Mysuru: ಮೈಸೂರಿನಲ್ಲಿ ಮಹಿಷಾ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ!
ಮೈಸೂರು ಅಕ್ಟೋಬರ್ 12: ಮೈಸೂರಿನಲ್ಲಿ ಮಹಿಷಾ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಮೈಸೂರು ಪುರಭವನದಲ್ಲಿ ನಡೆಯಲಿರುವ ಮಹಿಷಾ ದಸರಾದ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ.
ವಿವಾದಿತ ಮಹಿಷಾ ದಸರಾ ಮತ್ತು ಅದರ ವಿರುದ್ಧ ಬಿಜೆಪಿ ನಡೆಸಲು ಉದ್ದೇಶಿಸಿರುವ ಚಲೋ ಚಾಮುಂಡಿ ಜಾಥಾಗಳೆರಡಕ್ಕೂ ಅನುಮತಿ ನಿಷೇಧಿಸಿರುವ ಮೈಸೂರು ಪೊಲೀಸರು ನಗರದಲ್ಲಿ ಗುರುವಾರ ಮಧ್ಯಾರಾತ್ರಿ 12 ಗಂಟೆಯಿಂದ ನಾಡಿದ್ದು ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಈಗಾಗಲೇ ಮೈಸೂರು ಮಹಿಷಾ ದಸರಾ ಸಮಿತಿಯು ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆ ಬಳಿ ಆಯೋಜಿಸಲು ಉದ್ದೇಶಿಸಿದ್ದ ಮಹಿಷಾ ದಸರಾಗೆ ಮೈಸೂರು ಇಲಾಖೆ ಅನುಮತಿ ನಿರಾಕರಿಸಿದೆ. ಆದರೆ ಅದೇ ದಿನ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ನಡೆಸಲು ಉದ್ದೇಶಿಸಿರುವ ಮಹಿಷಾ ದಸರಾದ ಸಭಾ ಕಾರ್ಯಕ್ರಮಕ್ಕೆ ಅನುಮತಿ ನೀಡಿದೆ.
ನಾಳೆ ಮಹಿಷಾ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಿ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಕೆಲ ಆದೇಶ ಹೊರಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದೇಶದಂತೆ ನಗರದ ಟೌನ್ ಹಾಲ್ ನಲ್ಲಿ ಮಹಿಷಾ ದಸರಾ ಆಚರಣೆಗೆ ಅವಕಾಶ ನೀಡಲಾಗಿದ್ದು ವೇದಿಕೆ ಕಾರ್ಯಕ್ರಮಕ್ಕಷ್ಟೇ ಅನುಮತಿ ನೀಡಲಾಗಿದ್ದು ಸಂಭ್ರಮಾಚರಣೆಗೆ ಅವಕಾಶವಿಲ್ಲ. ಮೆರವಣಿಗೆ ರ್ಯಾಲಿ ಪ್ರತಿಭಟನೆ ಮಾಡಬಾರದು.
ಮಹಿಷ ದಸರಾ ಸಮಿತಿಯವರು ಹಾಗೂ ದಲಿತ ಸಂಘಟನೆಗಳು ನಾವು ಆಚರಣೆ ಮಾಡುತ್ತೇವೆ ಎಂದು ಪಟ್ಟು ಹಿಡಿದರೆ, ಇತ್ತ ಸಂಸದ ಪ್ರತಾಪ್ ಸಿಂಹ ಇದನ್ನು ವಿರೋಧಿಸಿದ್ದಾರೆ. ಜೊತೆಗೆ ಚಾಮುಂಡಿ ಬೆಟ್ಟ ಚಲೋ ಜಾಥಾಗೆ ಕರೆ ಕೊಟ್ಟಿದ್ದಾರೆ. ಆದರೆ, ಮೈಸೂರು ನಗರ ಆಯುಕ್ತ ರಮೇಶ್ ಬಾನೋತ್ ಮಾತ್ರ ಎರಡು ಕಡೆಯವರ ಮನವಿಯನ್ನು ತಿರಸ್ಕರಿಸಿದ್ದಾರೆ. ಈ ಕುರಿತು ಮಾತನಾಡಿದ ಮಹಿಷಾ ದಸರಾ ಆಚರಣ ಸಮಿತಿ ಅಧ್ಯಕ್ಷ ಪುರುಷೋತ್ತಮ್ , ನಾವು ಮಹಿಷ ದಸರಾ ಆಚರಣೆ ಮಾಡೇ ಮಾಡುತ್ತೇವೆ ಎಂದಿದ್ದರು.












Click it and Unblock the Notifications