ಮುಂಬೈ ಗ್ಯಾಂಗ್ ರೇಪ್ ಆರೋಪಿ ನಾಪತ್ತೆ ಆಗಿಲ್ಲ
ಮುಂಬೈ, ಸೆ.26: ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿರುವ ಆರೋಪಿ ಅಫ್ಜಲ್ ಉಸ್ಮಾನಿ ಮುಂಬೈ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡ ಘಟನೆ ಬಳಿಕ ಮುಂಬೈ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಗಳ ಪೈಕಿ ಒಬ್ಬ ಗುರುವಾರ ಪರಾರಿಯಾಗಿದ್ದಾನೆ ಎಂದು ವರದಿಯಾಗಿತ್ತು.
ಸಮಯ 4.15: ಸಿರಾಜ್ ಜೈಲಿನಲ್ಲೇ ಇದ್ದಾನೆ. ಆತ ನಾಪತ್ತೆಯಾಗಿಲ್ಲ ಎಂದು ಥಾಣೆ ಪೊಲೀಸ್ ಠಾಣೆಯ ಹೆಚ್ಚುವರಿ ಡಿಜಿ ಸ್ಪಷ್ಟಪಡಿಸಿದ್ದಾರೆ. ಸಿರಾಜ್ ನಾಪತ್ತೆ ಬಗ್ಗೆ ಮೂಡಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಸಿರಾಜ್ ರೆಹಮಾನ್ ಖಾನ್, ಸಲೀಂ ಅನ್ಸಾರಿ, ವಿಜಯ್ ಜಾಧವ್, ಕಾಸಿಂ ಬೆಂಗಾಳಿ ಹಾಗೂ ಒಬ್ಬ ಅಪ್ರಾಪ್ತ ವಯಸ್ಕ ಈ ಪ್ರಕರಣದ ಆರೋಪಿಗಳಾಗಿ ಜೈಲಿನಲ್ಲಿದ್ದಾರೆ.
ಈ ಮುಂಚಿನ ವರದಿ : ಅತ್ಯಾಚಾರ ಪ್ರಕರಣದ ಆರೋಪಿ ಸಿರಾಜ್ ರೆಹಮಾನ್ ಖಾನ್ ಎಂಬ ವ್ಯಕ್ತಿ ಥಾಣೆ ಜೈಲಿನಿಂದ ತಪ್ಪಿಸಿಕೊಂಡಿದ್ದು ಇನ್ನೂ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ನಾಳೆಯೊಳಗೆ ಸ್ಪಷ್ಟನೆ ನೀಡುವಂತೆ ಮುಂಬೈ ಪೊಲೀಸರಿಗೆ ಸೆಷನ್ಸ್ ಕೋರ್ಟ್ ಆದೇಶಿಸಿದೆ.

ಆಗಸ್ಟ್ 22ರಂದು ಮುಂಬೈನ ಶಕ್ತಿ ಮಿಲ್ ಬಳಿ ಪತ್ರಿಕಾ ಛಾಯಾಗ್ರಾಹಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಯುವತಿಯ ಸ್ನೇಹಿತರು ಮತ್ತು ಕುಟುಂಬದವರು ಎನ್.ಎಂ ಜೋಶಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದರು. ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಸ್ ಲೋಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಪ್ರಕರಣ ನಡೆದ 77 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರಿಗೆ ಎಲ್ಲರೂ ಬಹುಪರಾಕ್ ಹೇಳಿದ್ದರು. ನಾಲ್ವರು ಆರೋಪಿಗಳ ವಿರುದ್ಧ ಚಾರ್ಚ್ ಶೀಟ್ ಕೂಡಾ ಸಲ್ಲಿಸಲಾಗಿತ್ತು. ಆದರೆ, ಈಗ ವಾರದೊಳಗೆ ಇಬ್ಬರು ಪ್ರಮುಖ ಆರೋಪಿಗಳು ತಪ್ಪಿಸಿಕೊಂಡಿರುವುದು ಆತಂಕಕಾರಿಯಾಗಿದೆ ಎನ್ನಲಾಗಿತ್ತು. ಆದರೆ, ಈಗ ಸಿರಾಜ್ ನಾಪತ್ತೆಯಾಗಿಲ್ಲ ಸುದ್ದಿ ಬಂದಿದ್ದು ಜನತೆ ನಿರಾಂತಕಗೊಂಡಿದ್ದಾರೆ..












Click it and Unblock the Notifications