ಸಹಾಯಕ ಪ್ರಾಧ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ: ಮೈಸೂರಿನ ಅತಿಥಿ ಉಪನ್ಯಾಸಕಿ ಸೌಮ್ಯಾ ಬಂಧನ
ಮೈಸೂರು, ಏಪ್ರಿಲ್ 26: ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ್ದ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸಂಬಂಧ ಮೈಸೂರು ಮೂಲದ ಅತಿಥಿ ಉಪನ್ಯಾಸಕಿ ಸೌಮ್ಯ ಎಂಬುವರನ್ನು ಬಂಧಿಸಲಾಗಿದ್ದು, 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಐಎಎಸ್ ಮಾಡಬೇಕೆಂದು ಕನಸು ಕಂಡಿದ್ದ ಪ್ರತಿಭಾವಂತೆ ಸೌಮ್ಯ. ಸಿವಿಲ್ ಸರ್ವಿಸ್ ಮಾಡಬೇಕೆಂಬ ಅದಮ್ಯ ಹಂಬಲ ಇಟ್ಟುಕೊಂಡೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿದ್ದರು. ಕಳೆದ ಬಾರಿ ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪ್ರಿಲಿಮ್ಸ್ ಕ್ಲಿಯರ್ ಕೂಡ ಮಾಡಿದ್ದರು. ಆದರೆ, ಮೇನ್ಸ್‌ನಲ್ಲಿ ಪಾಸಾಗಿರಲಿಲ್ಲ.
ಅಲ್ಲದೆ, ಎರಡು ಮೂರು ಬಾರಿ ಯುಜಿಸಿ ನೆಟ್ ಪರೀಕ್ಷೆ-ಜಿಆರ್‌ಎ ಹಾಗೂ ಕೆ-ಸೆಟ್ ಪರೀಕ್ಷೆಯನ್ನು ಪಾಸಾಗಿದ್ದರು. ಸರಕಾರಿ ಕೆಲಸ ಗಿಟ್ಟಿಸಿಕೊಳ್ಳಲೇಬೇಕೆಂದು ಸದಾ ಓದಿನಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದರು. ತಂದೆ ಆಟೋ ಡ್ರೈವರ್ ಆಗಿದ್ದರೂ ಮಗಳ ಓದಿಗೆ ಪ್ರೋತ್ಸಾಹ ನೀಡುತ್ತಿದ್ದರು.

ಎರಡು ಸೆಮಿಸ್ಟರ್ ಮಟ್ಟಿಗೆ ಮೈಸೂರು ವಿವಿ ಭೂಗೋಳ ಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿ ಆಗಿಯೂ ಕೆಲಸ ನಿರ್ವಹಿಸಿದ್ದ ಸೌಮ್ಯ ಮಿತಭಾಷಿ. ಎಷ್ಟೋ ಬೇಕೋ ಅಷ್ಟು ಮಾತನಾಡುತ್ತಿದ್ದರು. ಸದಾ ಓದಬೇಕೆಂದು ಮನೆಗೆ ಹೋಗುತ್ತಿದ್ದರು. ಇಂತಹ ಹುಡುಗಿ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಬಂಧನವಾಗಿರುವುದು ಅವರ ವಿದ್ಯಾರ್ಥಿಗಳು ಹಾಗೂ ಸ್ನೇಹಿತರಿಗೆ ಅಚ್ಚರಿ ಉಂಟು ಮಾಡಿದೆ.
ಮೈಸೂರಿನ ಸಿದ್ದಾರ್ಥ ನಗರದ ನಿವಾಸಿಯಾದ ಸೌಮ್ಯ, ಮೈಸೂರು ವಿವಿಯಲ್ಲಿ ಭೂಗೋಳಶಾಸ್ತ್ರ ವಿಭಾಗದಲ್ಲಿ ನಾಲ್ಕು ತಿಂಗಳು ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದರು. ಐಸಿಎಸ್‌ಎಸ್‌ಆರ್‌ನಿಂದ ಪೋಸ್ಟಲ್ ಡಾಕ್ಟರೇಟ್ ಫೇಲೋಶಿಪ್ ಬಂದ ನಂತರ ಕೆಲಸ ಬಿಟ್ಟರು. ಈಗ ಪಿಡಿಎ ಆಗಿ ಡಾ.ನಾಗರಾಜ್ ಬಳಿ ಕೆಲಸ ಮಾಡುತ್ತಿದ್ದಾರೆ. 2015ರಲ್ಲಿ ಪಿಎಚ್‌ಡಿ ಪ್ರವೇಶ ಪಡೆದಿದ್ದ ಸೌಮ್ಯ, 2021ರಲ್ಲಿ ಪಿಎಚ್‌ಡಿ ಮುಗಿಸಿದ್ದರು.
ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಅಕ್ರಮದಲ್ಲಿ ಸಿಕ್ಕಿಬಿದ್ದಿರುವ ಮೈಸೂರು ವಿವಿ ಅತಿಥಿ ಉಪನ್ಯಾಸಕಿ ಸೌಮ್ಯ ಮೇಲೆ ಎಫ್ಐಆರ್ ಆದರೆ ಆಕೆ ಮೇಲೆ ತಕ್ಷಣ ಕ್ರಮ ಕೈಗಳ್ಳುತ್ತೇವೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ. ಶಿವಪ್ಪ ಹೇಳಿದರು.
ಈ ಬಗ್ಗೆ ಕಾನೂನು ಸಲಹೆಗಾರರ ಜೊತೆ ಚರ್ಚೆ ಮಾಡಲಾಗಿದೆ. ಕುಲಪತಿಗಳ ನಿರ್ದೇಶನದ ಮೇಲೆ ಕ್ರಮ ಜರುಗಿಸಲಾಗುತ್ತದೆ. ಈ ಪರೀಕ್ಷೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಂಪೂರ್ಣ ಜವಾಬ್ದಾರಿ ಹೊಂದಿತ್ತು. ಇದರಲ್ಲಿ ಮೈಸೂರು ವಿವಿಯ ಪಾತ್ರ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಮೈಸೂರು ವಿವಿಯಲ್ಲಿ 2021ರಲ್ಲಿ ಸೌಮ್ಯಾಗೆ ಪಿಎಚ್‌ಡಿ ಸಿಕ್ಕಿದೆ. ಪರೀಕ್ಷೆ ಎನ್ನುವುದು ಸಂಸ್ಥೆಗೆ ಹೃದಯ ಭಾಗ ಇದ್ದಂತೆ. ನಮ್ಮ ವಿವಿಯು ಯಾವುದೇ ಹಂತದಲ್ಲೂ ಕನಿಷ್ಠ ಇನ್ವಾಲ್‌ಮೆಂಟ್ ಇದ್ದರೂ ಕ್ರಮ ಜರುಗಿಸಲಾಗುತ್ತದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಟ್ಟಾರೆ ಜವಾಬ್ದಾರಿ ತೆಗೆದುಕೊಂಡಿದೆ. ಇದರಲ್ಲಿ ನಮ್ಮ ವಿಶ್ವವಿದ್ಯಾಲಯದ ಯಾವುದೇ ಪಾತ್ರ ಇಲ್ಲ ಎಂದರು.












Click it and Unblock the Notifications