Siddaramaiah: ಸಿದ್ದರಾಮಯ್ಯ ಮೈಸೂರು ವಾಸ್ತವ್ಯದ ರಹಸ್ಯ ಬಯಲು!
ಮೈಸೂರು, ಆಗಸ್ಟ್ 07: ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ, ರಾಜ್ಯಪಾಲರ ನೋಟಿಸ್ ಸೇರಿದಂತೆ ವಿವಿಧ ರಾಜಕೀಯ ಬೆಳವಣಿಗೆ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಪೊಲೀಸ್ ಎಸ್ಕಾರ್ಟ್ ಬಿಟ್ಟು ನಗರದಲ್ಲಿ ಖಾಸಗಿ ಕಾರಿನಲ್ಲಿ ಮಂಗಳವಾರ ಸಂಚಾರ ನಡೆಸಿ ಕುತೂಹಲವನ್ನು ಮೂಡಿಸಿದ್ದಾರೆ. ಈಗ ಅವರ ಮೈಸೂರು ವಾಸ್ತವ್ಯದ ರಹಸ್ಯ ಬಯಲಾಗಿದೆ.
ಕರ್ನಾಟಕದ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮುಡಾ ಹಗರಣದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ 'ಮೈಸೂರು ಚಲೋ' ಪಾದಯಾತ್ರೆ 5ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ಮಂಡ್ಯ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಯುತ್ತಿದೆ. ಮಂಡ್ಯ ಸಂಸದ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸಹ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಬುಧವಾರವೂ ಸಿದ್ದರಾಮಯ್ಯ ಮೈಸೂರಿನಲ್ಲಿದ್ದಾರೆ. ಆಗಸ್ಟ್ 9ರಂದು ಕಾಂಗ್ರೆಸ್ ಪಕ್ಷದ ಬೃಹತ್ ಜನಾಂದೋಲನ ಕಾರ್ಯಕ್ರಮ ನಡೆಯಲಿರುವ ಮಹರಾಜ ಕಾಲೇಜು ಮೈದಾನಕ್ಕೆ ಅವರು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿ, ಸಲಹೆ ಸೂಚನೆಗಳನ್ನು ನೀಡಿದರು. ಸಚಿವ ಎಚ್. ಸಿ. ಮಹದೇವಪ್ಪ, ಕೆ. ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹಾಗೂ ಸ್ಥಳೀಯ ಮುಖಂಡರ ಜೊತೆ ಚರ್ಚೆ ನಡೆಸಿದರು.
ಸಿದ್ದರಾಮಯ್ಯ ಮೈಸೂರು ವಾಸ್ತವ್ಯ: ಬಿಜೆಪಿ ಮತ್ತು ಜೆಡಿಎಸ್ 'ಮೈಸೂರು ಚಲೋ' ಪಾದಯಾತ್ರೆ ಆಗಸ್ಟ್ 9ರಂದು ಶ್ರೀರಂಗಪಟ್ಟಣ ತಲುಪಲಿದೆ. ಮೈಸೂರಿನಲ್ಲಿ ಆಗಸ್ಟ್ 10ರ ಶನಿವಾರ ಬೃಹತ್ ಸಮಾವೇಶ ನಡೆಯಲಿದೆ. ಈ ಮೂಲಕ ಮುಡಾ ಹಗರಣದ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಲಿವೆ.
ಈ ಸಮಾವೇಶಕ್ಕೆ ಮೊದಲೇ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಜನಾಂದೋಲನ ಕಾರ್ಯಕ್ರಮವಿದೆ. ಇದರ ಸಿದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಈ ಸಮಾವೇಶ ಅಚ್ಚುಕಟ್ಟಾಗಿ ನಡೆಯಬೇಕು, ಪ್ರತಿಪಕ್ಷಗಳಿಗೆ ಸರಿಯಾದ ತಿರುಗೇಟು ನೀಡುವಂತೆ ಸಮಾವೇಶ ಇರಬೇಕು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಖುದ್ದು ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಸಮಾವೇಶಕ್ಕೆ ಸುಮಾರು 2 ಲಕ್ಷ ಜನರನ್ನು ಸೇರಿಸಬೇಕು ಎಂಬುದು ಪಕ್ಷದ ಗುರಿಯಾಗಿದೆ. ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿಯೇ ಸಮಾವೇಶ ಇರುವ ಕಾರಣಕ್ಕೆ ಅದನ್ನು ಯಶಸ್ವಿಗೊಳಿಸುವುದು ಅತ್ಯಂತ ಅಗತ್ಯವಾಗಿದೆ. ಶಾಸಕರಿಗೆ, ಸ್ಥಳೀಯ ನಾಯಕರಿಗೆ ಹೆಚ್ಚಿನ ಜನರನ್ನು ಸೇರಿಸಲು ಈಗಾಗಲೇ ಸೂಚನೆ ನೀಡಲಾಗಿದೆ.
6 ಜಿಲ್ಲೆಗಳಿಂದ ಪ್ರತಿ ಹಳ್ಳಿಯಿಂದ ತಲಾ 2 ಬಸ್‌ಗಳಲ್ಲಿ ಜನರು ಮೈಸೂರಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಇದೆ. ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ, ರಾಮನಗರ ಜಿಲ್ಲೆಗಳಿಂದ ಹೆಚ್ಚಿನ ಜನರನ್ನು ಕರೆಸಲಾಗುತ್ತದೆ. ಈಗಾಗಲೇ ಇದಕ್ಕಾಗಿ ಸರ್ಕಾರಿ, ಖಾಸಗಿ ಬಸ್‌ಗಳನ್ನು ಬಾಡಿಗೆಗೆ ಪಡೆಯಲು ಯೋಜನೆ ರೂಪಿಸಲಾಗಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಹಾಸನ, ಚಾಮರಾಜನಗರದಲ್ಲಿ ಗೆಲುವು ಸಾಧಿಸಿದೆ. ಈಗ ನಡೆಯುತ್ತಿರುವ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿ, ಶಕ್ತಿ ಪ್ರದರ್ಶನ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದು, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಜಿಲ್ಲಾ ನಾಯಕರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.
ಮೈಸೂರಿನಲ್ಲಿ ಬುಧವಾರ ಮಾತನಾಡಿದ ಸಿದ್ದರಾಮಯ್ಯ, "ಮುಡಾ ಅಕ್ರಮವಾಗಿ ನಮ್ಮ ಜಮೀನು ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬದಲಿ ನಿವೇಶನ ಕೋರಿ 2014ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನನ್ನ ಪತ್ನಿ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ನಾನು ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ" ಎಂದರು.
"ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ನನ್ನ ಮೇಲೆ ಆಪಾದನೆಗಳನ್ನು ಮಾಡುತ್ತಿವೆ. ಆಪರೇಶನ್ ಕಮಲ ನಡೆಸಲು ಪ್ರಯತ್ನಿಸಿದರೂ, ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಾಗದ ಕಾರಣ ಇದನ್ನು ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿ, ಬಡವರ ಪರವಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ" ಎಂದು ಆರೋಪಿಸಿದರು.
"ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದರು. ಮೊದಲ ದಿನದಿಂದಲೂ ಗ್ಯಾರಂಟಿ ಯೋಜನೆ ವಿರುದ್ಧವಾಗಿ ಅವರು ಮಾತನಾಡುತ್ತಿದ್ದಾರೆ. ಒಂದು ವೇಳೆ ಗ್ಯಾರಂಟಿ ಯೋಜನೆ ಆರಂಭಿಸಿದರೂ, ಅದನ್ನು ನಿಲ್ಲಿಸಿ ಬಿಡುತ್ತಾರೆ ಎಂದಿದ್ದರು. ಆದರೆ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ಅವರು ಹತಾಶರಾಗಿದ್ದಾರೆ" ಎಂದು ಟೀಕಿಸಿದರು.












Click it and Unblock the Notifications