ಮೈಸೂರು ಕಲ್ಲಹಳ್ಳಿ ಗ್ರಾಮವನ್ನು ದತ್ತು ಪಡೆದ ಸರ್ಕಾರ
ಮೈಸೂರು, ಆಗಸ್ಟ್, 21 : ಹುಣಸೂರಿನ ಕಲ್ಲಹಳ್ಳಿ ಗ್ರಾಮವನ್ನು ದತ್ತು ತೆಗೆದುಕೊಂಡು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಡಿ ದೇವರಾಜ ಅರಸು ಅವರ ಜನ್ಮಶತದಿನೋತ್ಸವದ ಪ್ರಯುಕ್ತ ಹುಣಸೂರಿಗೆ ಗುರುವಾರ ಭೇಟಿ ನೀಡಿದ ಸಿದ್ದರಾಮಯ್ಯ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಹುಣಸೂರು ಗ್ರಾಮದಲ್ಲಿ 7.5 ಕೋಟಿ ವೆಚ್ಚದ ಡಿ ದೇವರಾಜ ಅರಸು ಭವನ ಶಂಕು ಸ್ಥಾಪನಾ ಕಾರ್ಯ ನೆರವೇರಿಸಿ ಮಾತನಾಡಿದರು.[ಮೈಸೂರಲ್ಲಿ ಅರಸು ಜನ್ಮಶತಮಾನೋತ್ಸವಕ್ಕೆ ಚಾಲನೆ]

ಈ ಸಂದರ್ಭದಲ್ಲಿ ಕಲ್ಲಹಳ್ಳಿ ಗ್ರಾಮವನ್ನು ಅಭಿವೃದ್ದಿ ಪಡಿಸುವುದರ ಜೊತೆಗೆ ಅರಸು ಅವರ ಜನ್ಮಸ್ಥಳ ಪಿರಿಯಾ ಪಟ್ಟಣ ತಾಲೂಕಿನ ಬೆಟ್ಟದ ತುಂಗಾ ಗ್ರಾಮವನ್ನು ಸಹ ಅಭಿವೃದ್ದಿ ಪಡಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ವಹಿಸಿದೆ ಎಂದರು.
ಅರಸು ಅವರ ಸಮಾಧಿಯನ್ನು ಸ್ಮಾರಕವಾಗಿ ಅಭಿವೃದ್ದಿ ಪಡಿಸುವುದರ ಜೊತೆಯಲ್ಲಿ ಅವರ ಮನೆಯನ್ನು ಪಾರಂಪರಿಕ ಕಟ್ಟಡವಾಗಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬಳಿಕ ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆದ ಡಿ ದೇವರಾಜ ಅರಸು ಜನ್ಮ ಶತಮಾನೋತ್ಸವ ಮತ್ತು ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಡಿ. ದೇವರಾಜ ಅರಸು ಪ್ರಶಸ್ತಿಯನ್ನು ಆರ್. ಎಲ್ ಜಾಲಪ್ಪ ಅವರಿಗೆ ಹಾಗೂ ಡಿ ದೇವರಾಜು ಅರಸು ಶೌರ್ಯ ಪ್ರಶಸ್ತಿಯನ್ನು ನಿವೃತ್ತ ಪೊಲೀಸ್ ಅಧಿಕಾರಿ ಸದಾನಂದ್ ಅವರಿಗೆ ನೀಡಿ ಗೌರವಿಸಿದರು
ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಇಚ್ಛಿಸುವವರಿಗೆ ಅನುಕೂಲವಾಗಲು ಡಿ ದೇವರಾಜ ಅರಸು ವಿದೇಶಿ ವಿದ್ಯಾಭ್ಯಾಸ ಯೋಜನೆ ಅಡಿ ಸುಮಾರು 100 ವಿದ್ಯಾರ್ಥಿಗಳಿಗೆ ತಲಾ 10 ಲಕ್ಷ ರೂ ನಂತೆ 10 ಕೋಟಿ ರೂ ಮೀಸಲಿಡಲಾಗಿದ್ದು, ಸಾಂಕೇತಿಕವಾಗಿ 5 ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ದಿ ಸಚಿವ ಹೆಚ್. ಆಂಜನೇಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪಶು ಸಂಗೋಪನಾ ಸಚಿವ ಟಿ.ಬಿ ಜಯಚಂದ್ರ ಮತ್ತಿತರ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications