ಮುಡಾದಿಂದ 1 ಸಾವಿರಕ್ಕೂ ಹೆಚ್ಚು ನಿವೇಶನಗಳ ವಂಚನೆ: ಡಿಸಿಗೆ ವರದಿ ನೀಡುವಂತೆ ಸರ್ಕಾರ ಸೂಚನೆ
ಮೈಸೂರು, ನವೆಂಬರ್ 12: ಸರಕಾರ ರದ್ದುಪಡಿಸಿರುವ ಬದಲಿ ನಿವೇಶನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಅಕ್ರಮ ಪ್ರಯತ್ನಗಳು ಮುಡಾದಲ್ಲಿ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ, ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಯು ಮೈಸೂರು ಜಿಲ್ಲಾಧಿಕಾರಿಗೆ ಸೂಚಿಸಿದೆ.
ಮುಖ್ಯವಾಗಿ ಮುಡಾ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವಾಗ ಅದಕ್ಕೆ ಸರಕಾರದ ಅನುಮತಿ ಪಡೆಯಬೇಕು. ಆದರೆ, ಮುಡಾ ಈ ನಿಯಮ ಪಾಲನೆ ಮಾಡಿಲ್ಲ. ಈ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಸರಕಾರ ಮುಡಾಕ್ಕೆ ಇಂಥ ಅಕ್ರಮಗಳ ವಿರುದ್ಧ 2016ರಿಂದಲೇ ವರ್ಷಕ್ಕೆ ಎರಡರಂತೆ ನೋಟಿಸ್ ನೀಡಿದೆ. ಆದರೆ, ಇದನ್ನು ಆಯುಕ್ತರು ಗಂಭೀರವಾಗಿ ಪರಿಗಣಿಸದೇ ಅಕ್ರಮವನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.

ಮೈಸೂರಿನಲ್ಲಿ ವಿವಿಧ ಬಡಾವಣೆ ನಿರ್ಮಿಸಲು ಜಮೀನು ಸ್ವಾಧೀನ ಮಾಡಿಕೊಂಡಿದ್ದ ಮುಡಾ, ರೈತರಿಗೆ ಅಕ್ರಮವಾಗಿ ಬದಲಿ ನಿವೇಶನ ನೀಡಿರುವ ಸಾವಿರಾರು ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಸರಕಾರ 2020ರ ನಂತರ ಬದಲಿ ನಿವೇಶನ ಹೆಸರಿನಲ್ಲಿ ಪಡೆದಿರುವ ಎಲ್ಲಾ ಮುಡಾ ನಿವೇಶನಗಳನ್ನು ರದ್ದುಪಡಿಸಿದೆ.
ಮಾತ್ರವಲ್ಲದೆ ಬದಲಿ ನಿವೇಶನಕ್ಕೆ ಸಂಬಂಧಿಸಿದಂತೆ ಮುಡಾ ಕೈಗೊಂಡಿರುವ ಎಲ್ಲಾ ನಿರ್ಣಯಗಳನ್ನು ರದ್ದುಗೊಳಿಸಿದೆ. 1000ಕ್ಕೂ ಹೆಚ್ಚು ನಿವೇಶನಗಳು ಈಗ ಅನಧಿಕೃತ ಹಾಗೂ ಅಕ್ರಮ ಹಂಚಿಕೆ ಪಟ್ಟಿಗೆ ಸೇರಿಕೊಂಡಿವೆ. ಇದರಿಂದ ಸರಕಾರಕ್ಕೆ ಸುಮಾರು 23,000 ಕೋಟಿ ರೂ. ನಷ್ಟವಾಗಿರುವ ಬಗ್ಗೆ ಮನವರಿಕೆಯಾಗಿದೆ.
ಏನಿದು ಹಗರಣ..?
ಬಡಾವಣೆಗಳನ್ನು ನಿರ್ಮಿಸಲು ರೈತರಿಂದ ಜಮೀನು ಸ್ವಾಧೀನ ಮಾಡಿಕೊಂಡರೆ ರೈತರಿಗೆ ಮುಡಾ ಎಕರೆಗೆ ಕಾಲು ಎಕರೆ ಅಭಿವೃದ್ಧಿಯಾಗಿರುವ ಜಾಗ ನೀಡಬೇಕು. ಈ ನಿವೇಶನವನ್ನು ಅದೇ ಬಡಾವಣೆಯಲ್ಲಿ ನೀಡಬೇಕು. ಇಲ್ಲವೆ ನಂತರ ಅಭಿವೃದ್ಧಿ ಮಾಡುವ ಬಡಾವಣೆಗಳಲ್ಲಿ ನೀಡಬೇಕಾಗುತ್ತದೆ. ಆದರೆ, ಮುಡಾ ನಿರ್ಮಿಸಿರುವ ಬಡಾವಣೆಗಳಲ್ಲಿ ನೂರಾರು ನಿವೇಶಗಳು ಖಾಲಿಯಾಗಿದ್ದರೂ ಅವುಗಳನ್ನು ಒಬ್ಬರಿಗೂ ನೀಡಿಲ್ಲ.
ಬದಲಾಗಿ ನಿವೇಶನಗಳ ಮಾರುಕಟ್ಟೆ ದರ ಹೆಚ್ಚಾಗಿರುವ ವಿಜಯನಗರ, ಆರ್.ಟಿ.ನಗರ, ದಟ್ಟಗಳ್ಳಿ ಬಡಾವಣೆಗಳಲ್ಲಿ ಬದಲಿ ಹೆಸರಿನಲ್ಲಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎನ್ನುವ ಆರೋಪ ಜೋರಾಗಿಯೇ ಕೇಳಿ ಬರುತ್ತಿದೆ.












Click it and Unblock the Notifications