ದಸರಾ ವಿಶೇಷ; ಆಹಾರ ಮೇಳಕ್ಕೆ ಸಿದ್ಧತೆ ಆರಂಭ, ನೀವೂ ಪಾಲ್ಗೊಳ್ಳಿ
ಮೈಸೂರು, ಆಗಸ್ಟ್ 28; ಮೈಸೂರು ದಸರಾದಲ್ಲಿ ಕಲೆ, ಸಂಸ್ಕೃತಿ, ಕ್ರೀಡೆಗಳ ಮಹೋತ್ಸವದ ಜತೆಗೆ ತಿನಿಸು ಪ್ರಿಯರಿಗೆ ಒಂದೇ ಸೂರಿನಡಿ ವಿವಿಧ ಖಾದ್ಯಗಳನ್ನು ನೀಡದಿದ್ದರೆ ಹೇಗೆ?. ನಗರದಲ್ಲಿ ಒಂದಷ್ಟು ಅಡ್ಡಾಡಿದ ಬಳಿಕ ತಮಗೆ ಇಷ್ಟವಾದುದನ್ನು ಸವಿಯದೆ ಹೋದರೆ ದಸರಾ ಸಡಗರ ಪರಿಪೂರ್ಣವಾಗುವುದಿಲ್ಲ. ಹೀಗಾಗಿ ತಿನಿಸು ಪ್ರಿಯರಿಗಾಗಿಯೇ ಆಹಾರ ಮೇಳವನ್ನು ಆಯೋಜಿಸುತ್ತಾ ಬರಲಾಗಿದೆ.
ಮೊದಲು ನಗರದ ಅರಮನೆ ಬಳಿಯ ಕಾಡಾ ಕಚೇರಿ ಬಳಿ ಆಹಾರ ಮೇಳ ನಡೆಸಲಾಗುತ್ತಿತ್ತಾದರೂ ಜಾಗದ ಕೊರತೆಯಿಂದಾಗಿ ಈಗ ಸ್ಕೌಟ್ ಅಂಡ್ ಗೈಡ್ ಮೈದಾನ ಮತ್ತು ಲಲಿತ್ ಮಹಲ್ ಪ್ಯಾಲೆಸ್ ಹೋಟೆಲ್ ಪಕ್ಕದ ಮೂಡಾ ಮೈದಾನದಲ್ಲಿ ಆಯೋಜಿಸಲಾಗುತ್ತದೆ. ಇಲ್ಲಿಗೆ ತೆರಳಿದವರು ತಮಗೆ ಬೇಕಾದ ತಿನಿಸುಗಳನ್ನು ಸವಿದು ಬರಬಹುದಾಗಿದೆ. ಪ್ರತಿವರ್ಷವೂ ಜಿಲ್ಲೆ, ರಾಜ್ಯಗಳ ಬೇರೆ ಬೇರೆ ಬಗೆಯ ತಿನಿಸುಗಳನ್ನು ಸವಿಯಲು ಅವಕಾಶವಿದೆ.
ನಗರದ ಎರಡು ಕಡೆಯಲ್ಲಿ ಆಹಾರ ಮೇಳವನ್ನು ಆಯೋಜಿಸಿರುವುದರಿಂದ ನಗರಕ್ಕೆ ಸುತ್ತು ಹೊಡೆಯುವ ಮತ್ತು ನಗರದ ವಾಸಿಗಳು ತಮಗೆ ಹತ್ತಿರವಿರುವಲ್ಲಿಗೆ ತೆರಳಲು ಅನುಕೂಲ ಮಾಡಿಕೊಟ್ಟಂತಾಗಿದೆ. ಬೆಳಗ್ಗೆಯಿಂದ ರಾತ್ರಿವರೆಗೂ ನಡೆಯುವ ಆಹಾರ ಮೇಳದಲ್ಲಿ ಮಾಂಸಹಾರಿ ಮತ್ತು ಸಸ್ಯಹಾರಕ್ಕೆ ಸಂಬಂಧಿಸಿದಂತೆ ನೂರಾರು ಬಗೆಯ ತಿನಿಸುಗಳು ತಯಾರಾಗುವುದರಿಂದ ಜನ ತಮಗೆ ಇಷ್ಟವಾದುದನ್ನು ತಿಂದು ಖುಷಿ ಪಡಲು ಅವಕಾಶವಿದೆ. ಅತ್ತ ದಸರಾಕ್ಕೆ ಚಾಮುಂಡಿಬೆಟ್ಟದಲ್ಲಿ ವಿದ್ಯುಕ್ತ ಆರಂಭ (ಸೆ.26) ನೀಡುತ್ತಿದ್ದಂತೆಯೇ ಇತ್ತ ಆಹಾರ ಮೇಳವೂ ಆರಂಭವಾಗುತ್ತದೆ.

ಆಹಾರ ಮೇಳದಲ್ಲಿ ಸಿಗುವ ಖಾದ್ಯಗಳು
ಆಹಾರಮೇಳದಲ್ಲಿ ಬೊಂಬು ಬಿರಿಯಾನಿ, ಗೆಡ್ಡೆ ಗೆಣಸು-ಜೇನುತುಪ್ಪ ಜತೆಗೆ ಬಿದಿರಕ್ಕಿ ಪಾಯಸದಂತಹ ಹಲವು ರೀತಿಯ ಆದಿವಾಸಿಗಳ ಸ್ಪೆಷಲ್ ತಿನಿಸುಗಳು ಒಂದೆಡೆಯಿದ್ದರೆ ಮತ್ತೊಂದೆಡೆ ಮೈಸೂರಿನ ಪ್ರಸಿದ್ಧ ಮಾಂಸಾ ಹಾರಿ ಹೋಟೆಲ್‌ಗಳ ಬಿರಿಯಾನಿ, ಸೂಪ್, ಪಲಾವ್ ಹೀಗೆ ವಿವಿಧ ತಿನಿಸುಗಳು ಸಿಗುತ್ತವೆ.
ಇನ್ನು ಸಸ್ಯಹಾರದಲ್ಲಿ ಪ್ರಸಿದ್ಧ ಮೇಲುಕೋಟೆಯ ಪುಳಿಯೋಗರೆ, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಎಣ್ಣೆಗಾಯಿ, ದಾವಣಗೆರೆ ಬೆಣ್ಣೆದೋಸೆ, ಕೊಡಗಿನ ಕಡಂಬಿಟ್ಟು, ದಕ್ಷಿಣ ಕನ್ನಡದ ಪತ್ರೊಡೆ, ಬೊಂಬು ಬಿರಿಯಾನಿ, ಗೆಣಸು, ಜೇನುತುಪ್ಪ, ಬಿದಿರಕ್ಕಿ ಪಾಯಸ, ನಳ್ಳಿ ಸಾರು, ಕಾಡುಸೊಪ್ಪು, ಕರಳೇ ಪಲ್ಯ, ಮುದ್ದೆ ಉಪ್ಸಾರು, ರಾಗಿಮುದ್ದೆ, ಹುರಳಿಕಟ್ಟು ಹೀಗೆ ಹಲವು ಬಗೆಯ ಸವಿರುಚಿಯ ತಿನಿಸುಗಳು ಪ್ರತಿವರ್ಷವೂ ಇದ್ದೇ ಇರುತ್ತದೆ.

ಸೆ.26ರಿಂದ ಅ.3ರವರೆಗೆ ಆಹಾರ ಮೇಳ
ಈ ಬಾರಿಯ ಆಹಾರ ಮೇಳವನ್ನು ಅದ್ಧೂರಿಯಾಗಿ ಆಯೋಜಿಸಲು ಕಾರ್ಯ ಚಟುವಟಿಕೆ ಆರಂಭಿಸಲಾಗಿದ್ದು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಮೈಸೂರು ದಸರಾ ಮಹೋತ್ಸವ ಆಹಾರ ಮೇಳ ಉಪಸಮಿತಿಯು ಸೆ.26ರಿಂದ ಅ.3ರವರೆಗೆ ನಡೆಸಲಿದೆ.
ಮೈಸೂರು ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ, ಲಲಿತ್ ಮಹಲ್ ಪ್ಯಾಲೆಸ್ ಹೋಟೆಲ್ ಪಕ್ಕದ ಮೂಡಾ ಮೈದಾನದಲ್ಲಿ ನಡೆಯಲಿರುವ ಆಹಾರಮೇಳದಲ್ಲಿ ತಮ್ಮ ಖಾದ್ಯಗಳ ಸಾರ್ವಜನಿಕರಿಗೆ ಉಣಬಡಿಸಲು ಬಯಸುವವರಿಂದ ಇದೀಗ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜನಪ್ರಿಯ ಆಹಾರ ಮೇಳವನ್ನು ಎಲ್ಲಾ ವರ್ಗದ ಜನರ ಅಭಿರುಚಿಗಳನ್ನು ಗಮನದಲ್ಲಿರಿಸಿಕೊಂಡು ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಉಣಬಡಿಸಲು ಉದ್ದೇಶಿಸಲಾಗಿದೆ. ಆಹಾರ ಮೇಳದಲ್ಲಿ ದೇಶಿಯ ಮತ್ತು ಖಂಡಾಂತರ ಆಹಾರ ಪದ್ಧತಿಯ ಜೊತೆ ಪ್ರಾದೇಶಿಕ ಮತ್ತು ಹೊರ ರಾಜ್ಯಗಳ ವೈವಿಧ್ಯದ ಉಟೋಪಚಾರಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.

ಸಿರಿಧಾನ್ಯ, ಸಾವಯವ ಹಣ್ಣು ತರಕಾರಿಗೆ ಆದ್ಯತೆ
ಜನರ ಸಮಕಾಲಿನ ಆಹಾರ ಅಭ್ಯಾಸಗಳನ್ನು ಮತ್ತು ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿಕೊಂಡು ಸಹಜ ಮತ್ತು ನೈಸರ್ಗಿಕ ಹಾಗೂ ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧಾನ್ಯಗಳು, ಹಣ್ಣು-ಹಂಪಲು, ತರಕಾರಿ ಕಾಯಿ ಪಲ್ಯಗಳಿಂದ ತಯಾರಿಸಿದ ಅಡುಗೆಗಳು ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳನ್ನು ಆಹಾರ ಮೇಳದಲ್ಲಿ ಉಣಬಡಿಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಸಿರಿಧಾನ್ಯ ಬೆಳೆಗಾರರು, ಸಹಜ ಮತ್ತು ನೈಸರ್ಗಿಕ ಕೃಷಿಕರು, ಸಾವಯವ ಕೃಷಿಕರು ಹಾಗೂ ಸಿರಿಧಾನ್ಯ ಬೆಳೆಗಾರರ ಸಂಘಗಳು ಮತ್ತು ಒಕ್ಕೂಟಗಳು ಆಹಾರ ಮೇಳಗಳಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಹೀಗಾಗಿ ಸಿರಿಧಾನ್ಯ ಅಡುಗೆ ತಯಾರಿಸಲು, ಸಹಜ ಮತ್ತು ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣು ಮತ್ತು ತರಕಾರಿ ಮಾರಾಟಗಾರರಿಗೆ ಎರಡು ಆಹಾರ ಮೇಳಗಳಲ್ಲಿ ಈ ಬಾರಿ ಆದ್ಯತೆ ನೀಡಲಾಗುತ್ತಿದೆ.

ಈ ಬಾರಿ ಹೊರ ರಾಜ್ಯ, ರಾಷ್ಟ್ರದ ಖಾದ್ಯ
ಆಹಾರ ಮೇಳದಲ್ಲಿ ದಕ್ಷಿಣ ಕರ್ನಾಟಕ ಆಹಾರ ಪದ್ಧತಿ, ಉತ್ತರ ಕರ್ನಾಟಕ ಆಹಾರ ಪದ್ಧತಿ, ಟಿಬೆಟಿಯನ್ ಆಹಾರ ಪದ್ಧತಿ, ಹೊರ ರಾಜ್ಯದ ಆಹಾರ ಪದ್ಧತಿಯಡಿಯಲ್ಲಿ ಕಾಶ್ಮೀರಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತ ಆಹಾರ ಪದ್ಧತಿ, ಆಂಧ್ರ ಶೈಲಿ, ಕೇರಳ ಶೈಲಿ, ತಮಿಳುನಾಡು ಶೈಲಿ, ಮರಾಠಿ ಶೈಲಿಯಲ್ಲಿನ ಸಸ್ಯಾಹಾರಿ ಮತ್ತು ಶಾಖಾಹಾರಿ ಆಹಾರ ಪದ್ಧತಿ ಶೈಲಿಯ ಜೊತೆಗೆ ಅಂತರ್ ರಾಷ್ಟ್ರೀಯ ಚೈನೀಸ್ ಆಹಾರ ಪದ್ಧತಿ ಶೈಲಿ, ಇಟಾಲಿಯನ್ ಆಹಾರ ಪದ್ಧತಿ ಶೈಲಿ, ಫ್ರೆಂಚ್ ಆಹಾರ ಪದ್ಧತಿ ಹಾಗೂ ಆಫ್ರಿಕನ್ ಆಹಾರ ಪದ್ಧತಿಯಡಿಯಲ್ಲಿ ಆಹಾರ ತಯಾರಿಸುವ ಅಡುಗೆಗಳು ಮತ್ತು ಸಿರಿಧಾನ್ಯ ಮತ್ತು ಸಹಜ ಹಾಗೂ ಸಾವಯವ ಧಾನ್ಯಗಳು ಮತ್ತು ತರಕಾರಿಗಳಲ್ಲಿ ಅಡುಗೆಗಳನ್ನು ಮಾಡುವ ವ್ಯಕ್ತಿಗಳು, ಗೃಹಿಣಿಯರು, ಹೋಟೆಲ್‌ಗಳು ಹಾಗೂ ಸಂಘ ಸಂಸ್ಥೆಗಳು, ಹೋಟೆಲ್‌ರವರು, ರೆಸ್ಟೊರೆಂಟ್‌ನವರು, ಮತ್ತು ಇತರೆಯವರು ಭಾಗವಹಿಸಲು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಆಹಾರ ಮೇಳದಲ್ಲಿ ಭಾಗವಹಿಸುವವರು ಸಂಪರ್ಕಿಸಿ
ಆಹಾರ ಮೇಳದಲ್ಲಿ ಪಾಲ್ಗೊಳ್ಳಲು ಬಯಸುವವರಿಗೆ ಅರ್ಜಿಗಳನ್ನು ಸೆ.1ರಿಂದ 12ರವರೆಗೆ ನೀಡಲಾಗುವುದು, ಅರ್ಜಿ ಸಲ್ಲಿಸಲು ಕೊನೆಯ ಸೆ.12. ಅರ್ಜಿಗಳನ್ನು ರೂಂ ನಂ.33, 2ನೇ ಮಹಡಿ, ಹೊಸ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ಸಿದ್ದಾರ್ಥನಗರ, ಮೈಸೂರು ಇಲ್ಲಿಂದ ಪಡೆದು ಸಲ್ಲಿಸಬಹುದಾಗಿದೆ.
ಈ ಸಂಬಂಧ ಹೆಚ್ಚಿನ ವಿವರಗಳಿಗಾಗಿ ಕುಮುದಾ ಶರತ್, ಕಾರ್ಯಾಧ್ಯಕ್ಷರು, ಆಹಾರ ಮೇಳ ಉಪಸಮಿತಿ, ದಸರಾ ಮಹೋತ್ಸವ. ರಮಣಿ. ಎಂ. ಕೆ., ಕಾರ್ಯದರ್ಶಿಗಳು, ಆಹಾರ ಮೇಳ ಉಪಸಮಿತಿ, ದಸರಾ ಮಹೋತ್ಸವ. ಸತೀಶ್. ಡಿ., ವ್ಯವಸ್ಥಾಪಕರು ಇವರನ್ನು ಸಂಪರ್ಕಿಸಬಹುದು.
ಒಟ್ಟಾರೆಯಾಗಿ ಈ ಬಾರಿಯ ದಸರಾ ಮೇಳಕ್ಕೆ ಬೇಕಾದ ಸಿದ್ಧತೆಗಳು ಆರಂಭವಾಗಿದ್ದು, ಕಳೆದ ಎರಡು ವರ್ಷಗಳಿಂದ ಆಹಾರ ಮೇಳಕ್ಕೆ ಹೋಗಿಲ್ಲ ಎಂಬ ಜನರ ಕೊರತೆ ಈ ಬಾರಿ ನೀಗುವುದು ಖಚಿತವಾಗಿದೆ.












Click it and Unblock the Notifications