ಕಬಿನಿ ಹಿನ್ನೀರಿನ ಭೀಮನಕೊಲ್ಲಿಯಲ್ಲಿ ಜಾತ್ರಾ ಸಂಭ್ರಮ: ಏನಿದರ ವಿಶೇಷತೆ?
ಮೈಸೂರು, ಫೆಬ್ರವರಿ 11: ಪ್ರತಿ ವರ್ಷದಂತೆ ಈ ಬಾರಿಯೂ ಹೆಚ್.ಡಿ.ಕೋಟೆ ತಾಲೂಕಿನ ಪ್ರಸಿದ್ಧ ಭೀಮನಕೊಲ್ಲಿ ಶ್ರೀ ಮಹದೇಶ್ವರಸ್ವಾಮಿಯ ಜಾತ್ರೆ ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಯುವ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ಮಹಾರಥೋತ್ಸವವು ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಕಬಿನಿ ಹಿನ್ನೀರಿನಲ್ಲಿರುವ ಈ ಕ್ಷೇತ್ರದ ಜಾತ್ರೆ ತನ್ನದೇ ಆದ ವಿಶೇಷತೆ ಹೊಂದಿದ್ದು ಜಾತ್ರೆಗೆ ಭಕ್ತಸಾಗರವೇ ಹರಿದು ಬರುವುದು ಮಾಮೂಲಿಯಾಗಿದೆ.
ಸೋಮವಾರದಿಂದ ಆರಂಭಗೊಂಡ ಭೀಮನಕೊಲ್ಲಿ ಮಹದೇಶ್ವರ ಜಾತ್ರೆಯಲ್ಲಿ ಹಲವು ರೀತಿಯ ಕಾರ್ಯಕ್ರಮಗಳು ನಡೆಯುತ್ತಿದ್ದು ಅದರಂತೆ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಸಹಸ್ರಬಿಲ್ವಾರ್ಚನೆ, 9 ಗಂಟೆಗೆ ಮಹಾಮಂಗಳಾರತಿ ನಂತರ 10ಗಂಟೆಗೆ ಹುಲಿವಾಹನದಲ್ಲಿ ಪುಷ್ಪಗಳಿಂದ ಅಲಂಕರಿಸಿದ್ದ ಉತ್ಸವ ಮೂರ್ತಿಯನ್ನು ಮಂಗಳವಾಧ್ಯ ಮತ್ತು ಬಸವರಾಜು ತಂಡದ ವೀರಗಾಸೆ ಕುಣಿತದೊಂದಿಗೆ ದೇವಸ್ಥಾನದ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಮೂರು ದಿನಗಳ ಜಾತ್ರಾ ಮಹೋತ್ಸವವು ಫೆ.10 ಸೋಮವಾರ ಆರಂಭವಾಗಿದ್ದು ಅಂದು ಬೆಳಿಗ್ಗೆ 6ಗಂಟೆಗೆ ಹೋಮ, ಮಹಾರುದ್ರಾಭಿಷೇಕ, 9ಗಂಟೆಗೆ ಮಹಾ ಮಂಗಳಾರತಿ, ರಾತ್ರಿ 12 ಗಂಟೆಗೆ ಹಾಲರವಿ ಸೇವೆ, ದೇವರ ಮೆರವಣಿಗೆ, ಕೊಂಡೊತ್ಸವ ನಡೆಯಿತು. ಫೆ.11ರಂದು ಮಂಗಳವಾರ ಸಹಸ್ರ ಬಿಲ್ವಾರ್ಚನೆ, 9ಗಂಟೆಗೆ ಮಹಾ ಮಂಗಳಾರತಿ, ರಾತ್ರಿ12ಗಂಟೆಗೆ ಆನೆಮಹೋತ್ಸವ ನಡೆಯಲಿದೆ.
ಕಬಿನಿ ಹಿನ್ನೀರಿನ ಸುಂದರ ಕ್ಷೇತ್ರ ಭೀಮನಕೊಲ್ಲಿ
ಜಾತ್ರೆಯ ಮೂರನೇ ಮತ್ತು ಅಂತಿಮ ದಿನವಾದ ಫೆ.12ರಂದು ಬೆಳಿಗ್ಗೆ 6ಗಂಟೆಗೆ ಸಹಸ್ರ ಬಿಲ್ವಾರ್ಚನೆ, ಇತರೆ ಪೂಜಾ ಕಾರ್ಯಕ್ರಮಗಳು, ಬೆಳಿಗ್ಗೆ 9ಗಂಟೆಗೆ ಮಹಾಮಂಗಳಾರತಿ, ಸಂಜೆ 6ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ. ರಾತ್ರಿ 12ರ ನಂತರ ತೆಪ್ಪೋತ್ಸವ ನಡೆಯಲಿದೆ. ದೇವಸ್ಥಾನದ ಮೂರು ಭಾಗಗಳಲ್ಲಿ ಕಬಿನಿ ಹಿನ್ನೀರು ಆವರಿಸಿದ್ದು ದ್ವೀಪದ ನಡುವೆ ದೇವಸ್ಥಾನವಿದ್ದು ದೇವಸ್ಥಾನವನ್ನು ಹಸಿರು ತಳಿರು ತೋರಣ, ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿದೆ.
ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕೆ ರಾಜ್ಯ ಸಾರಿಗೆ ಸಂಸ್ಥೆ ವತಿಯಿಂದ ಹೆಚ್ಚುವರಿ ಬಸ್ ಸಂಪರ್ಕವನ್ನು ಹೆಚ್.ಡಿ.ಕೋಟೆ, ಸರಗೂರು ಮತ್ತು ಮೈಸೂರು ನಗರದಿಂದ ಕಲ್ಪಿಸಲಾಗಿದೆ. ಕ್ಷೇತ್ರದ ಕಬಿನಿ ಹಿನ್ನೀರಿನ ಮತ್ತೊಂದು ಬದಿಯಲ್ಲಿ ಇರುವ ಕಾರಾಪುರ, ಎನ್. ಬೆಳತ್ತೂರು, ಮಗ್ಗೆ, ಮಳಲಿ, ಕೆ.ಆರ್.ಪುರ ಮುಂತಾದ ಗ್ರಾಮಗಳಿಂದ ಜನರು, ಕ್ಷೇತ್ರಕ್ಕೆ ಬರಬೇಕಾದರೆ ಕಬಿನಿ ಹಿನ್ನೀರಿನ ಮೂಲಕ ಬರುವುದಕ್ಕೆ.

ಜನತೆಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಕಬಿನಿ ಹಿನ್ನೀರಿನ ಮೂಲಕ ಲೋಕೋಪಯೋಗಿ ಒಳನಾಡು ಜಲಸಾರಿಗೆ ಇಲಾಖೆಯಿಂದ ದೇವಸ್ಥಾನಕ್ಕೆ ಯಾಂತ್ರೀಕೃತ ಬೋಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೋಟ್ ಸಂಚಾರ ಬೆಳಗಿನ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮಾತ್ರ ಇರಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ತೆಪ್ಪೋತ್ಸವ, ದನಗಳ ಪ್ರದರ್ಶನ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಆಗಮನ
ಜಾತ್ರಾ ಮಹೋತ್ಸವದ ದಿನಗಳಲ್ಲಿ ಆಗಮಿಸುವ ಸಾವಿರಾರು ಭಕ್ತಾಧಿಗಳಿಗೆ ತೊಂದರೆಯಾಗದಂತೆ ಮೂರು ದಿನಗಳ ಕಾಲ ಅನ್ನಸಂತರ್ಪಣೆ ನಡೆಸಲು ವಿಶೇಷ ಶಾಮಿಯಾನ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ವಿವಿಧ ಭಾಗಗಳಿಂದ 10 ರಿಂದ 15 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ನೀರೀಕ್ಷೆಯಿದ್ದು, ಎಚ್ ಡಿ ಕೋಟೆ ಮತ್ತು ಸರಗೂರು ತಾಲೂಕಿನ ವಿವಿಧ ಗ್ರಾಮಗಳಿಂದ ಬರುವ ಭಕ್ತರಿಗೆ ಬಸ್ ವ್ಯವಸ್ಥೆ ಹಾಗೂ ದೇವರ ದರ್ಶನಕ್ಕೆ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ.
ರಥೋತ್ಸವದ ವೇಳೆ ಭಕ್ತರಲ್ಲದೆ, ಭೀಮನಕೊಲ್ಲಿ ಮಹದೇಶ್ವರಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಪಿ.ಎಸ್.ಮೂರ್ತಿ, ಉಪಾಧ್ಯಕ್ಷ ಗುರುಮಲ್ಲಪ್ಪ, ಕಾರ್ಯದರ್ಶಿ ಎಂ.ಎನ್.ಜಗದೀಶ್, ಸದಸ್ಯರಾದ ಸುಬ್ಬಣ್ಣ, ಜೆ.ಪಿ.ಶಿವರಾಜು, ಮಳಲಿ ಗುರುಮೂರ್ತಿ, ದಯಾನಂದ, ಬಸವರಾಜು, ಬಿ.ಟಿ.ನರಸಿಂಹಮೂರ್ತಿ, ನಂಜಪ್ಪ, ಎಂ.ಎನ್.ಭೀಮರಾಜು, ಮಲ್ಲಿಕಾರ್ಜುನ್, ಗುರುಲಿಂಗಪ್ಪ ದೊಡ್ಡಯ್ಯ ಸೇರಿದಂತೆ ಹಲವು ಮುಖಂಡರು ಇದ್ದರು.












Click it and Unblock the Notifications