ನಾನು ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಅಲ್ಲ: ಡಾ. ಮಹದೇವಪ್ಪ ಸ್ಪಷ್ಟನೆ
ಮೈಸೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಸಿದ್ಧತೆ ನಡೆಯುತ್ತಿದೆ. ನಾನು ಲೋಕಸಭಾ ಚುನಾವಣೆಯ ಆಕಾಂಕ್ಷಿ ಅಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಮಂತ್ರಿಗಳು ಸ್ಪರ್ಧಿಸಬೇಕೆಂದು ಎಲ್ಲೂ ಚರ್ಚೆಯಾಗಿಲ್ಲ. ಒತ್ತಾಯ ಕೂಡ ಇಲ್ಲ. ಗೆಲ್ಲುವ ಅವಕಾಶ ಆಧರಿಸಿ ಅಭ್ಯರ್ಥಿಗಳ ಆಯ್ಕೆಯಾಗಲಿದೆ ಎಂದು ಹೇಳಿದರು.

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಆದರೆ, ಇದುವರೆಗೂ ಸಿಇಸಿ ಸಭೆಯೇ ನಡೆದಿಲ್ಲ. ಹಾಗಾಗಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿದೆ ಎಂಬ ವಿಚಾರ ಸತ್ಯಕ್ಕೆ ದೂರವಾದುದು ಎಂದರು.
"ನನ್ನ ಮಗ ಸುನಿಲ್ ಬೋಸ್ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ. ಸುನಿಲ್ ಬೋಸ್‌ಗೆ 3 ಬಾರಿ ವಿಧಾನಸಭೆ ಚುನಾವಣೆಯ ಟಿಕೆಟ್ ಕೊಟ್ಟಿಲ್ಲ. ಆದರೂ ಬೇಸರ ಮಾಡಿಕೊಳ್ಳದೆ ಪಕ್ಷದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾನೆ. ಅವನಿಗಿಂತ ಕಿರಿಯರು, ಪಕ್ಷದ ಸದಸ್ಯರಲ್ಲದವರೂ ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದಾರೆ. ನನ್ನ ಮಗನಿಗೇ ಟಿಕೆಟ್ ಕೊಡಿ ಎಂದು ನಾನು ಎಂದೂ ಶಿಫಾರಸು ಮಾಡಿಲ್ಲ" ಎಂದರು.
ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಧ್ರುವ ನಾರಾಯಣ್ ಹಠಾತ್ ನಿಧನದ ನಂತರ ಅವರ ಮಗ ದರ್ಶನ್‌ಗೆ ಟಿಕೆಟ್ ನೀಡಲು ಶಿಫಾರಸು ಮಾಡಿದೆ. ಸ್ವತಃ ಸುನಿಲ್ ಬೋಸ್ ದರ್ಶನ್‌ಗೆ ಟಿಕೆಟ್ ಕೊಡುವಂತೆ ಹೇಳಿದ. ನಮ್ಮ ಪಕ್ಷದ ಸದಸ್ಯರಲ್ಲದ ಕಳಲೆ ಕೇಶವಮೂರ್ತಿಯನ್ನು ಕಾಂಗ್ರೆಸ್‌ಗೆ ಕರೆತಂದಾಗ, ನಂಜನಗೂಡು ಉಪಚುನಾವಣೆಯಲ್ಲಿ ಸುನಿಲ್ ಬೋಸ್ ಕೆಲಸ ಮಾಡಿ ಗೆಲ್ಲಿಸಿದ್ದಾನೆ ಎಂದರು.
ಕಾಂಗ್ರೆಸ್ ನಾಯಕರು ಮಾಂಸ ತಿಂದು ಸುತ್ತೂರಿಗೆ ಭೇಟಿ ನೀಡಿದ್ದಾರೆಂಬ ವಿಚಾರಕ್ಕೆ ಕುಪಿತರಾದ ಸಚಿವ ಮಹದೇವಪ್ಪ ಅವರು, "ಬಿಜೆಪಿಯವರು ನಮಗೆ ಊಟ ಬಡಿಸಿದ್ರಾ? ಬೇಜವಾಬ್ದಾರಿಯುತ ಹೇಳಿಕೆ ನೀಡಬಾರದು" ಎಂದು ಹೇಳಿದರು.
ಕೆರೆಗೋಡು ಧ್ವಜ ವಿವಾದ: ಮಂಡ್ಯದ ಕೆರೆಗೋಡಿನಲ್ಲಿ ಧ್ವಜ ಸ್ತಂಭ ತೆರವು ವಿರೋಧಿಸಿ ಮಂಡ್ಯ ಬಂದ್ ವಿಚಾರ ಸಂಬಂಧ ಪ್ರತಿಕ್ರಿಯಿಸಿ ಮಹದೇವಪ್ಪ, ಧಾರ್ಮಿಕ ಆಚಾರ, ವಿಚಾರಗಳನ್ನು ರಾಜಕೀಯಗೊಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ಶೋಭೆ ತರುವುದಿಲ್ಲ. ಧರ್ಮ, ದೇವರ ಹೆಸರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಅವಕಾಶ ಮಾಡಿಕೊಡಬಾರದು. ಮಂಡ್ಯ ಪ್ರಗತಿಪರ ಜಿಲ್ಲೆಯಾಗಿದೆ. ಅಲ್ಲಿನ ಜನರು ಸೌಹಾರ್ದತೆ, ಒಗ್ಗಟ್ಟು ಕಾಪಾಡಿಕೊಳ್ಳಬೇಕು, ಎಂದರು.
ಕಾಂಗ್ರೆಸ್ ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳ ಪಕ್ಷ. ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ. ಬಿಜೆಪಿಯವರು ಜೆಡಿಎಸ್ ಜತೆ ಸೇರಿದ ಬಳಿಕ ಬಲ ಹೆಚ್ಚಿಸಿಕೊಳ್ಳಲು ಮುಗ್ಧ ಜನರನ್ನು ಬಲಿಪಶು ಮಾಡುವುದು ಸರಿಯಲ್ಲ ಎಂದು ಹೇಳಿದರು.












Click it and Unblock the Notifications