ಮೈಸೂರು ಉಸ್ತುವಾರಿ ಸಚಿವರಿಗೆ ಸವಾಲು ಹಾಕಿದ ಕಾಂಗ್ರೆಸ್!
ಮೈಸೂರು, ಫೆಬ್ರವರಿ 16; "ಎಸ್. ಟಿ. ಸೋಮಶೇಖರ್ ಬಂದ ಮೇಲೆ ಮೈಸೂರಿನ ಅಭಿವೃದ್ಧಿಗೆ 5 ರೂಪಾಯಿ ಅನುದಾನ ತಂದಿಲ್ಲ. ಐದು ರೂಪಾಯಿ ತಂದಿರೋದು ಸಾಬೀತು ಮಾಡಿದರೆ ನಾನೇ ಸೋಮಶೇಖರ್ ಪರವಾಗಿ ಪ್ರಚಾರ ಮಾಡುತ್ತೇನೆ" ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಸವಾಲು ಹಾಕಿದರು.
ಮಂಗಳವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಲಕ್ಷ್ಮಣ್, "ರಾಜ್ಯ ಬಜೆಟ್ ಬಗ್ಗೆ ಮುಖ್ಯಮಂತ್ರಿಗಳು ತಲೆಕೆಡಿಸಿಕೊಂಡಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಸತತ 45ದಿನಗಳು ವಿವಿಧ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಯಡಿಯೂರಪ್ಪ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿಲ್ಲ" ಎಂದು ದೂರಿದರು.
"ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವಲ್ಲಿ ರಾಜ್ಯ ವಿಫಲವಾಗಿದೆ. ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಈ ಬಾರಿಯ ಕೇಂದ್ರದ ಬಜೆಟ್ ರಾಜ್ಯಕ್ಕೆ ಶೂನ್ಯ ಅನುದಾನ ನೀಡಿದೆ. ಪಕ್ಕದ ರಾಜ್ಯಕ್ಕೆ 6 ಲಕ್ಷ ಕೋಟಿಯನ್ನು ಚುನಾವಣೆ ಮುಂದಿಟ್ಟುಕೊಂಡು ಹಣ ನೀಡಲಾಗಿದೆ" ಎಂದು ಆರೋಪಿಸಿದರು.

"ನಿಮ್ಮ ಅವಧಿಯಲ್ಲಿ ಮೈಸೂರಿಗೆ ಯಾವುದೇ ಅನುದಾನ ನೀಡಿಲ್ಲ. ಮೈಸೂರನ್ನು ಪಾರಂಪರಿಕ ನಗರ ಎಂದು ಘೋಷಣೆ ಮಾಡಬೇಕು. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮೈಸೂರಿಗೆ ಹೆಚ್ಚು ಅನುದಾನ ನೀಡಬೇಕು. ಮೈಸೂರಿನ ಸುತ್ತಮುತ್ತ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು" ಎಂದು ಒತ್ತಾಯಿಸಿದರು.
ಕೇಸರಿ ಬಣ್ಣ ಬಳಿಯುತ್ತಿದ್ದಾರೆ; ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷಣ್ ಅಸಮಾಧಾನ ವ್ಯಕ್ತಪಡಿಸಿದರು. "ಉಚಿತ ನಾಟಕ ತೋರಿಸುವುದು ಸಿದ್ದರಾಮಯ್ಯ ಅಕ್ಕಿಕೊಟ್ಟಂತೆ" ಎಂಬ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.
"ಬಿಜೆಪಿಯವರು ಬಡವರು ತಿನ್ನುವ ಅನ್ನಕ್ಕೂ ಕೇಸರಿ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದಾರೆ. ನೀವು ಅಕ್ಕಿ ಬೆಳೆಯುವವರನ್ನು ಸಹಿಸಲ್ಲ, ಉಚಿತ ಅಕ್ಕಿ ಕೊಡುವವರನ್ನು ಸಹಿಸಲ್ಲ. ಕಾರ್ಯಪ್ಪ ನಿಮ್ಮ ವ್ಯಾಪ್ತಿಯಲ್ಲಿ ಏನಿದೆ ಅದನ್ನು ಮಾತ್ರ ಮಾಡಿ" ಎಂದು ಹೇಳಿದರು.
"ಮೈಸೂರಿನಲ್ಲಿ ನಿಮ್ಮ ಅಡ್ಡಕಸವಿತನ ತೋರಬೇಡಿ. ಕಾರ್ಯಪ್ಪ ಬಂದಾಗಿಂದ ರಂಗಾಯಣದಲ್ಲಿ ಬಿಜೆಪಿ, ಆರ್ ಎಸ್ ಎಸ್ ಅಜೆಂಡಾ ಹೇರುತ್ತಿದ್ದಾರೆ. ಸಿದ್ದರಾಮಯ್ಯ ತಂದ ಅನ್ನಭಾಗ್ಯ ಯೋಜನೆಯಿಂದ ಒಂದೂವರೆ ಕೋಟಿ ಜನ ಹೊಟ್ಟೆ ತುಂಬಿಸಿಕೊಂಡಿದ್ದಾರೆ. ಬಡವರ ಬಗ್ಗೆ ಟೀಕೆ ಮಾಡಿ ಸಂತೋಷ ಪಡುವ ಕೊಳಕು ಮನಸ್ಥಿತಿ ನಿಮ್ಮದು" ಎಂದು ವಾಗ್ದಾಳಿ ನಡೆಸಿದರು.
ಬಂಧನ ಮಾಡಿರೋದು ದುರಂತ; "ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಾದ್ಯಂತ ಸರ್ಕಾರದ ವಿರುದ್ದ ಮಾತನಾಡಿದ 800 ಜನರ ಮೇಲೆ ದೇಶದ್ರೋಹದ ಕೇಸ್ ಹಾಕಿದ್ದಾರೆ. ಅದರಲ್ಲಿ 4ಕ್ಕೆ ಮಾತ್ರ ಚಾರ್ಜ್ ಶೀಟ್ ಹಾಕಿದ್ದಾರೆ. ಇಷ್ಟರ ಮಟ್ಟಿಗೆ ಯಾವ ಕಾಲದಲ್ಲೂ ದೇಶದ್ರೋಹದ ಕೇಸ್ ದಾಖಲಾಗಿರಲಿಲ್ಲ" ಎಂದರು.
"ದಿಶಾ ರವಿಯನ್ನು ದೆಹಲಿ ಪೊಲೀಸರು ಆಕ್ರಮವಾಗಿ ಬಂಧಿಸಿದ್ದಾರೆ. ನಮ್ಮ ಬೆಂಗಳೂರು ಪೊಲೀಸರ ಅನುಮತಿ ಪಡೆಯದೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ನಮ್ಮ ರಾಜ್ಯದವರನ್ನು, ಸರ್ಕಾರ ಅಥಾವ ಪೊಲೀಸರ ಅನುಮತಿ ಪಡೆಯದೇ ಬಂಧಿಸಿರುವುದು ದುರಂತ" ಎಂದು ಲಕ್ಷ್ಮಣ್ ಹೇಳಿದರು.
"ದಿಶಾ ರವಿ ರೈತ ಕುಟುಂಬದಿಂದ ಬಂದವರು. ರೈತರಿಗೆ ಬೆಂಬಲ ಸೂಚಿಸಿದ್ದೆ ಅವರಿಗೆ ತೊಂದರೆಯಾಗಿದೆ. ಆ ಕಾರಣಕ್ಕಾಗಿ ಬಂಧಿಸಿದ್ದಾರೆ. ಟೂಲ್ ಕಿಟ್ ಅನ್ನೊ ಹೊಸ ಪದ ಬಳಕೆ ಮಾಡಿ ಜನರಲ್ಲಿ ಗೊಂದಲ ಸೃಷ್ಟಿ ಮಾಡಿ ಹೆಣ್ಣು ಮಗಳನ್ನು ಬಂಧಿಸಿದ್ದಾರೆ" ಎಂದು ಆರೋಪಿಸಿದರು.












Click it and Unblock the Notifications