ಮೈಸೂರು ರೈಲು ವಿಭಾಗಕ್ಕೆ 23 ಟಿಕೆಟ್ ಯಂತ್ರ : ಪ್ರತಾಪ್ ಸಿಂಹ
ಮೈಸೂರು, ಡಿ.26: ಮೈಸೂರು-ವಾರಣಾಸಿ-ಮೈಸೂರು ಬೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ಸಿಕ್ಕ ಬೆನ್ನಲ್ಲೇ ಸ್ವಯಂಚಾಲಿತ ಟಿಕೆಟ್ ನೀಡಿಕೆ ಯಂತ್ರ ಕೂಡಾ ಮೈಸೂರು ರೈಲ್ವೇ ನಿಲ್ದಾಣಕ್ಕೆ ಬರಲಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಜನವರಿ 31ರೊಳಗೆ 6 ಸ್ವಯಂಚಾಲಿತ ಟಿಕೆಟ್ ನೀಡಿಕೆ ತಂತ್ರ(ATVMs)ಸ್ಥಾಪಿಸಲಾಗುವುದು. ಇದು ಜನತೆಗೆ ಹೊಸ ವರ್ಷದ ಕೊಡುಗೆಯಾಗಲಿದೆ. ಇನ್ನು 15 ದಿನದೊಳಗೆ ಮೊದಲ ಯಂತ್ರ ಚಾಲನೆಗೊಳ್ಳಲಿದೆ ನಂತರ ಇನ್ನಷ್ಟು ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಮೈಸೂರು ವಿಭಾಗದ ರೈಲ್ವೆ ಮ್ಯಾನೇಜರ್ ರಾಜ್ ಕುಮಾರ್ ಲಾಲ್ ಹೇಳಿದ್ದಾರೆ. [ಮೈಸೂರು-ವಾರಣಾಸಿ-ಮೈಸೂರು ರೈಲು ವೇಳಾಪಟ್ಟಿ]

ಸ್ಮಾರ್ಟ್ ಕಾರ್ಡ್ ಆಧಾರಿತ ಟಿಕೆಟ್: ಸ್ಮಾರ್ಟ್ ಕಾರ್ಡ್ ಆಧಾರಿತ ಟಿಕೆಟ್ ವ್ಯವಸ್ಥೆ ಕಲ್ಪಿಸಲಾಗುವುದು. ಮೈಸೂರು ವಿಭಾಗಕ್ಕೆ ಒಟ್ಟು 23 ಎಟಿವಿಎಂಗಳು ಮಂಜೂರಾಗಿದೆ. ಮೈಸೂರು ವಿಭಾಗದ ದಾವಣಗೆರೆ, ಶಿವಮೊಗ್ಗ, ಅರಸೀಕೆರೆ, ಹಾಸನ, ಬೀರೂರು, ಹರಿಹರ, ಹಾವೇರಿ ಹಾಗೂ ಭದ್ರಾವತಿ ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ಯಂತ್ರಗಳು ಸ್ಥಾಪನೆಯಾಗಲಿದೆ.
ಡಿ.25ರಿಂದ ಮೈಸೂರು ವಾರಣಾಸಿ ರೈಲು ಸೇವೆ ಆರಂಭವಾಗಿದ್ದು, ಡಿ.27ಕ್ಕೆ ವಾರಣಾಸಿ-ಮೈಸೂರು ರೈಲು ಸೇವೆ ಆರಂಭವಾಗಲಿದೆ. ವಾರಣಾಸಿಯಲ್ಲದೆ ಮಂತ್ರಾಲಯ ಹಾಗೂ ಶಿರಡಿಗೆ ತೆರಳುವ ಪ್ರವಾಸಿಗರಿಗೆ ಈ ಹೊಸ ರೈಲು ಅನುಕೂಲಕರವಾಗಿದೆ.
ಆನ್ ಲೈನ್ ನಲ್ಲಿ ರೈಲು ಟಿಕೆಟ್ ಬುಕ್ ಮಾಡಿಸುವವರಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸಲು ಹೊಸ ಇ ಟಿಕೆಟಿಂಗ್ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಇತ್ತೀಚೆಗೆ ಆರಂಭಿಸಿತ್ತು. ಈ ಹೊಸ ವ್ಯವಸ್ಥೆಯಿಂದ ನಕಲಿ ಟಿಕೆಟ್ ಕೊರತೆ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಟಿಕೆಟ್ ಮಾರುತ್ತಿದ್ದ ಏಜೆಂಟರುಗಳಿಗೆ ಕಡಿವಾಣ ಬೀಳಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. [ಪ್ರಯಾಣ ಮತ್ತು ಅನುಸರಿಸಬೇಕಾದ ಕ್ರಮಗಳು]












Click it and Unblock the Notifications