ಹುಣಸೂರು ಉಪ ಚುನಾವಣೆ; ಬಿಜೆಪಿ ಅಭ್ಯರ್ಥಿ ಅಂತಿಮ?
ಮೈಸೂರು, ನವೆಂಬರ್ 05 : ಹುಣಸೂರು ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿಯ ತಯಾರಿ ಜೋರಾಗಿದೆ. ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿದೆ. ಜೆಡಿಎಸ್ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.
ಡಿಸೆಂಬರ್ 5ರಂದು ಉಪ ಚುನಾವಣೆ ನಿಗದಿಯಾಗಿದೆ.
ಹುಣಸೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಚ್. ವಿಶ್ವನಾಥ್ ಅನರ್ಹರಾಗಿದ್ದಾರೆ. ಚುನಾವಣಾ ಆಯೋಗ ಉಪ ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡಿದೆ. ಬಿಜೆಪಿ ಹೈಕಮಾಂಡ್ ಮಾಜಿ ಸಚಿವ ಸಿ. ಪಿ. ಯೋಗೇಶ್ವರಗೆ ಉಪ ಚುನಾವಣಾ ಕಣಕ್ಕಿಳಿಯುವಂತೆ ಸೂಚನೆ ನೀಡಿದೆ.
ಎಚ್. ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿಗೆ ಬಿಜೆಪಿ ಟಿಕೆಟ್ ನೀಡಲು ಚಿಂತನೆ ನಡೆದಿತ್ತು. ಕೊನೆ ಕ್ಷಣದಲ್ಲಿ ಬಿಜೆಪಿ ತಂತ್ರವನ್ನು ಬದಲಾಯಿಸಿದ್ದು, ಚನ್ನಪಟ್ಟಣದ ಮಾಜಿ ಶಾಸಕ ಸಿ. ಪಿ. ಯೋಗೇಶ್ವರ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಸಿ. ಪಿ. ಯೋಗೇಶ್ವರ ಎಚ್. ವಿಶ್ವನಾಥ್ ಒಪ್ಪಿಗೆ ಪಡೆದೇ ಉಪ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಕ್ಷೇತ್ರದ ಕೆಲವು ಭಾಗಗಳಲ್ಲಿ ಈಗಾಗಲೇ ಅವರು ಪ್ರಚಾರವನ್ನು ಆರಂಭಿಸಿದ್ದಾರೆ. ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಇನ್ನೂ ಪ್ರಯತ್ನ ನಡೆಸುತ್ತಿದೆ.

ಎಚ್. ವಿಶ್ವನಾಥ್ ಎಂಎಲ್‌ಸಿ
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಎಚ್. ವಿಶ್ವನಾಥ್ ಪ್ರಮುಖ ಕಾರಣ. ಹುಣಸೂರು ಉಪ ಚುನಾವಣಾ ಕಣಕ್ಕೆ ಅವರು ಇಳಿಯುತ್ತಿಲ್ಲ. ಸಿ. ಪಿ. ಯೋಗೇಶ್ವರ ಬಿಜೆಪಿ ಅಭ್ಯರ್ಥಿಯಾಗಲಿದ್ದು, ಎಚ್. ವಿಶ್ವನಾಥ್ ಎಂಎಲ್‌ಸಿಯಾಗುವುದು ಖಚಿತವಾಗಿದೆ.

ಸಿ. ಪಿ. ಯೋಗೇಶ್ವರ ಹೇಳಿದ್ದೇನು?
"ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಕ್ಷೇತ್ರದ ಸಮಸ್ಯೆ ಮತ್ತು ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಎಚ್. ವಿಶ್ವನಾಥ್ ಮಾರ್ಗದರ್ಶನದಲ್ಲಿಯೇ ನಾನು ಅಭ್ಯರ್ಥಿಯಾಗಲಿದ್ದೇನೆ" ಎಂದು ಸಿ. ಪಿ. ಯೋಗೇಶ್ವರ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಅಂತಿಮ
ಕಾಂಗ್ರೆಸ್ ಹುಣಸೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಎಚ್. ಪಿ. ಮಂಜುನಾಥ್‌ಗೆ ಟಿಕೆಟ್ ನೀಡಿದೆ. 2018ರ ಚುನಾವಣೆಯಲ್ಲಿ 83,092 ಮತಗಳನ್ನು ಪಡೆದು ಎಚ್. ವಿಶ್ವನಾಥ್ ವಿರುದ್ಧ ಮಂಜುನಾಥ್ ಸೋಲು ಕಂಡಿದ್ದರು. ಸಿದ್ದರಾಮಯ್ಯಗೆ ಆಪ್ತರಾಗಿರುವ ಅವರು ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

16 ಆಕಾಂಕ್ಷಿಗಳು
ಹುಣಸೂರು ಕ್ಷೇತ್ರದ ಜೆಡಿಎಸ್ ಟಿಕೆಟ್‌ಗೆ ಪೈಪೋಟಿ ನಡೆಯುತ್ತಿದೆ. ಸೋಮಶೇಖರ್ ಸೇರಿದಂತೆ 16 ಅಕಾಂಕ್ಷಿಗಳಿದ್ದು, ಅಭ್ಯರ್ಥಿ ಅಂತಿಮಗೊಳಿಸುವ ಹೊಣೆಗಾರಿಕೆಯನ್ನು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ವಹಿಸಿಕೊಂಡಿದ್ದಾರೆ.











Click it and Unblock the Notifications