ಹುಣಸೂರು ಬಳಿ ಜೀಪಿಗೆ ಬಸ್ ಡಿಕ್ಕಿ: ನಾಲ್ವರ ದುರ್ಮರಣ
ಮೈಸೂರು, ಜನವರಿ 02: ಹುಣಸೂರಿನ ಅಯ್ಯಪ್ಪಸ್ವಾಮಿ ಬೆಟ್ಟದ ಬಳಿ ಸಾರಿಗೆ ಬಸ್ ಹಾಗೂ ಜೀಪ್ ನಡುವೆ ಸೋಮವಾರ ಭೀಕರ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ನಾಲ್ಕು ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ನಾಲ್ಕು ಮಂದಿಗೆ ತೀವ್ರ ಪೆಟ್ಟು ಬಿದ್ದಿದ್ದುಘಿ, ಮೃತಪಟ್ಟ ಎಲ್ಲರೂ ಎಚ್.ಡಿ.ಕೋಟೆ ತಾಲೂಕಿನ ದಮ್ಮನ ಕಟ್ಟೆ ಬಾಗದ ವಿವಿಧ ಗ್ರಾಮದವರು ಎನ್ನಲಾಗಿದೆ. ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಬಳಿಯ ಜೀಯಾರ ಕಾಲನಿಯ ರಾಜೇಶ್(35), ಲೋಕೇಶ್(38), ಸೋಮೇಶ್(40) ಹಾಗೂ ಜೀಪ್ ಚಾಲಕ ದಮ್ಮನಕಟ್ಟೆಯ ಮನು(24) ಮೃತಪಟ್ಟವರು.

ತೀವ್ರ ಗಾಯಗೊಂಡಿರುವ ಹೊಸಮಾಳದ ನಿಂಗರಾಜ, ಜಿಯಾರ ಕಾಲನಿಯ ರವಿ, ಕರಿಯ ಉ.ಚೆಲುವರಾಜ, ಸಣ್ಣಸ್ವಾಮಿ ಹಾಗೂ ಗೋಪಾಲಯ್ಯ ಅವರಿಗೆ ಹುಣಸೂರಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಗಿಲು ಮುಟ್ಟಿದ ಆಕ್ರಂದನ:
ಮೃತರ ಮೃತದೇಹಗಳನ್ನು ಆಸ್ಪತ್ರೆ ಬಳಿಯ ಶವಾಗಾರದಲ್ಲಿಡಲಾಗಿತ್ತು. ಕೋಟೆಯಿಂದ ನೋಡಲು ಬಂದ ಕುಟುಂಬದವರು, ಸಂಬಂಧಿಕರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು. ಶವಾಗಾರದ ಬಳಿ ನೂರಾರು ಮಂದಿ ಜಮಾಯಿಸಿದ್ದರು.
ಘಟನೆ ಹೇಗಾಯಿತು?:
ಶುಂಠಿ ಜಮೀನಿನಲ್ಲಿ ಕೂಲಿ ಕೆಲಸ ಮಾಡಲು ಜೀಪಿನಲ್ಲಿ 9 ಕಾರ್ಮಿಕರು ಹುಣಸೂರು ಮಾರ್ಗವಾಗಿ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದರು. ಈ ವೇಳೆ ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ಗೆ ಡಿಕ್ಕಿಯಾಗಿದೆ. ಸುಮಾರು 76 ಮೀಟರ್ ದೂರಕ್ಕೆ ಜೀಪನ್ನು ಎಳೆದು ತಂದ ಪರಿಣಾಮ ಜೀಪಿನೊಳಗಿದ್ದ ಕಾರ್ಮಿಕರು ಹೊರಕ್ಕೆ ಬಿದ್ದು ನಾಲ್ವರು ಸಾವಿಗೀಡಾದರು. ಜೀಪ್ ಪಲ್ಟಿಯಾಗಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ಸ್ಥಳಕ್ಕೆ ಎಸ್‌ಪಿ ಸೀಮಾಲಾಟ್ಕರ್, ಅಡಿಷನಲ್ ಎಸ್.ಪಿ.ಡಾ.ನಂದಿನಿ, ಡಿವೈಎಸ್‌ಪಿ ಗೋಪಾಲಕೃಷ್ಣ ಹಾಗೂ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಮತ್ತು ಡಿಪೋ ಮ್ಯಾನೇಜರ್ ಸುಬ್ರಮಣ್ಯ ಭೇಟಿ ನೀಡಿ ಪರಿಶೀಲಿಸಿದರು. ಮೃತರ ಕುಟುಂಬಕ್ಕೆ ಸಾರಿಗೆ ಸಂಸ್ಥೆ ವತಿಯಿಂದ ತಲಾ 25 ಸಾವಿರ ರೂ. ಪರಿಹಾರವನ್ನು ಡಿಸಿ ಶ್ರೀನಿವಾಸ್ ವಿತರಿಸಿದರು.












Click it and Unblock the Notifications