ಮೈಸೂರು: ಅಶೋಕಪುರಂ ನಿಲ್ದಾಣಕ್ಕೆ ಫೆ. 16ರಿಂದ 8 ರೈಲುಗಳು, ಪಟ್ಟಿ
ಮೈಸೂರು, ಫೆಬ್ರವರಿ 11: ಅಭಿವೃದ್ಧಿಗೊಂಡಿರುವ ಮೈಸೂರು ನಗರದ ಅಶೋಕಪುರಂ ರೈಲು ನಿಲ್ದಾಣಕ್ಕೆ 8 ರೈಲುಗಳನ್ನು ಸ್ಥಳಾಂತರ ಮಾಡಲಾಗಿದೆ. ಫೆಬ್ರವರಿ 16ರಿಂದ ಈ ರೈಲುಗಳು ಅಶೋಕಪುರಂನಿಂದ ಹೊರಡಲಿದ್ದು, ಮೈಸೂರು ನಗರ ರೈಲು ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಈ ಸ್ಥಳಾಂತರಕ್ಕೆ ಹಲವು ಜನರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅಶೋಕಪುರಂ ರೈಲು ನಿಲ್ದಾಣಕ್ಕೆ 8 ರೈಲುಗಳ ಸ್ಥಳಾಂತರ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಅವರು ಸಂಸದರಾಗಿದ್ದಾಗಲೇ ಅನುದಾನವನ್ನು ತಂದು ಅಶೋಕಪುರಂ ರೈಲು ನಿಲ್ದಾಣವನ್ನು ಅಭಿವೃದ್ದಿಗೊಳಿಸಿದ್ದರು.

ಫೆಬ್ರವರಿ 15ರಂದು ಸಂಜೆ 5.30ಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅಶೋಕಪುರಂ ರೈಲು ನಿಲ್ದಾಣದಿಂದ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. 8 ರೈಲುಗಳು ಫೆಬ್ರವರಿ 16ರಿಂದ ಅಶೋಕಪುರಂ ನಿಲ್ದಾಣದಿಂದ ಸಂಚಾರ ನಡೆಸಲಿವೆ ಎಂದು ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.
ಫೇಸ್ ಬುಕ್ ಪೋಸ್ಟ್: ಈ ಕುರಿತು ಪ್ರತಾಪ್ ಸಿಂಹ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅರ್ಧ ಭಾಗ, ವಿಶೇಷವಾಗಿ ಜೆ. ಪಿ. ನಗರ, ವಿದ್ಯಾರಣ್ಯಪುರ, ಅಶೋಕಪುರಂ ಇದರ ಸುತ್ತಮುತ್ತಲಿನ ಬಡವಾಣೆಯ ಜನ ರೈಲು ಪ್ರಯಾಣ ಮಾಡಬೇಕು ಅಂದರೆ ಮುಖ್ಯ ರೈಲು ನಿಲ್ದಾಣಕ್ಕೆ ಬರಬೇಕಾಗಿತ್ತು.
ರೈಲ್ವೆ ಟಿಕೆಟ್ ಬೆಲೆಗಿಂತ ಆಟೋ ದರವೇ ಹೆಚ್ಚಾಗುತ್ತಿತ್ತು. ಇದನ್ನು ಮನಗಂಡು ಅಶೋಕಪುರಂ ರೈಲ್ವೆ ಯಾರ್ಡ್ ಅನ್ನು ಅಭಿವೃದ್ಧಿ ಮಾಡಿ ಪ್ಯಾಸೆಂಜರ್ ರೈಲುಗಳನ್ನು ಅಶೋಕಪುರಂನಿಂದಲೇ ಪ್ರಾರಂಭಿಸಬೇಕೆಂಬ ಮಹದಾಸೆಯಿಂದ ಕೇಂದ್ರ ಸರ್ಕಾರದಿಂದ ಅನುದಾನ ತಂದು 4 ವರ್ಷಗಳ ಸತತ ಪ್ರಯತ್ನಗಳ ಮೂಲಕ ಅಶೋಕಪುರಂ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗಿದೆ.
ಅಭಿವೃದ್ಧಿಯ ಬಳಿಕ 3 ಹೆಚ್ಚುವರಿ ಟ್ರ್ಯಾಕ್‌ಗಳು, ಫ್ಲಾಟ್ ಫಾರ್ಮ್‌ಗಳು ಮತ್ತು ಪಾದಾಚಾರಿಗಳ ಮೇಲ್ಸೇತುವೆಗಳನ್ನ ಮಾಡಿಸಿ, ಕಳೆದ ವರ್ಷ ದಿನಾಂಕ 4-03-2024ರ ಮಾರ್ಚ್ 4ರಂದು ರೈಲ್ವೆ ನಿಲ್ದಾಣ ಲೋಕಾರ್ಪಣೆ ಮಾಡಿಸಿದ್ದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಪ್ರಸ್ತುತ ನಮ್ಮ ರಾಜ್ಯದವರೆ ಆದ ವಿ. ಸೋಮಣ್ಣ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದು ಅವರ ಕಾಳಜಿ ಮತ್ತು ಕೃಷ್ಣರಾಜ ಕ್ಷೇತ್ರದ ಶಾಸಕರಾದ ಶ್ರೀ ಶ್ರೀವತ್ಸ ಅವರ ಮನವಿಯಿಂದಾಗಿ 8 ರೈಲುಗಳನ್ನು 16ರಿಂದ ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಸೇವೆಯನ್ನು ಆರಂಭಿಸುತ್ತಿವೆ.
ಸಂಸದನಾಗಿದ್ದಾಗ ನಾನು ಕೈಗೊಂಡ ಕೆಲಸ ಸೋಮಣ್ಣ ಅವರ ಕೃಪೆಯಿಂದ ಪರಿಪೂರ್ಣವಾಗುತ್ತಿದೆ. ಈಗಿನ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಪ್ರತಾಪ್ ಸಿಂಹ ಪೋಸ್ಟ್ ಹಾಕಿದ್ದಾರೆ.
8 ರೈಲುಗಳ ಪಟ್ಟಿ
* 16021/ 16022 ಎಂಜಿಆರ್ ಚೆನ್ನೈ ಸೆಂಟ್ರಲ್- ಮೈಸೂರು ಕಾವೇರಿ ಎಕ್ಸ್‌ಪ್ರೆಸ್
* 20623/ 20624 ಮೈಸೂರು-ಕೆಎಸ್ಆರ್ ಬೆಂಗಳೂರು ಸಿಟಿ ಮಾಲ್ಗುಡಿ ಎಕ್ಸ್‌ಪ್ರೆಸ್
* 12785/ 12786 ಕಾಚಿಗುಡ-ಮೈಸೂರು ಎಕ್ಸ್‌ಪ್ರೆಸ್
* 12609/ 12610 ಎಂಜಿಆರ್ ಚೆನ್ನೈ ಸೆಂಟ್ರಲ್- ಮೈಸೂರು ಎಕ್ಸ್‌ಪ್ರೆಸ್
* 06525/ 06526 ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು
* 06559/ 06560 ಕೆಎಸ್ಆರ್ ಬೆಂಗಳೂರು- ಮೈಸೂರು ಮೆಮು
* 06255/ 06256 ಕೆಎಸ್ಆರ್ ಬೆಂಗಳೂರು- ಮೈಸೂರು ಮೆಮು
* 06257/ 06258 ಕೆಎಸ್ಆರ್ ಬೆಂಗಳೂರು- ಮೈಸೂರು ಮೆಮು












Click it and Unblock the Notifications