ಮೈಸೂರು: ಮೂರು ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ಅಣಕು ಕಾರ್ಯಾಚರಣೆ
ಮೈಸೂರು, ಜನೆವರಿ 2: ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯಂತೆ ಇಂದು ಮೈಸೂರು ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ಅಣಕು ಕಾರ್ಯಾಚರಣೆ ನಡೆಯಲಿದೆ.
ಹುಣಸೂರಿನ ಬಿಳಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆ, ಮೈಸೂರು ನಗರದ ಜಯನಗರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಅಣಕು ಕಾರ್ಯಾಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಲಸಿಕಾ ಕಾರ್ಯಾಚರಣೆ ನಡೆಯಲಿದ್ದು, ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಪ್ರತಿ ಕೇಂದ್ರಗಳಲ್ಲಿ ಲಸಿಕೆ ಪಡೆಯಲಿರುವ ತಲಾ 25 ಮಂದಿಯನ್ನು ಗುರುತಿಸಲಾಗಿದೆ.

ಪ್ರತಿ ಲಸಿಕಾ ಕೇಂದ್ರದಲ್ಲಿ ಮೂರು ಕೊಠಡಿಗಳನ್ನು (ನಿರೀಕ್ಷಣಾ ಕೊಠಡಿ, ಲಸಿಕಾ ಕೊಠಡಿ, ನಿಗಾ ಕೊಠಡಿ) ಮೀಸಲಿಡಲಾಗಿದ್ದು, ಐವರು ಲಸಿಕಾ ಅಧಿಕಾರಿಗಳನ್ನು ನೇಮಿಸಲಾಗಿದೆ.
ಲಸಿಕೆ ಪಡೆದವರು 30 ನಿಮಿಷಗಳ ಕಾಲ ನಿಗಾ ಕೊಠಡಿಯಲ್ಲಿ ಇರಬೇಕು. ಇದು ಕೇವಲ ಅಣಕು ಕಾರ್ಯಾಚರಣೆ ಮಾತ್ರ. ಇಲ್ಲಿ ಯಾವುದೇ ಕೋವಿಡ್-19 ಲಸಿಕೆ ನೀಡಲಾಗುವುದಿಲ್ಲ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.











Click it and Unblock the Notifications