಳಿಗೆ ಭೇಟಿ ನೀಡಿ ಬೆಳೆ ಆಪ್ ಮೂಲಕ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ಸರ್ಕಾರ ಬರಪೀಡಿತ ತಾಲೂಕುಗಳ ಘೋಷಣೆ ಮಾಡುವ ಸಂದರ್ಭದಲ್ಲಿ ಹೆಚ್.ಡಿ.ಕೋಟೆಯನ್ನು ಪರಿಗಣಿಸುತ್ತಾ ಕಾದು ನೋಡಬೇಕಿದೆ.












Click it and Unblock the Notifications