Chamundi Betta: ಆಷಾಢ ಮಾಸಕ್ಕೆ ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗಾಗಿ ಮೈಸೂರು ಪಾಕ್ ತಯಾರಿ
ಮೈಸೂರು ಜುಲೈ 11: ಆಷಾಢ ಮಾಸದ ಶುಕ್ರವಾರದಂದು ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತಿದೆ. ಹೀಗಾಗಿ ಈ ದಿನ ಭಕ್ತ ಸಾಗರವೇ ಚಾಮುಂಡೇಶ್ವರಿ ದರ್ಶನ ಪಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಭಕ್ತರಿಗಾಗಿ ಮೈಸೂರು ಪಾಕ್ ತಯಾರಿಸಲಾಗಿದೆ.
ಹೌದು... ಆಷಾಢ ಮಾಸ ಜುಲೈ ಆರರಿಂದ ಆರಂಭಗೊಂಡಿದೆ. ಈ ಮಾಸದ ಶುಕ್ರವಾರದಂದು ನಡೆಯುವ ವಿಶೇಷ ಪೂಜೆಯನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೆ ಬೆಟ್ಟಕ್ಕೆ ಹರಿದು ಬರಲಿದೆ. ಹೀಗಾಗಿ ಈಗಾಗಲೇ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನ ಸಂಚಾರ ನಿಷೇಧಿಸಲಾಗಿದೆ. ಆಗಸ್ಟ್ ನಾಲ್ಕರವರೆಗೆ ಬೆಟ್ಟಕ್ಕೆ ಖಾಸಗಿ ವಾಹನ ನಿಷೇಧಿಸಲಾಗಿದೆ. ಭಕ್ತರಿಗೆ ಶುಕ್ರವಾರ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ಚಾಮುಂಡೇಶ್ವರಿ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಲಾಗುತ್ತಿದೆ. ಜೊತೆಗೆ ವಿಶೇಷ ಪೂಜೆಗಾಗಿ ಚಾಮುಂಡೇಶ್ವರಿ ಸೇವಾ ಸಮಿತಿ 25 ಸಾವಿರ ಮೈಸೂರು ಪಾಕ್ ಸಿದ್ದಪಡಿಸಿದೆ. ಶುಕ್ರವಾರ ಬೆಳಗ್ಗೆ ಆರು ಗಂಟೆಯಿಂದ ಸಾಯಂಕಾಲ ನಾಲ್ಕು ಗಂಟೆಯವರೆಗೂ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.
ಈ ಮೈಸೂರು ಪಾಕ್ ಅನ್ನು 40 ಬಾಣಸಿಗರು ತಯಾರಿಸುತ್ತಿದ್ದಾರೆ. ಇದಕ್ಕೆ 500 ಕೆಜಿ ಸಕ್ಕರೆ, 30 ಲೀಟರ್ ಎಣ್ಣೆ, 200 ಕೆಜಿ ಕಡಲೆಹಿಟ್ಟು, 100 ಕೆಜಿ ತುಪ್ಪ, 100 ಕೆಜಿ ಬೆಣ್ಣೆ ಕಾಯಿಸಿದ ತುಪ್ಪ, 3 ಕೆಜಿ ಏಲಕ್ಕಿ 2 ಕೆಜಿ ಅಡುಗೆ ಅರಿಶಿನ ಬಳಸಲಾಗಿದೆ.
ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ 2024 ರ ಆಷಾಢ ಮಾಸದ ಶುಕ್ರವಾರಗಳು ಜುಲೈ 12, 19, 26, ರಂದು, ವರ್ದಂತಿಯು ಜುಲೈ 27 ರಂದು ಮತ್ತು ಆಗಸ್ಟ್ 02 ಕಡೆಯ ಆಷಾಢ ಶುಕ್ರವಾರ ಕಾರ್ಯಕ್ರಮಗಳು ಇರಲಿವೆ.

ಈ ಹಿಂದೆ ಆಷಾಢ ಶುಕ್ರವಾರದಂದು ತಾಯಿ ದರ್ಶನ್ ಪಡೆಯಲು ವಿಶೇಷ ಪಾಸ್ ವ್ಯವಸ್ಥೆಗಳಿದ್ದವು. ಈ ಬಾರಿಯ ಎಲ್ಲಾ ಆಆಢ ಶುಕ್ರವಾರದಂದು ಈ ಪಾಸ್ ಅನ್ನು ರದ್ದು ಪಡಿಸಲಾಗಿದೆ. ಆದರೆ ಈಗಿರುವ 50-100 ರೂಪಾಯಿ ಟಿಕೆಟ್ ವ್ಯವಸ್ಥೆ ಇರಲಿದೆ ಎಂದು ಸಚವ ಡಾ. ಮಹದೇವಪ್ಪ ಹೇಳಿದ್ದಾರೆ.
ಎಲ್ಲಾ ಭಕ್ತರು ಸರತಿ ಸಾಲಿನಲ್ಲಿ ಬಂದು ತಾಯಿ ಚಾಮುಂಡಿಯ ದರ್ಶನವನ್ನು ಪಡೆಯಲಿ ಎನ್ನುವ ಕಾರಣಕ್ಕಾಗಿ ವಿಶೇಷ ಪಾಸ್ ವ್ಯವಸ್ಥೆಯನ್ನು ಆಆಢ ಶುಕ್ರವಾರದಂದು ನಿಲ್ಲಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಬೆಟ್ಟಕ್ಕೆ ತೆರಳಲು ಯಾರೂ ಕೂಡ ಖಾಸಗಿ ವಾಹನ ಬಳಸುವಂತಿಲ್ಲ. ಬೆಳಿಗ್ಗೆ ಐದು ಗಂಟೆಯಿಂದ ರಾತ್ರಿ ಎಮಟು ಗಂಟೆ ವರೆಗೂ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಉಚಿತ ಬಸ್ ಮೂಲಕವೇ ಚಾಮುಂಡಿ ಬೆಟ್ಟಕ್ಕೆ ತೆರಳಬೇಕು.
ಲಲಿತ ಮಹಲ್ ಅರಮನೆ ಮೈದಾನದಿಂದ ನಲವತ್ತು ಬಸ್‌ಗಳು ಬೆಟ್ಟಕ್ಕೆ ಸಂಚರಿಸಲಿದೆ. ಆಷಾಢ ಮಾಸದ ಮೊದಲ ಶುಕ್ರವಾರದಂದು ನಡೆಯುವ ವಿಜೃಂಭಣೆಯ ಪೂಜೆಗಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಬಾರಿ, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಫ್ರೀ ಬಸ್ ಇರುವುದರಿಂದ, ಭಾರೀ ಜನಸಂದಣಿ ಇರಬಹುದು ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications