ಮೈಸೂರಲ್ಲಿ ಮೇಯರ್ ಭೈರಪ್ಪರ ಕೊಠಡಿಗೆ ಬೀಗ ಹಾಕಿದ್ದು ಯಾಕೆ?
ಮೈಸೂರು, ನವೆಂಬರ್, 21 : ಕೋರಂ ಕೊರತೆಯ ಹಿನ್ನಲೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಸಭೆಯನ್ನು ಸೋಮವಾರಕ್ಕೆ ಮುಂದೂಡಿದ್ದರಿಂದ ಆಕ್ರೋಶಗೊಂಡ ಮೈಸೂರು ನಗರಪಾಲಿಕೆಯ ಕಾಂಗ್ರೆಸ್ ಸದಸ್ಯರು, ನೂತನ ಮೇಯರ್ ಬಿ.ಎಲ್.ಭೈರಪ್ಪ ಅವರನ್ನು ಪಾಲಿಕೆಯ ಕೊಠಡಿಯೊಂದರಲ್ಲಿ ಕೂಡಿ ಹಾಕಿದ ಘಟನೆ ಶುಕ್ರವಾರ ನಡೆದಿದೆ.
ಶುಕ್ರವಾರ ಬೆಳಿಗ್ಗೆ 9ರ ಸಮಯದಲ್ಲಿ ಪಾಲಿಕೆಯ ಕೌನ್ಸಿಲ್ ಹಾಲ್ ನಲ್ಲಿ ಪಾಲಿಕೆಯ 4 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲು ಮೇಯರ್ ಬಿ.ಎಲ್.ಬೈರಪ್ಪ ಸಭೆ ಕರೆದಿದ್ದರು. ಆದರೆ ಸಭೆ ಆರಂಭವಾದರೂ ಹೆಚ್ಚಿನ ಸದಸ್ಯರು ಬಂದಿರಲಿಲ್ಲ. ಇದರಿಂದ ಕೋರಂ ಕೊರತೆ ಹಿನ್ನೆಲೆಯಲ್ಲಿ ಸಭೆ ಮುಂದೂಡಲಾಗಿದೆ ಎಂದು ಘೋಷಿಸಿದರು.[ಮೈಸೂರು ಮಹಾನಗರ ಪಾಲಿಕೆ ಗದ್ದುಗೆಯಲ್ಲಿ ಸಿದ್ದುಗೆ ಮುಖಭಂಗ]

ಮೇಯರ್ ಅವರ ಈ ಘೋಷಣೆ ಕೇಳಿ ಕೆಂಡಾಮಂಡಲರಾದ ಕಾಂಗ್ರೆಸ್ ಸದಸ್ಯರು ಮೇಯರ್ ರವರ ನಡಾವಳಿ ಪ್ರಶ್ನಿಸಿ ಗದ್ದಲವೆಬ್ಬಿಸಿ, ಚುನಾವಣೆ ನಡೆಸಲೇಬೇಕೆಂದು ಪಟ್ಟುಹಿಡಿದರು. ಆದರೆ ಇದಕ್ಕೆ ಸೊಪ್ಪು ಹಾಕದೆ ಮೇಯರ್ ಸಭೆ ಮುಂದೂಡಿ, ತಮ್ಮ ಕೊಠಡಿಗೆ ತೆರಳುತ್ತಿದ್ದಂತೆ ಬೀಗ ಜಡಿದು ಕೂಡಿಹಾಕಿ ದಿಗ್ಬಂಧನ ಹಾಕಿದರು. ಈ ಸಂದರ್ಭದಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿಯೂ ನಡೆಯಿತು.[ಬಿಬಿಎಂಪಿ ನೂತನ ಮೇಯರ್ ಮುಂದಿರುವ 10 ಸವಾಲುಗಳು]
ನಾಲ್ಕು ಸ್ಥಾಯಿ ಸಮಿತಿಗೆ ಆಯ್ಕೆ ಮಾಡಿರುವ ತಲಾ ಏಳು ಸದಸ್ಯರುಗಳ ಪೈಕಿ ಜೆಡಿಎಸ್ ನಿಂದ 2, ಬಿಜೆಪಿಯಿಂದ 2, ಕಾಂಗ್ರೆಸ್ ನಿಂದ 3 ಮಂದಿಯನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ ಇಂದಿನ ಸಭೆಗೆ ಕಾಂಗ್ರೆಸ್ಸಿನ ಆಕಾಂಕ್ಷಿಗಳು ಹಾಜರಾಗಿದ್ದು, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ಗೈರುಹಾಜರಾಗಿದ್ದರು. ಮೇಯರ್ ಭೈರಪ್ಪ ಅಭ್ಯರ್ಥಿಗಳ ಬರುವಿಕೆಗಾಗಿ ಕಾಯದೇ ಅರ್ಧ ಗಂಟೆ ಸಮಯ ನೀಡದೆ ಏಕಾಏಕಿ ಕೋರಂ ಇಲ್ಲ ಎಂದು ಹೇಳಿ ಸಭೆಯನ್ನು ಮುಂದೂಡಿರುವುದು ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.












Click it and Unblock the Notifications