ಭಾರತದಲ್ಲಿರುವ ಎಲ್ಲ ಧರ್ಮದವರ ಡಿಎನ್‌ಎ ಒಂದೇ: ಸುಬ್ರಮಣಿಯನ್ ಸ್ವಾಮಿ
ಮೈಸೂರು, ಆಗಸ್ಟ್, 01: ಹಿಂದೂ ಧರ್ಮ ಅಲ್ಲ ಅದೊಂದು ಜೀವನ ಶೈಲಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರ ಡಿಎನ್‌ಎ ಒಂದೇ. ಕಾರಣ ನಾವು ಮೊದಲು ಭಾರತೀಯರು ಎಂಬ ಭಾವನೆ ನಮ್ಮಲಿದೆ ಎಂದು ಕೇಂದ್ರ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಮೈಸೂರಿನಲ್ಲಿ ತಿಳಿಸಿದರು.
ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ 'ಸಂಸ್ಥಾಪನಾ ದಿನಾಚರಣೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೈಸೂರು ವಿಶ್ವವಿದ್ಯಾಲಯ ದೇಶದಲ್ಲಿ ಮೊದಲ ಬಾರಿಗೆ ಡಿಎನ್‌ಎ ಪರೀಕ್ಷೆ ನಡೆಸಿತು. ಈ ಪರೀಕ್ಷೆಯಲ್ಲಿ ಭಾರತೀಯರೆಲ್ಲರ ಡಿಎನ್‌ಎ ಒಂದೇ ಆಗಿತ್ತು. ಆದರೆ, ಮುಸ್ಲಿಮರು ಅದನ್ನು ಬದಲಾಯಿಸಿಕೊಂಡರು. ಒಮ್ಮೆ ನಾನು ಹೈದರಾಬಾದ್‌ಗೆ ಹೋದಾಗ ಓವೈಸಿ ಅವರಿಗೆ 'ನಂದು ನಿಂದು ಒಂದೇ ಡಿಎನ್‌ಎ ಬೇಕಾದರೆ ಇಲ್ಲಿನ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸೋಣ ಬಾ'ಎಂದಿದ್ದೆ. ಆದರೆ ಓವೈಸಿ ಪರೀಕ್ಷೆಗೆ ಬಾರದೆ ಆ ಲ್ಯಾಬ್ ಹೈದರಾಬಾದ್‌ನಲ್ಲಿ ಎಲ್ಲಿದೆ ಎಂದು ಕೇಳಿದ್ದರು ಎಂದು ಸುಬ್ರಮಣ್ಯನ್ ವ್ಯಂಗ್ಯವಾಡಿದರು.
ಸ್ಟಾಲಿನ್ ಹೆಸರಿನ ಮೂಲ:
ಮೊದಲು ಸಂಸ್ಕೃತವನ್ನು ವಿರೋಧಿಸಿದ್ದು ಬ್ರಿಟೀಷರು, ನಂತರ ಕರುಣಾನಿಧಿ. ಸಂಸ್ಕೃತದಿಂದ ಕೂಡಿದ ಕರುಣಾನಿಧಿ ಎಂದು ಹೆಸರಿಟ್ಟುಕೊಂಡು ಸಂಸ್ಕೃತವನ್ನೇ ವಿರೋಧಿಸಿದರು. ಆದರೆ ಮಗನಿಗೆ ರಷ್ಯಾದ (ಸ್ಟಾಲಿನ್) ಹೆಸರಿಟ್ಟರು. ಇನ್ನು ಅವರ ಪಕ್ಷದ ಚಿಹ್ನೆ ಹೆಸರು ಕೂಡ ಸಂಸ್ಕೃತದ್ದೆ. ತಮಿಳು ಭಾಷೆ ಶೇಕಡಾ 40ರಷ್ಟು ಸಂಸ್ಕೃತದಿಂದಲೇ ಕೂಡಿದೆ ಎಂದು ಹೇಳಿದರು.

ದಲಿತರು ತಮ್ಮನ್ನು ಶೂದ್ರರು ಎಂದುಕೊಳ್ಳಬಾರದು. ಕೇವಲ ಬ್ರಾಹ್ಮಣರಷ್ಟೇ ಪಂಡಿತರು, ಜ್ಞಾನಿಗಳು ಆಗಿರುವುದಿಲ್ಲ. ಉದಾಹರಣೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ದಲಿತರಾದರೂ ಬೌದ್ಧಿಕವಾಗಿ ಉನ್ನತ ಮಟ್ಟದಲ್ಲಿದ್ದರು. ಸಂವಿಧಾನ ರಚಿಸಿದರು, ಹತ್ತಾರು ಪದವಿ ಪಡೆದುಕೊಂಡಿದ್ದರು. ಆದರೆ ಹುಟ್ಟಿನಿಂದ ಬ್ರಾಹ್ಮಣರಾದ ಜವಹಾರಲಾಲ್ ನೆಹರು ಯಾವ ಪರೀಕ್ಷೆಯಲ್ಲಿಯೂ ತೇರ್ಗಡೆ ಹೊಂದಲಿಲ್ಲ. ರಾಜಕೀಯಕ್ಕೆ ಅದು ಬೇಕಾಗಿಯೂ ಇಲ್ಲ ಎಂದು ವ್ಯಂಗ್ಯವಾಡಿದರು.
ವಿದ್ಯಾರ್ಥಿಗಳೊಡನೆ ಸಂವಾದ:
ಬಳಿಕ ವಿದ್ಯಾರ್ಥಿಗಳೊಡನೆ ಸುಬ್ರಮಣಿಯನ್‌ಸ್ವಾಮಿ ಅವರು ಸಂವಾದ ನಡೆಸಿ ಜಿಡಿಪಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಮೊದಲು ಅಮೆರಿಕ, ಚೀನಾ ನಂತರದ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ಭಾರತ ಅಭಿವೃದ್ಧಿ ರಾಷ್ಟ್ರವಾಗಿದ್ದು, ವಿಶ್ವದ ಅನೇಕ ರಾಷ್ಟ್ರಗಳ ಜನ ಇಲ್ಲಿಗೆ ಬರುತ್ತಿದ್ದಾರೆ ಎಂದರು. ನಾವು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಕಷ್ಟದಲ್ಲಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಓದಲು ನೆರವಾಗಬೇಕು. ಶಿಕ್ಷಣಕ್ಕೆ ಆದ್ಯತೆ ಹೆಚ್ಚಾದಾಗ ಮಾತ್ರ ದೇಶ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತಕುಮಾರ್, ಸಂಸ್ಥೆಯ ಪ್ರಾಂಶುಪಾಲ ಪ್ರೊ.ವೈ. ಶ್ರೀಕಾಂತ್ ಸೇರಿದಂತೆ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.












Click it and Unblock the Notifications