ಆಸ್ಪತ್ರೆಯಿಂದಲೇ ಪುಟ್ಟ ಬಾಲಕಿ ದಿಢೀರ್ ನಾಪತ್ತೆ: ವಾಪಸ್ ಸಿಕ್ಕಿದ್ದೇ ರೋಚಕ
ಮೈಸೂರು, ನವೆಂಬರ್ 07: ತಾಯಿ ಮತ್ತು ಅಜ್ಜಿಯ ಜೊತೆ ಆಸ್ಪತ್ರೆಗೆ ಧಾವಿಸಿದ್ದ ಪುಟ್ಟ ಬಾಲಕಿ ನಾಪತ್ತೆಯಾಗಿದ್ದ ಕೆಲವೇ ಗಂಟೆಗಳಲ್ಲಿ ಸಿಡಿಪಿಓ ಭವ್ಯಶ್ರೀ ಮತ್ತು ಸಿಬ್ಬಂದಿಗಳ ಜಾಗೃತಿಯಿಂದ ಪೋಷಕರ ಕೈ ಸೇರಿ ಪೋಷಕರಲ್ಲಿ ಕಾಡಿದ್ದ ಆತಂಕ ದೂರವಾದ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆ ಹಾಗೂ ಅಧಿಕಾರಿಗಳ ದಿಢೀರ್ ಸ್ಪಂದನೆಯಿಂದ ಪೋಷಕರಿಂದ ದೂರಾಗಿದ್ದ ಮಗು ಸುರಕ್ಷಿತವಾಗಿ ಹೆತ್ತವರ ಕೈ ಸೇರಿದೆ.
ನಂಜನಗೂಡು ನಗರದ ನೀಲಕಂಠ ನಗರ ಬಡಾವಣೆಯ ಯೋಗೇಶ್ ಎಂಬುವರ ಪತ್ನಿ ಸೌಭಾಗ್ಯ ತನ್ನ ತಾಯಿ ಮತ್ತು ನಾಲ್ಕು ವರ್ಷದ ಪುಟ್ಟ ಮಗುವಿನ ಜೊತೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಬಂದಿದ್ದರು. ತನ್ನ ತಾಯಿಯ ಜೊತೆ ಸೌಭಾಗ್ಯ ವೈದ್ಯರ ಬಳಿ ತಪಾಸಣೆಗೆ ತೆರಳಿದ ಸಂದರ್ಭ ಹೊರ ಭಾಗದಲ್ಲಿ ನಿಂತಿದ್ದ ಪುಟ್ಟ ಬಾಲಕಿ ಅಮ್ಮ ಅಜ್ಜಿ ಕಾಣದೇ ತಬ್ಬಿಬ್ಬಾಗಿ ಆಸ್ಪತ್ರೆಯಿಂದ ಹೊರನಡೆದಿದ್ದಾಳೆ.

ತನ್ನ ಅಜ್ಜಿ ಮತ್ತು ತಾಯಿ ನನ್ನನ್ನು ಬಿಟ್ಟು ಹೋಗಿದ್ದಾರೆ ಎಂಬ ಆತಂಕದಲ್ಲಿ ಪುಟ್ಟ ಬಾಲಕಿ ಆಸ್ಪತ್ರೆಯಿಂದ ಸರಿಸುಮಾರು ಒಂದು ಕಿಲೋಮೀಟರ್ ದೂರ ನಡೆದು ಹೋಗಿದ್ದಾಳೆ. ಕೊನೆಗೆ ಹುಲ್ಲಹಳ್ಳಿ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಬಳಿಯ ಅಂಗಡಿ ಮುಂಭಾಗದಲ್ಲಿ ತಾಯಿ ಮತ್ತು ಅಜ್ಜಿಯ ಹುಡುಕಾಟದಲ್ಲಿ ತಲ್ಲಿನನಾಗಿದ್ದಳು.
ನಾಲ್ಕು ವರ್ಷದ ಪುಟ್ಟ ಬಾಲಕಿಯ ಚಲನವಲನವನ್ನು ನೋಡಿದ ಅಂಗಡಿಯ ಮಾಲೀಕರು ನಗರದ ಸಿಡಿಪಿಓ ಭವ್ಯಶ್ರೀ ರವರ ದೂರವಾಣಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ಕೂಡಲೇ ಧಾವಿಸಿದ ಸಿಡಿಪಿಓ ಭವ್ಯಶ್ರೀ ಮತ್ತು ಸಾಂತ್ವನ ಇಲಾಖೆಯ ಸಾವಿತ್ರಿ ನಾಲ್ಕು ವರ್ಷದ ಪುಟ್ಟ ಬಾಲಕಿಯನ್ನು ವಶಕ್ಕೆ ಪಡೆದು ಸರಿ ಸುಮಾರು ಎರಡು ಗಂಟೆಗಳ ಕಾಲ ಮಗುವಿನ ಪೋಷಕರ ಹುಡುಕಾಟ ನಡೆಸಿದ್ದಾರೆ.
ನಂತರ ಮಗು ಬಂದ ದಾರಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಧಾವಿಸಿದಾಗ ಅಜ್ಜಿ ಹಾಗೂ ತಾಯಿ ಮಗುವಿನ ಹುಡುಕಾಟದಲ್ಲಿದ್ದರು. ಬಳಿಕ ಆಸ್ಪತ್ರೆ ಬಳಿ ಹೋಗುತ್ತಿದ್ದಂತೆ ಮಗು ನೇರವಾಗಿ ತನ್ನ ಅಜ್ಜಿಯ ಬಳಿ ತೆರಳಿದೆ. ಪುಟ್ಟ ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದ ಪೋಷಕರು ನಿರಾಳವಾಗಿ ಸಿಡಿಪಿಓ ಮತ್ತು ಸಿಬ್ಬಂದಿಗಳಿಗೆ ಧನ್ಯವಾದ ಹೇಳಿದ್ದಾರೆ. ಒಟ್ಟಾರೆ ಸಿಡಿಪಿಓ ಇಲಾಖೆ ಅಧಿಕಾರಿಗಳ ಜಾಗೃತಿಯಿಂದ ಪುಟ್ಟ ಬಾಲಕಿ ಮರಳಿ ಪೋಷಕರ ಮಡಿಲು ಸೇರುವಂತಾಗಿದೆ.












Click it and Unblock the Notifications