ಆಹಾರ ಅರಸಿ ನಾಡಿಗೆ ಬಂದ ಕಾಡಾನೆಗೆ ವಿದ್ಯುತ್ ಸ್ಪರ್ಶ
ಮೈಸೂರು, ಜನವರಿ 25: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ತೋಟಕ್ಕೆ ಹಾಕಿದ್ದ ವಿದ್ಯುತ್ ತಂತಿಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಹುಣಸೂರು ತಾಲೂಕಿನ ಗೌಡನಕಟ್ಟೆ ಗ್ರಾಮದ ಬಳಿ ನಡೆದಿದೆ.
ಕಾಡಾನೆಯು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ಕಾಡಿನಿಂದ ಬಂದಿದ್ದು, ಶುಕ್ರವಾರ ಬೆಳಗಿನ ಜಾವ ಗೌಡನಕಟ್ಟೆ ಗ್ರಾಮದ ಬಳಿಯ ಸೀಬೆ ತೋಟಕ್ಕೆ ನುಗ್ಗಿದೆ.
ತೋಟದಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ರಾತ್ರಿ ಸೋಲಾರ್ ತಂತಿ ಬೇಲಿಗೆ ನೇರವಾಗಿ ವಿದ್ಯುತ್ ಹರಿಸಿದ್ದು, ಇದನ್ನು ಸ್ಪರ್ಶಿಸಿದ ಆನೆಗೆ ವಿದ್ಯುತ್ ತಗುಲಿದ್ದರ ಪರಿಣಾಮ ಆನೆ ತೀವ್ರ ಅಸ್ವಸ್ಥಗೊಂಡಿದೆ.

ವಿದ್ಯುತ್ ಆಘಾತದಿಂದ ಆನೆ ತೋಟದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಇಲಾಖೆಯ ವೈದ್ಯರು ಆಗಮಿಸಿ ಆನೆಗೆ ಸ್ಥಳದಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ. ಆನೆಯು ಸಂಪೂರ್ಣ ನಿತ್ರಾಣಗೊಂಡಿದೆ. ಎದ್ದು ಓಡಾಡಲು ಪ್ರಯತ್ನಿಸುತ್ತಿದ್ದು ನಿಲ್ಲಲು ಶಕ್ತವಾಗದೇ ಪುನಃ ಕುಸಿದು ಬೀಳುತ್ತಿದೆ.












Click it and Unblock the Notifications