ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಯು ಕೊರೊನಾಗಿಂತಲೂ ಅಪಾಯಕಾರಿ!
ಮೈಸೂರು, ಮಾರ್ಚ್ 19: ಕರ್ನಾಟಕದ ಶಾಲಾ ಪಠ್ಯ ಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ನಿರ್ಧಾರವು ಕೊರೊನಾವೈರಸ್ ಮಹಾಮಾರಿಗಿಂತಲೂ ಮಾರಕ ಎಂದು ಶಾಸಕ ತನ್ವೀರ್ ಸೇಠ್ ಕಿಡಿ ಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ನಿರ್ಧಾರಗಳಿಂದ ಮಕ್ಕಳು ಶೈಕ್ಷಣಿಕವಾಗಿ ಕುಂಠಿತರಾಗುತ್ತಾರೆ. ಚುನಾವಣೆ ವೇಳೆ ರಾಜಕಾರಣ ಮಾಡುವುದು ಸರಿ. ಆದರೆ, ಅಧಿಕಾರಕ್ಕೆ ಬಂದ ಮೇಲೆ ಜಾತ್ಯಾತೀತವಾಗಿ ನಡೆದುಕೊಳ್ಳುಬೇಕು ಎಂದರು.
ಸರ್ಕಾರಗಳು ಶಿಕ್ಷಣವನ್ನು ಬಿಟ್ಟು ಅನ್ಯ ವಿಚಾರಗಳ ಬಗ್ಗೆ ಗಮನಹರಿಸಬಾರದು. ಈಗಾಗಲೇ ಕೊರೊನಾದಿಂದ ಎರಡು ವರ್ಷ ಮಕ್ಕಳಿಗೆ ಶಿಕ್ಷಣ ಸಿಕ್ಕಿಲ್ಲ. ಶಾಲೆಯಲ್ಲಿ ಸಮಾನತೆ ಕಾಪಾಡಿಕೊಳ್ಳಬೇಕು. ನ್ಯಾಯಾಲಯದ ತೀರ್ಪು ಸಹ ಸ್ಪಷ್ಟವಾಗಿ ಇದನ್ನೇ ಹೇಳಿದೆ.
ಸರ್ಕಾರ ಸಹ ಮತಾಂತರ ಕಾಯಿದೆಯಲ್ಲಿ ಬಲವಂತದ ಮತಾಂತರ ಅಪರಾಧ ಎಂದು ಹೇಳಿದೆ. ಆದರೆ ಇದೀಗ ಶಿಕ್ಷಣದಲ್ಲಿ ಧರ್ಮದ ವಿಚಾರ ಅಳವಡಿಸುವ ಮೂಲಕ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದರಿಂದ ಏನಾಗುತ್ತದೆ, ಏನಾಗುವುದಿಲ್ಲ ಎಂಬುದು ಪ್ರಶ್ನೆ ಅಲ್ಲ. ಇಲ್ಲಿ ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಇದು ಬೇಕಾಗಲ್ಲ ಎಂದು ತನ್ವೀರ್ ಸೇಠ್ ಹೇಳಿದ್ದಾರೆ.

ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿಗಳ ಬಗ್ಗೆ ಚಿಂತಿಸಲಿ:
"ರಾಜ್ಯದಲ್ಲಿ ಹಿಜಾಬ್ ವಿವಾದ ವಿಚಾರವಾಗಿ ಪರೀಕ್ಷೆಯಿಂದ ಹಲವು ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ವೈಯಕ್ತಿಕ ಕಾರಣಗಳಿಗೆ ಪರೀಕ್ಷೆ ತಪ್ಪಿಸಿಕೊಂಡರೆ ಪರೀಕ್ಷೆ ಕೊಡಲು ಸಾಧ್ಯವಿಲ್ಲ. ಆದರೆ ಈ ವಿಚಾರವೇ ಬೇರೆ. ಹೀಗಾಗಿ ಸರ್ಕಾರ ಇದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಹಿಜಾಬ್ ಬೇಡಿಕೆಗಾಗಿ ಎಲ್ಲೂ ಪ್ರತಿಭಟನೆ ಮಾಡುತ್ತಿಲ್ಲ. ಸ್ವಯಂ ಪ್ರೇರಿತರಾಗಿ ಹಲವು ಕಡೆ ಬಂದ್ ಮಾಡಲಾಗಿತ್ತು. ಅದು ಯಶಸ್ವಿಯೂ ಆಗಿದೆ ಹಾಗೂ ಸರ್ಕಾರದ ಗಮನ ಸೆಳೆದಿದೆ. ಗಾಂಧಿ ತತ್ವದಡಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ," ಎಂದು ತನ್ವೀರ್ ಸೇಠ್ ಹೇಳಿದ್ದಾರೆ.
ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವ ಸುಳಿವು ನೀಡಿದ ಸಿಎಂ:
ಕರ್ನಾಟಕದ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ. ಶನಿವಾರ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಮಾತನಾಡಿದ ಸಿಎಂ, ಮಕ್ಕಳಲ್ಲಿ ನೈತಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ನೀಡುವುದೇ ಸರ್ಕಾರದ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು. ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸುವುದಕ್ಕೆ ಸಂಬಂಧಿಸಿದಂತೆ ಸಚಿವರು ಪ್ರಸ್ತಾಪ ಇಟ್ಟಿದ್ದಾರೆ. ಗುಜರಾತಿನಲ್ಲಿ ಈಗಾಗಲೇ ಈ ಕುರಿತು ಚರ್ಚೆಯಾಗಿದ್ದು, ಭಗವದ್ಗೀತೆಯನ್ನು ಸೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದಾರೆ. ಅದೇ ರೀತಿ ನಮ್ಮಲ್ಲಿಯೂ ಚರ್ಚೆ ನಡೆಸಲಾಗುತ್ತಿದೆ. ತದನಂತರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.












Click it and Unblock the Notifications