ಗಂಗೆಯಾಯ್ತು, ಈಗ ಕಾವೇರಿ ಸರದಿ; ನದಿ ತಟದಲ್ಲಿ ಶವ ಸಂಸ್ಕಾರ!
ಮೈಸೂರು, ಜುಲೈ 3 : ಗಂಗಾ ನದಿಯಾಯ್ತು, ಈಗ ಕಾವೇರಿಯ ಸರದಿ. ಹೆಣಗಳನ್ನು ಸಂಗಮ ಕ್ಷೇತ್ರದ ಬಳಿ ಸುಟ್ಟಲ್ಲಿ ಮೋಕ್ಷ ಪ್ರಾಪ್ತಿ ಎಂಬ ಮಾತುಂಟು. ಅದಕ್ಕೆ ಜ್ವಲಂತ ಸಾಕ್ಷಿ , ಕಾವೇರಿಯಲ್ಲಿ ಸುಡುತ್ತಿರುವ ಹೆಣ.
ಮೈಸೂರಿನ ಕಾವೇರಿ ನದಿ ಈಗ ಗಂಗಾ ನದಿಯಾಗಿದೆ. ಗಂಗಾ ನದಿ ತೀರದಲ್ಲಿ ಹೆಣ ಸುಡುವಂತೆ ತಲಕಾಡಿನ ಕಾವೇರಿ ನದಿ ತೀರದಲ್ಲೂ ಹೆಣ ಸುಡುತ್ತಿರುವುದು ಬೆಳಕಿಗೆ ಬಂದಿದೆ.
ವಾರಾಂತ್ಯದಂದು ತಲಕಾಡಿಗೆ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ. ಪ್ರವಾಸಿಗರೇ ತಲಕಾಡಿನ ನದಿ ತೀರದಲ್ಲಿ ಹೆಣ ಸುಡುತ್ತಿರುವುದನ್ನು ಪ್ರವಾಸಿಗರೊಬ್ಬರು ವಿಡಿಯೋ ಮಾಡಿದ್ದಾರೆ. ನಂತರ ಸಾಮಾಜಿಕ ಜಾಲಾತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗಿದೆ. ಜತೆಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಾವೇರಿ ನದಿ ದಡದ ಮೇಲಿರುವ ಪವಿತ್ರ ಯಾತ್ರಾ ಸ್ಥಳ ಹಾಗೂ ಪ್ರವಾಸಿಗರ ತಾಣವಾದ ತಲಕಾಡಿನ ಕಾವೇರಿ ನದಿಯ ಪಕ್ಕದಲ್ಲಿ ಹೆಣಗಳನ್ನು ಸುಡುವ ಮೂಲಕ ಕಾವೇರಿಯನ್ನು ಮಲೀನ ಮಾಡಲಾಗುತ್ತಿದೆ. ಜತೆಗೆ ಇದರಿಂದ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗಿದೆ.
ಟಿ.ನರಸೀಪುರ ತಾಲೂಕಿನ ಪವಿತ್ರ ಯಾತ್ರಾಸ್ಥಳ ತಲಕಾಡು ಕಾವೇರಿ ನದಿಯ ಪಕ್ಕದಲ್ಲೇ ಇದೆ. ಈ ನದಿಯ ಪಕ್ಕದಲ್ಲಿ ಸತ್ತವರನ್ನು ಸುಟ್ಟರೆ ಅಸ್ತಿಗಳು ನದಿಯಲ್ಲಿ ಹರಿದು ಹೋಗಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆ ಇದೆ. ಈ ಕಾರಣದಿಂದ ಇಲ್ಲಿ ಹೆಣಗಳನ್ನು ಸುಡುತ್ತಾರೆ.
ನದಿ ತೀರದಲ್ಲಿ ಹೆಣ ಸುಡುತ್ತಿದ್ದರೂ ತಲಕಾಡು ಪೊಲೀಸರು ಮಾತ್ರ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ.
ಹೆಣ ಸುಡುವವರ ವಿರುದ್ಧ ಅಗತ್ಯ ಕ್ರಮ: ಡಿ.ರಂದೀಪ್
ತಲಕಾಡು ನದಿ ತೀರದಲ್ಲಿ ಶವ ಸುಡುತ್ತಿರುವ ವಿಚಾರ ನನಗೆ ತಿಳಿದಿರಲಿಲ್ಲ. ಈಗ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.
"ಮುಂದೆ ಆ ಸ್ಥಳದಲ್ಲಿ ಹೆಣ ಸುಡಲು ಬಿಡುವುದಿಲ್ಲ. ಆ ಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಹೋಗಲಾಗುವುದು. ಮುಂದೆ ಇಂತಹ ಕೃತ್ಯ ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಈಗಾಗಲೇ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ," ಎಂದು ಹೇಳಿದ್ದಾರೆ.












Click it and Unblock the Notifications