ಜಂಬೂ ಸವಾರಿ ಯಶಸ್ವಿಗೊಳಿಸಿ ರಿಲ್ಯಾಕ್ಸ್ ಮೂಡ್‌ಗೆ ತೆರಳಿದ ಗಜಪಡೆ
ಮೈಸೂರು, ಅಕ್ಟೋಬರ್ 6: ಅಭಿಮನ್ಯು ಮೂರನೇ ಬಾರಿ ಅಂಬಾರಿ ಹೊತ್ತು ಯಶಸ್ವಿಯಾಗಿ ಬನ್ನಿಮಂಟಪ ತಲುಪಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಹಿಡಿದು ಮಾವುತರು ಹಾಗೂ ಕಾವಾಡಿಗರು ಸಂಭ್ರಮದಲ್ಲಿದ್ದಾರೆ.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಂಡ ಆನೆಗಳು ಇದೀಗ ರಿಲ್ಯಾಕ್ಸ್ ಮೂಡಿನಲ್ಲಿವೆ. ಬುಧವಾರ ದಸರಾ ಜಂಬೂ ಸವಾರಿ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಅಭಿಮನ್ಯು ನೇತೃತ್ವದ ಗಜಪಡೆ ಇದೀಗ ಅರಮನೆ ಆವರಣದಲ್ಲಿ ದಣಿವಾರಿಸಿಕೊಳ್ಳುತ್ತಿವೆ.
ಮೈಸೂರು ದಸರಾ 2022: ಮೊದಲ ಬಾರಿಗೆ ವಿಶೇಷ ಡ್ರೋನ್ ಲೈಟ್ ಶೋ
ಅಭಿಮನ್ಯು ಮಾವುತ ವಸಂತ ಯುದ್ಧ ಗೆದ್ದ ಸಂಭ್ರಮದಲ್ಲಿದ್ದಾನೆ. ಅಲ್ಲದೆ, ಇತರೆ ಆನೆಗಳು ಯಾವುದೇ ಸಮಸ್ಯೆ ಇಲ್ಲದೆ ಮೆರವಣಿಯಲ್ಲಿ ಸಾಗಿಬಂದವು. ಈ ಹಿನ್ನೆಲೆಯಲ್ಲಿ ಗುರುವಾರ ಆನೆಗಳಿಗೆ ಮೀಸಲಾದ ಅರಮನೆ ಆವರಣದಲ್ಲಿ ನಿರ್ಮಿಸಿರುವ ತೊಟ್ಟಿಯಲ್ಲಿ ಸ್ನಾನ ಮಾಡಿಸಲಾಯಿತು.
ಗುರುವಾರ ಆನೆಗಳಿಗೆ ಯಾವುದೇ ತಾಲೀಮು, ಕಸರತ್ತು ಇರಲಿಲ್ಲ. ಹಾಗಾಗಿ ಆನೆಗಳು ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದವು. ಮಾವುತರು ಆನೆಗಳನ್ನು ತೊಳೆಯುತ್ತಿದ್ದರೆ, ನೀರಿನಲ್ಲಿ ಆಟವಾಡುತ್ತಾ ಆನೆಗಳು ನಿರಾಳವಾಗಿದ್ದು ಕಂಡುಬಂದಿತು. ಈ ಬಾರಿ ಅದ್ಧೂರಿ ದಸರಾ ನಡೆದ ಕಾರಣ ಅಭಿಮನ್ಯು, ಚೈತ್ರಾ, ಕಾವೇರಿ, ಅರ್ಜುನ, ಮಹೇಂದ್ರ, ಭೀಮ, ಗೋಪಾಲಸ್ವಾಮಿ ಹಾಗೂ ಧನಂಜಯ, ಗೋಪಿ ಸೇರಿದಂತೆ 9 ಆನೆಗಳು ಭಾಗವಹಿಸಿದ್ದವು.
ಸೆಲ್ಫಿಗೆ ಮುಗಿಬಿದ್ದ ಜನರು
ಜಂಬೂಸವಾರಿ ಮುಗಿದ ಹಿನ್ನೆಲೆಯಲ್ಲಿ ದಸರಾ ಆನೆಗಳು ಅರಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರೆ ಜನರು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ದಸರಾ ಸಂಭ್ರಮ ಮುಗಿದರೂ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಗುರುವಾರ ಸಾಕಷ್ಟು ಜನ ಆನೆಗಳೊಡನೆ ಫೋಟೋ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜಂಬೂಸವಾರಿ ಮುಗಿದ ಕಾರಣ ಮಾವುತರು ಹಾಗೂ ಕಾವಾಡಿಗರು ಯಾವುದೇ ಪ್ರತಿರೋಧ ತೋರದೆ ಫೋಟೋ ತೆಗೆಸಿಕೊಳ್ಳಲು ಅನುವು ಮಾಡಿಕೊಟ್ಟರು.

ಗಜಪಡೆ ಬೀಳ್ಕೊಡುಗೆ
ಸುಮಾರು 59 ದಿನ ಆನೆಗಳಿಗೆ ಉತ್ತಮ ತರಬೇತಿ, ತಾಲೀಮು ಕೊಟ್ಟು ಮಾವುತರು ಹಾಗೂ ಕಾವಾಡಿಗರು ಈ ಬಾರಿಯ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ್ದಾರೆ. ಹಾಗಾಗಿ ಅಕ್ಟೋಬರ್ 7ರಂದು ಗಜಪಡೆಗೆ ಬೀಳ್ಕೊಡುಗೆ ನೀಡಲಾಗುತ್ತದೆ. ಇಷ್ಟು ದಿನ ಅರಮನೆಯಲ್ಲಿದ್ದ ಆನೆಗಳಿಗೆ ಸಂಪ್ರದಾಯದಂತೆ ಪೂಜೆ ನೆರವೇರಿಸಿ ಸ್ವ ಸ್ಥಳಕ್ಕೆ ಕಳಿಸಿಕೊಡಲಾಗುತ್ತದೆ. ಅರಮನೆಗೆ ಬಂದು ಗಂಡು ಮರಿಗೆ ಜನ್ಮ ನೀಡಿದ್ದ ಲಕ್ಷ್ಮಿ ಮತ್ತು ಮರಿಯಾನೆಯನ್ನು ಕೂಡ ಬೀಳ್ಕೊಡಲು ನಿರ್ಧರಿಸಲಾಗಿದೆ. ವೈದ್ಯರು ಮತ್ತು ನಮ್ಮ ಅಧಿಕಾರಿಗಳ ಜತೆ ಚರ್ಚೆ ಮಾಡಿ ಈ ನಿರ್ಧಾರ ಮಾಡಲಾಗಿದೆ ಎಂದು ಡಿಸಿಎರ್ಫ್ ಕರಿಕಾಳನ್ ತಿಳಿಸಿದ್ದಾರೆ.