ಮೈಸೂರಿನ ಮತ್ತೊಬ್ಬ ಮಹಿಳೆಗೆ ಸಿಕ್ಕಿತು ಕಾಂಗ್ರೆಸ್ ವಕ್ತಾರೆ ಪಟ್ಟ
ಮೈಸೂರು, ಜನವರಿ 3 : ಕಳೆದ ಕೆಲ ದಿನಗಳ ಹಿಂದಷ್ಟೇ ಮೈಸೂರಿನವರೇ ಆದ ಪುಷ್ಪಾ ಅಮರ್ ನಾಥ್ ಗೆ ಕೈ ಪಾಳಯದಲ್ಲಿ ಉನ್ನತ ಸ್ಥಾನ ಸಿಕ್ಕಿತು. ಸದ್ಯ ಇಲ್ಲಿನವರೇ ಆದ ಮತ್ತೊಬ್ಬ ಮಹಿಳೆಗೆ ಈಗ ಐಸಿಸಿ ವಕ್ತಾರೆ ಸ್ಥಾನ ದಕ್ಕಿದೆ. ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಪುತ್ರಿ ಐಶ್ವರ್ಯ ಮಹದೇವ್ ಈ ಹುದ್ದೆಗೆ ನೇಮಕವಾಗಿದ್ದಾರೆ.
ರಾಷ್ಟೀಯ ಕಾಂಗ್ರೆಸ್ ನ ಮಾಧ್ಯಮ ವಕ್ತಾರೆಯಾಗಿ ಮೈಸೂರು ಜಿಲ್ಲೆಯವರೇ ಆಗಿರುವ ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಪುತ್ರಿ ಐಶ್ವರ್ಯ ಮಹದೇವ್ ಆಯ್ಕೆಯಾಗಿದ್ದಾರೆ. ಮಂಚನಹಳ್ಳಿ ಮಹದೇವ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಲಗೈ ಬಂಟರಾಗಿದ್ದರು. ಈ ಮೂಲಕ ಮೈಸೂರು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಜಿಲ್ಲೆಯ ಕಾಂಗ್ರೆಸ್ ನ ಇಬ್ಬರು ಮಹಿಳೆಯರಿಗೆ ಉನ್ನತ ಸ್ಥಾನ ಸಿಕ್ಕಂತಾಗಿದೆ.

ಎಐಸಿಸಿಯ ವಕ್ತಾರರ ತಂಡಕ್ಕೆ ಹೊಸದಾಗಿ ಕರ್ನಾಟಕದಿಂದ ಮಾಧ್ಯಮ ವಕ್ತಾರರನ್ನು ನೇಮಕ ಮಾಡಲಾಗಿದ್ದು, ಈ ಪೈಕಿ ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್ ಹಾಗೂ ಐಶ್ವರ್ಯ ಮಹದೇವ್ ಹೆಸರು ನೂತನವಾಗಿ ಸೇರ್ಪಡೆಯಾಗಿದೆ. ಈ ಕುರಿತು ಕೆಪಿಸಿಸಿಯು ಟ್ವಿಟ್ಟರ್ ಖಾತೆಯ ಮೂಲಕ ಡಾ.ಸಯ್ಯದ್ ನಾಸಿರ್ ಹುಸೇನ್ ಹಾಗೂ ಐಶ್ವರ್ಯ ಮಹದೇವ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಖುದ್ದು ಐಶ್ವರ್ಯ ಮಹದೇವ್ ಸಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದು, ನಿಭಾಯಿಸಿದ ಕೆಲಸವನ್ನು ಸೂಕ್ತವಾಗಿ ಮಾಡುತ್ತೇನೆ ಎಂದು ಹರ್ಷವ್ಯಕ್ತಪಡಿಸಿದ್ದಾರೆ.












Click it and Unblock the Notifications