ಕರಾಳ ದಿನ ಆಚರಣೆ : ಕಾಂಗ್ರೆಸ್ ನಿಂದ ನಿಯಮ ಉಲ್ಲಂಘನೆ
ಮೈಸೂರು, ನವೆಂಬರ್ 08 : ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಸೇರಿದಂತೆ ಮೈಸೂರಿನ ಕಾಂಗ್ರೆಸ್ ಕಾರ್ಯಕರ್ತರು ಅಪನಗದೀಕರಣ ವಿರುದ್ಧ ಪ್ರತಿಭಟನೆ ಮಾಡುವ ಉತ್ಸಾಹದಲ್ಲಿ ನಿಯಮ ಉಲ್ಲಂಘಿಸಿ ಪೇಚಿಗೆ ಸಿಲುಕಿದ್ದಾರೆ.
ಸಚಿವ ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನವೆಂಬರ್ 8 ಬುಧವಾರ ನೋಟ್ ಬ್ಯಾನ್ ವಿರುದ್ಧ ಕರಾಳ ದಿನಾಚರಣೆ ಆಚರಿಸಿ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು. ಪ್ರತಿಭಟನೆ ಮೆರವಣಿಗೆ ಮಾಡಿದ ನಂತರ ಕೊನೆಯದಾಗಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬಂದ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಯೂ ಪ್ರತಿಭಟನೆ ಮುಂದುವರೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ನಿಯಮ ಉಲ್ಲಂಘನೆಯಾಗಿರುವುದು ಇಲ್ಲಿಯೇ.

ಜಿಲ್ಲಾಧಿಕಾರಿಗಳ ಕಚೇರಿಯ ನೂರು ಮೀಟರ್ ಪರಿಧಿಯಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶ ಇಲ್ಲ. ಹಾಗೇನಾದರು ಪ್ರತಿಭಟನೆ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅವಕಾಶ ಇದೆ. ಹೀಗಿದ್ದು ಸಚಿವ ಮಹದೇವಪ್ಪ ಮತ್ತು ಇತರ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗಲಿನಲ್ಲಿಯೇ ನಿಂತು ಪ್ರತಿಭಟನೆ ಮಾಡಿದ್ದಾರೆ.
ಘಟನೆ ಕುರಿತು ಜಿಲ್ಲಾಧಿಕಾರಿಗಳು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ನಗರದ ಇತರ ಸಂಘಟನೆಗಳ ಸದಸ್ಯರು ಪ್ರತಿಭಟನೆ ಸಮಯದಲ್ಲಿ ಪೊಲೀಸರ ಆಡಳಿತ ಪರ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. "ಬೇರೆ ಸಂಘಟನೆಗಳು ಪ್ರತಿಭಟನೆ ಮಾಡಿದಾಗ ಕಾನೂನು ನೆಪ ಹೇಳಿ ಜಿಲ್ಲಾಧಿಕಾರಿ ಕಚೇರಿ ತಲುಪುವ ಮುಂಚೆಯೇ ತಡೆದು ಬಿಡುತ್ತಾರೆ. ಆದರೆ ಇಂದು ಸಚಿವರು ಇದ್ದಾರೆಂಬ ಕಾರಣದಿಂದ ಕಚೇರಿಯ ಹೆಬ್ಬಾಗಿಲಿನವರೆಗೂ ಬಿಟ್ಟಿದ್ದಾರೆ' ಎಂದು ಆರೋಪಿಸಿದ್ದಾರೆ.











Click it and Unblock the Notifications